ಸಾಧನೆ ಮಾಡಲು ಹಣಕಾಸಿನ ಅಡಚಣೆ ಅಥವಾ ಸೌಲಭ್ಯಗಳ ಕೊರತೆ ಯಾವತ್ತಿಗೂ ಅಡ್ಡಿಯಾಗುವುದಿಲ್ಲ ಎಂದು ಕುಮಟಾದ ವಿದ್ಯಾರ್ಥಿನಿಯೊಬ್ಬರು ಸಾಬೀತುಪಡಿಸಿದ್ದಾರೆ. ಕ್ರೀಡೆಯಲ್ಲಿ ಬೆಳೆಯಬೇಕು ಎಂಬ ಛಲವೊಂದೇ ಇದ್ದರೆ ಎಂತಹ ಕಷ್ಟವನ್ನೂ ಎದುರಿಸಿ ಗೆಲ್ಲಬಹುದು ಎಂಬುದಕ್ಕೆ ತಾಲೂಕಿನ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ದಿವ್ಯಾ ಸಿ. ನಾಯ್ಕ್ ಉತ್ತಮ ಉದಾಹರಣೆಯಾಗಿದ್ದಾರೆ.
ಕಳೆದ ವರ್ಷ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ದಿವ್ಯಾ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ವಿಶೇಷವೆಂದರೆ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಮಗೆ ಅಗತ್ಯವಿದ್ದ ಗುಣಮಟ್ಟದ ದುಬಾರಿ ಪೋಲ್ ಅವರ ಬಳಿ ಇರಲಿಲ್ಲ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ರೀಲ್ಸ್‌ಗಾಗಿ ಅಪಾಯಕಾರಿ ವಾಹನ ಚಾಲನೆ; ತೂಫಾನ್ ಕ್ರೂಸರ್ ಚಾಲಕನ ವಿರುದ್ಧ ಪ್ರಕರಣ ದಾಖಲು
ಆದರೂ ಎದೆಗುಂದದ ಅವರು, ಬಿದಿರಿನ ಕೋಲನ್ನೇ ಬಳಸಿ ಅಭ್ಯಾಸ ನಡೆಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಗೆದ್ದು ಬೀಗಿದ್ದರು. ಅವರ ಈ ಅದ್ಭುತ ಪ್ರತಿಭೆ ಹಾಗೂ ಬದ್ಧತೆ ಎಲ್ಲರ ಪ್ರಶಂಸೆಗೆ ಕಾರಣವಾಗಿತ್ತು.
ವಿದ್ಯಾರ್ಥಿನಿಯ ಈ ಪರಿಸ್ಥಿತಿಯನ್ನು ಅರಿತ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು, ಎಂ.ಎನ್. ಕೆಮಿಕಲ್ಸ್ ಸಂಸ್ಥೆಯ ಮಾಲೀಕರಾದ ನವೀನ್ ಪಾಟೀಲ್ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ವಿಚಾರ ತಿಳಿದ ಕೂಡಲೇ ಸಕಾರ ಸ್ಪಂದನೆ ನೀಡಿದ ನವೀನ್ ಪಾಟೀಲ್, ಸರಿಸುಮಾರು 86 ಸಾವಿರ ರೂಪಾಯಿ ಮೌಲ್ಯದ ಎರಡು ಅತ್ಯಾಧುನಿಕ ಪೋಲ್ವಾಲ್ಟ್ ಪೋಲ್‌ಗಳನ್ನು ವಿದೇಶದಿಂದ ಆಮದು ಮಾಡಿಸಿ ವಿದ್ಯಾರ್ಥಿನಿಗೆ ತಲುಪಿಸಿದ್ದಾರೆ.
ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಂ.ಎನ್. ಕೆಮಿಕಲ್ಸ್ ಸಂಸ್ಥೆಯ ಮಾಲೀಕರ ಪುತ್ರ ನಿತೀನ್ ಪಾಟೀಲ್ ಅವರ ಸಮ್ಮುಖದಲ್ಲಿ ಕು. ದಿವ್ಯಾ ಸಿ. ನಾಯ್ಕ್ ಅವರಿಗೆ ಪೋಲ್ವಾಲ್ಟ್ ಪೋಲ್‌ಗಳನ್ನು ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಕು. ದಿವ್ಯಾ ಅವರು ಇನ್ನಷ್ಟು ಉತ್ತುಂಗಕ್ಕೆ ಏರಿ ಸಾಧನೆ ಮಾಡಲಿ ಎಂದು ಜಿಲ್ಲೆಯ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ





