ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಿದ್ದು, ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗದ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಸದ್ಯ ಕಾಂಗ್ರೆಸ್ ನಿಯೋಗವನ್ನು ಭೇಟಿಯಾಗಿ ಮಾತನಾಡಲು ಚುನಾವಣಾ ಆಯೋಗ ಒಪ್ಪಿಕೊಂಡಿದೆ.
ಪ್ರಮಾಣಪತ್ರದಲ್ಲಿ ತೆಲಂಗಾಣದ ಹೈದರಾಬಾದ್‌ನಲ್ಲಿ ದಾಖಲಾಗಿರುವ ಕಾನೂನು ಪ್ರಕರಣವೊಂದರ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಸಲ್ಲಿಸಿದ ಆಕ್ಷೇಪಣೆ ಸಲ್ಲಿಸಿದ್ದರು. ಇದರ ಆಧಾರದಲ್ಲಿ ನಾಮಪತ್ರವನ್ನು ರದ್ದುಗೊಳಿಸಲಾಗಿದೆ. ಆದರೆ ಮೀನಾಕ್ಷಿಅವರು ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಕೇವಲ ನ್ಯಾಯಾಲಯದಿಂದ ಕಾರಣ ಕೇಳುವ ನೋಟಿಸ್ ಬಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? TMC ಒಡಕಿಗೆ ಮಮತಾ ಉತ್ತರಾಧಿಕಾರಿ ‘ಅಭಿಷೇಕ್ ಬ್ಯಾನರ್ಜಿ’ ಪಾತ್ರವೆಷ್ಟು?
ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದಾಗಿರುವುದರಿಂದ, ಬಿಜೆಪಿಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲು ದಾರಿ ಸುಗಮವಾಗಿದೆ.

ಬಿಜೆಪಿಯ ಬೆಂಬಲ ಹೊಂದಿದ್ದ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾನಿ ಅವರಿಗೆ ತಮ್ಮ ನಾಮಪತ್ರದಲ್ಲಿದ್ದ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಲು ಮರುದಿನ ಬೆಳಗ್ಗೆ 11 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಹಾಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿಗೆ ಸಮಯ ಯಾಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.
ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನವದೆಹಲಿಯ ಚುನಾವಣಾ ಆಯೋಗದ (ECI) ಕಚೇರಿ ಮುಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿದೆ. ಹಾಗೆಯೇ ಬೋಪಾಲ್‌ನಲ್ಲಿರುವ ಚುನಾವಣಾ ಆಯೋಗದ ಕಚೇರಿ ಮುಂದೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಪೋಸ್ಟ್ ಮಾಡಿದ್ದಾರೆ. “ದೇಶದ ಪ್ರಜಾಪ್ರಭುತ್ವದಲ್ಲೇ ಹೈಡ್ರಾಮಾ ಇಲ್ಲದ ದಿನವಿದೆಯೇ? ಈಗ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ತೆಲಂಗಾಣದಲ್ಲಿ ಅವರ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣದ ವಿವರಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಕೇವಲ ಒಂದು ಸಣ್ಣ ಪ್ರಕರಣದ ಶೋಕಾಸ್ ನೋಟಿಸ್ ಎಂದು ಕಾಂಗ್ರೆಸ್ ಹೇಳಿಕೊಂಡಿದೆ” ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ, “ಗಮನಿಸಿ: ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲ ಹೊಂದಿದ್ದ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಮಿ ಅವರಿಗೆ ತಮ್ಮ ನಾಮಪತ್ರದಲ್ಲಿದ್ದ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಲು ಮರುದಿನ ಬೆಳಗ್ಗೆ 11 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಇಲ್ಲಿಯೂ ಅದೇ ತತ್ವವನ್ನು ಅನುಸರಿಸಲಾಗುತ್ತದೆಯೇ? ಚುನಾವಣಾ ಆಯೋಗ ತನಗೆ ಸಂವಿಧಾನಬದ್ಧವಾಗಿ ನೀಡಿರುವ ಜವಾಬ್ದಾರಿಯಂತೆ ಎಲ್ಲರೊಂದಿಗೆ ಸಮಾನವಾಗಿ ನಡೆದುಕೊಂಡು ‘ತಟಸ್ಥ ಅಂಪೈರ್’ ಆಗಿ ಕಾರ್ಯನಿರ್ವಹಿಸುತ್ತದೆಯೇ” ಎಂದು ಆಯೋಗವನ್ನು ನೇರವಾಗಿ ಪ್ರಶ್ನಿಸಿದ್ದಾರೆ.





