ಗುಜರಾತ್ನ ಬನಸ್ಕಾಂತ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಕಂಡ ಏಕೈಕ ಸ್ಥಾನವಾಗಿದೆ.
ಗುಜರಾತ್ನ ಒಟ್ಟು 26ರಲ್ಲಿ ಕಾಂಗ್ರೆಸ್ ಇದೀಗ ಒಂದರಲ್ಲಿ ಗೆಲುವು ಸಾಧಿಸಿ ಖಾತೆ ತೆರೆದಿದೆ. 2009ರ ಲೋಕಸಭಾ ಚುನಾವಣೆಯ ನಂತರ ಗುಜರಾತ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು ಗೆದ್ದಿರಲಿಲ್ಲ.
ಗುಜರಾತ್ನ ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಗೆನಿಬೆನ್ ಠಾಕೂರ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರೇಖಾ ಚೌಧರಿ ವಿರುದ್ಧ ಸ್ಪರ್ಧೆ ಮಾಡಿ 30,000 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ರಾಜ್ಯದ ಎಲ್ಲ 26 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿತ್ತು.
ಗುಜರಾತ್ನಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತೋರಿಸಿದೆ ಆದರೆ ಅಂತಿಮವಾಗಿ ಠಾಕೂರ್ ಅವರ ಪಕ್ಷದಿಂದ ಏಕೈಕ ವಿಜೇತರಾಗಿ ಹೊರಹೊಮ್ಮಿದರು.
ಬನಸ್ಕಾಂತ ಬಿಜೆಪಿಯ ಭದ್ರಕೋಟೆಯಾಗಿದೆ. 2019ರಲ್ಲಿ ಬಿಜೆಪಿಯ ಪರ್ಬತ್ಭಾಯ್ ಪಟೇಲ್ 3,68,000 ಮತಗಳ ಅಂತರದಿಂದ ಕಾಂಗ್ರೆಸ್ನ ಪಾರ್ತಿ ಭಟೋಲ್ ಅವರನ್ನು ಸೋಲಿಸಿ ಕ್ಷೇತ್ರವನ್ನು ಗೆದ್ದರು. 2014ರ ಚುನಾವಣೆಯಲ್ಲೂ ಬಿಜೆಪಿ ಗೆದ್ದಿತ್ತು.
ಈ ಸುದ್ದಿ ಓದಿದ್ದೀರಾ? 10 ರಾಜ್ಯಗಳಲ್ಲಿ ಬಿಜೆಪಿ ‘ಶೂನ್ಯ’ ಸಾಧನೆ
2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಕಾಂಗ್ರೆಸ್ ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ. 2009ರಲ್ಲಿ ಗುಜರಾತ್ನಲ್ಲಿ 26 ಸ್ಥಾನಗಳಲ್ಲಿ ಕಾಂಗ್ರೆಸ್ 11 ಮತ್ತು ಬಿಜೆಪಿ 14 ಸ್ಥಾನಗಳನ್ನು ಗೆದ್ದಿತ್ತು.
ಗೆನಿಬೆನ್ ಠಾಕೋರ್ ಪ್ರಸ್ತುತ ಬನಸ್ಕಾಂತ ಜಿಲ್ಲೆಯ ವಾವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಗೆನಿಬೆನ್ ಅವರು ತಮ್ಮ ಗೆಲುವಿನೊಂದಿಗೆ ಗುಜರಾತ್ನಲ್ಲಿ ಬಿಜೆಪಿಯ ಭದ್ರ ಕೋಟೆಯನ್ನು ಭೇಧಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು ರಾಜ್ಯದ ಕಾಂಗ್ರೆಸ್ನಲ್ಲಿ ದೊಡ್ಡ ನಾಯಕಿಯಾಗಿ ಹೊರಹೊಮ್ಮಿದ್ದಾರೆ.