ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪ್ರಮುಖ ಮುಖವಾಗಿದ್ದವರು ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್. ಅವರು ಸುದೀರ್ಘ ಮೂರು ದಿನಗಳ ಸಂಧಾನ ಪ್ರಕ್ರಿಯೆಯ ನಂತರ ಗುರುವಾರ ತಡರಾತ್ರಿ ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಈ ಸಂಧಾನ ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು ಕಾಂಗ್ರೆಸ್ ಸಂಸದ ವಿವೇಕ್ ತಂಖಾ ಮತ್ತು ಲಡಾಖ್‌ನ ನಾಗರಿಕ ಸಮಾಜದ ನಾಯಕರು.
ಜುಲೈ 20ರಂದು ವಿದ್ಯಾರ್ಥಿಗಳು ಸಂಸತ್ತಿನತ್ತ ನಡೆಸಿದ ಮೆರವಣಿಗೆಯ ವೇಳೆ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿ ಭೀಕರ ದೌರ್ಜನ್ಯ ಎಸಗಿದರು. ಪರಿಣಾಮ, ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿತು. ಈ ಬೆನ್ನಲ್ಲೇ, ಪ್ರತಿಭಟನಾಕಾರರೊಂದಿಗೆ ಮಾತುಕತೆಗೆ ಮೋದಿ ಸರ್ಕಾರ ಮುಂದಾಯಿತು. ವಾಂಗ್ಚುಕ್ ಅವರೊಂದಿಗೂ ಸಂವಹನ ಸಾಧಿಸಲು ಪ್ರಯತ್ನ ಆರಂಭಿಸಿತು. ವಾಂಗ್ಚುಕ್ ಅವರೊಂದಿಗೆ ಮಾತುಕತೆ ನಡೆಸುವ ಕೇಂದ್ರ ಸರ್ಕಾರಕ್ಕೆ ವಾಂಗ್ಚುಕ್ ಅವರ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದ, ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಕಾಂಗ್ರೆಸ್ ಸಂಸದ, ಹಿರಿಯ ವಕೀಲ ವಿವೇಕ್ ತಂಖಾ ಅವರು ಸರ್ಕಾರಕ್ಕೆ ನೆರವು ನೀಡಿದರು.
ವಾಂಗ್ಚುಕ್ ಅವರು ನಿರಂತರ ಉಪವಾಸ ಸತ್ಯಾಗ್ರಹದಿಂದಾಗಿ 11 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದರು. ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸುತ್ತಿತ್ತು. ಅವರ ಜೀವ ರಕ್ಷಿಸುವುದು ದೇಶಕ್ಕೆ ಮುಖ್ಯವಾಗಿತ್ತು. ಆದ್ದರಿಂದ, ಈ ಮಧ್ಯಸ್ಥಿಕೆ ವಹಿಸಿದ್ದಾಗಿ ತಂಖಾ ತಿಳಿಸಿದ್ದಾರೆ.
ಜುಲೈ 21ರಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಅವರನ್ನು ಗುರ್‌ಗಾಂವ್‌ನ ಮೇದಾಂತ ಆಸ್ಪತ್ರೆಯಲ್ಲಿ ಭೇಟಿಯಾದರು. ವಾಂಗ್ಚುಕ್ ಎತ್ತಿರುವ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿ ಉಪವಾಸ ಅಂತ್ಯಗೊಳಿಸುವಂತೆ ವಿನಂತಿಸಿದರು. ತದನಂತರ ಜುಲೈ 22ರಂದು ವಿವೇಕ್ ತಂಖಾ, ಟಿಎಂಸಿಯ ಸಾಗರಿಕಾ ಘೋಷ್ ಹಾಗೂ ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಒಳಗೊಂಡ ಸಂಸದರ ನಿಯೋಗವು ವಾಂಗ್ಚುಕ್ ಅವರನ್ನು ಭೇಟಿಯಾಗಿ, “ಈ ಹೋರಾಟವು ಈಗ ರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ. ದೇಶಕ್ಕೆ ಮತ್ತು ಯುವಜನತೆಗೆ ನಿಮ್ಮ ಸಕ್ರಿಯ ನಾಯಕತ್ವದ ಅಗತ್ಯವಿದೆ” ಎಂದು ಮನವಿ ಮಾಡಿದರು.
ಮತ್ತೊಂದೆಡೆ, ಲಡಾಖ್‌ನಿಂದ ಆಗಮಿಸಿದ್ದ ನಾಗರಿಕ ಸಮಾಜದ ಪ್ರತಿನಿಧಿಗಳು ಜುಲೈ 23ರಂದು ವಾಂಗ್ಚುಕ್ ಅವರನ್ನು ಭೇಟಿಯಾದರು. ಲಡಾಖ್ ಪ್ರಾಂತ್ಯಕ್ಕೆ ಸಂಬಂಧಿಸಿದ ಸ್ವಾಯತ್ತತೆ ಮತ್ತು ಇತರ ಪ್ರಮುಖ ಹಕ್ಕುಗಳ ಕುರಿತು ಸರ್ಕಾರದೊಂದಿಗೆ ಮುಂದಿನ ಹಂತದ ಮಾತುಕತೆ ನಡೆಸಲು ವಾಂಗ್ಚುಕ್ ಅವರ ನಾಯಕತ್ವ ಅಗತ್ಯವಿದೆ ಎಂದು ತಿಳಿಸಿ, ಸತ್ಯಾಗ್ರಹ ಹಿಂಪಡೆಯುವಂತೆ ಒತ್ತಾಯಿಸಿದರು.
ಈ ನಡುವೆ, ಜುಲೈ 23ರ ತಡರಾತ್ರಿ ಕೇಂದ್ರ ಸಚಿವ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಸರ್ಕಾರದಿಂದ ಲಿಖಿತ ಭರವಸೆ ಪತ್ರವನ್ನು ತಂದು ವಾಂಗ್ಚುಕ್ ಅವರಿಗೆ ನೀಡಿದರು.
ಆ ಪತ್ರದಲ್ಲಿ ಸರ್ಕಾರದ ನೀಡಿದ್ದ ಭರವಸೆಗಳು;
1. ಜುಲೈ 20 ರ ಸಂಸತ್ ಚಲೋ ಮತ್ತು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯಾವುದೇ ಯುವಜನರ ವಿರುದ್ಧ ಪ್ರತೀಕಾರದ ಅಥವಾ ದಂಡನಾತ್ಮಕ ಕಾನೂನು ಕ್ರಮ ಜರುಗಿಸುವುದಿಲ್ಲ.
2. ನೀಟ್ ಪರೀಕ್ಷಾ ಅಕ್ರಮದ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು.
3. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು.
ಈ ಲಿಖಿತ ಆಶ್ವಾಸನೆಯನ್ನು ಪಡೆದ ನಂತರ ಸೋನಮ್ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ಸಂಪೂರ್ಣ ಚೇತರಿಕೆಯಾಗುವವರೆಗೆ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ. ವಾಂಗ್ಚುಕ್ ಅವರ ಉಪವಾಸ ಅಂತ್ಯಗೊಂಡಿದ್ದರೂ, ಪರೀಕ್ಷಾ ಅಕ್ರಮಗಳ ವಿರುದ್ಧ ಯುವಜನರ ಹೋರಾಟ ಮುಂದುವರಿಯಲಿದೆ ಎಂದು ಸಂಸದ ವಿವೇಕ್ ತಂಖಾ ಸ್ಪಷ್ಟಪಡಿಸಿದ್ದಾರೆ.





