TMC ಒಡಕಿಗೆ ಮಮತಾ ಉತ್ತರಾಧಿಕಾರಿ ‘ಅಭಿಷೇಕ್ ಬ್ಯಾನರ್ಜಿ’ ಪಾತ್ರವೆಷ್ಟು?

Date:

ಮಮತಾ ಅವರು ಪಕ್ಷವನ್ನು ಕಟ್ಟಿದ ರೀತಿಗೂ ಅಭಿಷೇಕ್ ಪಕ್ಷವನ್ನು ಕಟ್ಟಲು ಯತ್ನಿಸಿದ ರೀತಿಗೂ ವೈರುಧ್ಯಗಳಿವೆ. ಯಾವ ಕಾರಣಕ್ಕೆ ಸುವೇಂದು ಅಧಿಕಾರಿ ಪಕ್ಷವನ್ನು ತೊರೆದರೋ, ಅದೇ ಕಾರಣಗಳನ್ನು ಈಗ ಬಂಡಾಯಗಾರರು ಮುಂದಿಡುತ್ತಿದ್ದಾರೆ.

“ತೃಣಮೂಲ ಕಾಂಗ್ರೆಸ್‌ನೊಳಗೆ ನಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸಲು ಯಾವುದೇ ಅವಕಾಶವಿರಲಿಲ್ಲ. ಆದರೆ, ಈಗ ಸಮಯ ಬಂದಿದೆ. ಭಯದಂತೆ ಧೈರ್ಯವೂ ಸಾಂಕ್ರಾಮಿಕ. ಆ ಧೈರ್ಯವು 1,435 ಕಿಲೋಮೀಟರ್ ದೂರವನ್ನು ಕ್ರಮಿಸಿ ಕೋಲ್ಕತ್ತಾದಿಂದ ದೆಹಲಿಗೆ ತಲುಪಿದೆ ಎಂಬ ವಿಶ್ವಾಸ ನನಗಿದೆ. ಆದ್ದರಿಂದ ಕಾದು ನೋಡೋಣ” ಎಂದಿದ್ದಾರೆ ಟಿಎಂಸಿಯ ಉಚ್ಚಾಟಿತ ಶಾಸಕ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ.

- Advertisement -

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಇಬ್ಭಾಗವಾಗಿರುವ ಟಿಎಂಸಿ ಮತ್ತು ಅದರ ರಾಜಕಾರಣದಲ್ಲಿ ಬಹುಮುಖ್ಯ ಪಾತ್ರವಹಿಸಿರುವ ರಿತಬ್ರತ ಸೇರಿದಂತೆ ಯಾವುದೇ ಬಂಡಾಯ ಶಾಸಕರು ಬೊಟ್ಟು ಮಾಡುವುದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರತ್ತ. ‘ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಏಕೆ ತಲೆದೋರಿತು?’ ಎಂದು ರಿತಬ್ರತರನ್ನು ಕೇಳಿದರೆ, “ಟಿಎಂಸಿ ಅಧಿಕಾರದಲ್ಲಿದ್ದಾಗ ನಾವು ಬಾಯಿ ತೆರೆದಿದ್ದರೆ ನಮ್ಮ ಕೊಲೆಯೇ ನಡೆಯುತ್ತಿತ್ತು” ಎಂದು ಮರುತ್ತರ ನೀಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

‘ಪಶ್ಚಿಮ ಬಂಗಾಳದ ಇಂದಿನ ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಇದೆ ಎಂಬ ಆರೋಪಗಳಿವೆ’ ಎನ್ನುವುದನ್ನು ಅಲ್ಲಗಳೆಯುವ ರಿತಬ್ರತ, “ಚುನಾವಣೆ ನಂತರದ ಹಿಂಸಾಚಾರದ ಸಮಯದಲ್ಲಿ, ನಮ್ಮೊಂದಿಗೆ ಇರುವ 61 ಶಾಸಕರಲ್ಲಿ ಇಬ್ಬರ ಮೇಲೆ ಬಿಜೆಪಿಯಿಂದ ಹಲ್ಲೆಯಾಗಿದೆ. ಸಂದೀಪ್ ಸಹಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ನಮಗೆ ಬಿಜೆಪಿಯ ಸಹಾಯವಿದ್ದರೆ, ನಮ್ಮ ಶಾಸಕರ ಮೇಲೆ ಏಕೆ ದಾಳಿಯಾಗುತ್ತಿತ್ತು?” ಎಂದು ಪ್ರಶ್ನಿಸಿದ್ದಾರೆ.

Advertisements

ಚುನಾವಣೋತ್ತರವಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಛಿದ್ರವಾಗುತ್ತಿರುವ ರೀತಿಯನ್ನು ನೋಡಿದರೆ ಇದರ ಹಿಂದೆ ಬಿಜೆಪಿ ಆಟವಾಡುತ್ತಿದೆ ಎಂದು ಅನುಮಾನ ಹುಟ್ಟದೇ ಇರುವುದಿಲ್ಲ. ಫಲಿತಾಂಶ ಹೊರಬಿದ್ದ ಬಳಿಕ ಟಿಎಂಸಿಯ ಹೈಕಮಾಂಡ್ ಪಕ್ಷದ ಹಿರಿಯ ನಾಯಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಲು ಸ್ಪೀಕರ್ ಅವರಿಗೆ ಪತ್ರ ಸಲ್ಲಿಸಿತು. ಆದರೆ, ಈ ಪತ್ರದಲ್ಲಿ ತಮ್ಮ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ರಿತಬ್ರತಾ ಬ್ಯಾನರ್ಜಿ ಮತ್ತು ಅವರ ಬೆಂಬಲಿಗ ಶಾಸಕರು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ದೂರು ನೀಡಿದರು. ಈ ಆಂತರಿಕ ಕಾದಾಟ ತಾರಕಕ್ಕೇರಿದಾಗ, ಟಿಎಂಸಿ ಪಕ್ಷವು ರಿತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಉಚ್ಚಾಟನೆಯ ಬೆನ್ನಲ್ಲೇ ರಿತಬ್ರತಾ ಅವರು ಟಿಎಂಸಿಯ ಒಟ್ಟು 80 ಶಾಸಕರ ಪೈಕಿ 58 ಶಾಸಕರು (ಮೂರನೇ ಎರಡರಷ್ಟು ಬಹುಮತ) ತಮ್ಮ ಕಡೆಗೆ ಇದ್ದಾರೆಂದು ಸ್ಪೀಕರ್ ಮುಂದೆ ಹೋದರು. ಪಕ್ಷಾಂತರ ತಡೆ ಕಾಯ್ದೆಯ ಹೊಡೆತದಿಂದ ತಪ್ಪಿಸಿಕೊಳ್ಳಬೇಕಾದರೆ ಈ ‘ಮೂರನೇ ಎರಡರಷ್ಟು’ ಸಂಖ್ಯಾಬಲ ಅಗತ್ಯವಿತ್ತು. 58 ಶಾಸಕರ ಸಹಿ ಇರುವ ಪತ್ರವನ್ನು ಪರಿಶೀಲಿಸಿದ ಸ್ಪೀಕರ್, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ‘ಅಧಿಕೃತ ಮುಖ್ಯ ವಿರೋಧ ಪಕ್ಷ’ ಎಂದು ಮಾನ್ಯ ಮಾಡಿದ್ದಾರೆ. ಆನಂತರ ನಡೆಯುತ್ತಿರುವ ಬೆಳವಣಿಗೆಗಳು ಟಿಎಂಸಿ ಒಳಗಿನ ನಿಜ ಬಿಕ್ಕಟ್ಟುಗಳನ್ನು ದೇಶದೆದುರು ಅನಾವರಣ ಮಾಡುತ್ತಿವೆ.

ಪಕ್ಷದ ಸರ್ವೊಚ್ಚ ನಾಯಕಿ ಮಮತಾ ಬ್ಯಾನರ್ಜಿಯವರ ಮೇಲೆ ಬಂಡಾಯಗಾರರ ಆಕ್ಷೇಪವೇನೂ ಕಾಣುವುದಿಲ್ಲ. “ನಮ್ಮ ನೇತೃತ್ವದ ಟಿಎಂಸಿಗೆ ಮಮತಾ ಅವರೇ ಸಲಹೆಗಾರರಾಗಬೇಕು” ಎಂಬುದು ಈ ಬಂಡಾಯಗಾರರ ಉತ್ತರ. ಇದು ಉಡಾಫೆ ಅಥವಾ ಗೇಲಿಯಂತೆ ಕಂಡರೂ, ಮಮತಾ ಅವರ ಲೆಗಸಿಯನ್ನು ಅಷ್ಟು ಸುಲಭವಾಗಿ ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯೂ ಬಂಡಾಯಗಾರರಿಗೆ ಇದ್ದಂತೆ ಕಾಣುತ್ತದೆ.

ಪಕ್ಷದೊಳಗೆ ಬಿಕ್ಕಟ್ಟು ಸೃಷ್ಟಿಯಾಗಲು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯೇ ಮುಖ್ಯ ಕಾರಣ ಎನ್ನುವ ರಿತಬ್ರತ ಅವರು, ಅಭಿಷೇಕ್ ಅವರ ಕಾರ್ಯವೈಖರಿಯ ಕುರಿತು ‘ದಿ ಹಿಂದೂ’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

“ಪಕ್ಷದ ಸಾಂಸ್ಥಿಕ ರಚನೆಯು ಸಂಪೂರ್ಣವಾಗಿ ಕುಸಿದಿತ್ತು. ರಾಜಕೀಯೇತರ ವ್ಯಕ್ತಿಗಳು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಸೃಷ್ಟಿಸಿದ ತಳಮಟ್ಟದ ಪಕ್ಷವನ್ನು ಅಭಿಷೇಕ್ ಬ್ಯಾನರ್ಜಿ ಮತ್ತು ಐ-ಪ್ಯಾಕ್ (I-PAC) ಸಂಸ್ಥೆಯ ಕಾರ್ಪೊರೇಟ್ ದಲ್ಲಾಳಿಗಳು ಹೈಜಾಕ್ ಮಾಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ, ನನಗೆ ಲೋಕಸಭಾ ಚುನಾವಣೆಯ ಟಿಕೆಟ್ ನಿರಾಕರಿಸಲಾಯಿತು. ಬದಲಾಗಿ, ಈ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ನನಗೆ ಅಪರಿಚಿತವಾಗಿದ್ದ ಉಲುಬೇರಿಯಾ ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸಲಾಯಿತು. ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಥಳೀಯ ಮುನ್ಸಿಪಲ್ ಚೇರ್ಮನ್ ಅಸಮಾಧಾನಗೊಂಡಿದ್ದರಿಂದ, ಮೊದಲ ಮೂರು ದಿನಗಳ ಕಾಲ ನನ್ನನ್ನು ಉಲುಬೇರಿಯಾ ಕ್ಷೇತ್ರಕ್ಕೆ ಪ್ರವೇಶಿಸಲು ಬಿಡಲಿಲ್ಲ. ಅಲ್ಲಿನ ಚುನಾವಣಾ ಪ್ರಚಾರದ ಸಮಯದಲ್ಲಿ, ತಳಮಟ್ಟದಲ್ಲಿ ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿದೆ ಎಂಬುದು ನನಗೆ ಅರ್ಥವಾಯಿತು” ಎನ್ನುತ್ತಾರೆ ರಿತಬ್ರತ.

ಮುಂದುವರಿದು, “ಮೇ 6 ರಂದು, ಫಲಿತಾಂಶ ಬಂದ ನಂತರ ಎಲ್ಲಾ ಶಾಸಕರ ಸಭೆ ಕರೆಯಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ‘ಅಪ್ರತಿಮ’ ಸಾಧನೆಯ ಕಾರಣಕ್ಕೆ ಎದ್ದು ನಿಂತು ಗೌರವ ಸೂಚಿಸಲು (ಸ್ಟ್ಯಾಂಡಿಂಗ್ ಓವೇಶನ್) ಎಲ್ಲರಿಗೂ ತಿಳಿಸಲಾಯಿತು. ನಾನು ಕೂಡ ಇಷ್ಟವಿಲ್ಲದಿದ್ದರೂ ಎದ್ದು ನಿಂತೆ. ನನ್ನಂತೆ ಇತರ ಹಲವರು ಕೂಡ ಚಪ್ಪಾಳೆ ತಟ್ಟಲು ಹಿಂಜರಿಯುತ್ತಿದ್ದರು. ಭಯ ಹೇಗೆ ಸಾಂಕ್ರಾಮಿಕವೋ, ಧೈರ್ಯವೂ ಅಷ್ಟೇ ಸಾಂಕ್ರಾಮಿಕ. ಬಾಗ್ನಾನ್ ಶಾಸಕ ಅರುಣಾವ ಸೇನ್ ಎದ್ದು ನಿಲ್ಲಲು ನಿರಾಕರಿಸಿದರು. ಈ ಒಂದು ನಡೆ ಇತರರಿಗೂ ಧೈರ್ಯ ತುಂಬಿತು. ಫಲ್ತಾ ವಿಧಾನಸಭಾ ಉಪಚುನಾವಣೆಯಿಂದ ಜಹಾಂಗೀರ್ ಖಾನ್ ಅವರು ಕೊನೆ ಕ್ಷಣದಲ್ಲಿ ಹಿಂದೆ ಸರಿದ ನಂತರ, ಅವರನ್ನು ಏಕೆ ತಕ್ಷಣವೇ ಉಚ್ಚಾಟಿಸಲಿಲ್ಲ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇದರ ಜವಾಬ್ದಾರಿಯನ್ನು ಏಕೆ ಹೊತ್ತುಕೊಳ್ಳಲಿಲ್ಲ ಎಂದು ನಾನು ಪ್ರಶ್ನಿಸಿದ್ದೆ. ಅದಕ್ಕೆ ಉತ್ತರಿಸುವ ಬದಲು, ಪಕ್ಷದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ಪರಿಶೀಲಿಸುವಂತೆ ನನಗೆ ತಿಳಿಸಲಾಯಿತು. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಪಕ್ಷದ ಪತ್ರಕ್ಕೆ ಸಹಿ ಹಾಕಲು ಮೇ 19 ರಂದು ನಾನು ಹೋದಾಗ, ಅಲ್ಲಿ ಅನೇಕ ಶಾಸಕರ ಹೆಸರುಗಳನ್ನು ಬ್ಲಾಕ್ ಅಕ್ಷರಗಳಲ್ಲಿ ಬರೆದಿರುವುದನ್ನು ಕಂಡೆ. ಅವರು ಎಂದಿಗೂ ಸಹಿ ಮಾಡಿರಲಿಲ್ಲ, ಯಾರೋ ಅವರ ಹೆಸರುಗಳನ್ನು ಸುಮ್ಮನೆ ಬರೆದಿದ್ದರು. ಅವರು ನಕಲಿ ದಾಖಲೆಯನ್ನು ಕಳುಹಿಸುತ್ತಿದ್ದರು. ನಾನು ರಾಜ್ಯಸಭೆಯಲ್ಲಿದ್ದ ಕಳೆದ 15 ತಿಂಗಳುಗಳಲ್ಲಿ, ದೆಹಲಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇವಲ ಮೂರು ಬಾರಿ ಮಾತ್ರ ಭೇಟಿಯಾಗಲು ಸಾಧ್ಯವಾಗಿದೆ. ಅದು ಸಹ ಹಾಗೇ ಹೋಗುವಾಗ ಸಿಕ್ಕಿದ್ದಷ್ಟೇ. ಅವರೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಲು ನಾನು ಮಾಡಿದ ವಿನಂತಿಯನ್ನು ನಿರ್ಲಕ್ಷಿಸಲಾಯಿತು. ನಾನು ಜಹಾಂಗೀರ್ ಖಾನ್ ಘಟನೆಯನ್ನು ಪ್ರಸ್ತಾಪಿಸಿದಾಗ ಮಾತ್ರ ನನ್ನನ್ನು ಕರೆಯಲಾಯಿತು. ಆದರೆ ನಿಮ್ಮ ಎಲ್ಲಾ ದೂರುಗಳನ್ನು ಲಿಖಿತವಾಗಿ ನೀಡಿ ಎಂದು ಹೇಳಲಾಯಿತು. ಹಾಗಾಗಿ, ನಾವು ಆ ಪತ್ರವನ್ನು ಪ್ರಶ್ನಿಸಿದರೂ ಏನೂ ಪ್ರಯೋಜನವಾಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು” ಎಂದು ರಿತಬ್ರತಾ ಟೀಕಾಪ್ರಹಾರ ನಡೆಸುತ್ತಾರೆ.

ಈ ಲೇಖನ ಓದಿದ್ದೀರಾ?: ಒಡೆದ ಟಿಎಂಸಿ, ದೂರವಾದ ಡಿಎಂಕೆ: ವಿವಾದಿತ ಕಾಯ್ದೆಗಳ ಜಾರಿಗೆ ಬಿಜೆಪಿ ಪಡೆಯುವುದೇ ‘ಲೋಕ’ಬಲ?

ಮಮತಾ ಬ್ಯಾನರ್ಜಿ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಅಭಿಷೇಕ್, ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಗುರುತಿಸಿಕೊಂಡ ಮೇಲೆ ಟಿಸಿಎಂಯ ಚಹರೆ ಬದಲಾಯಿತು ಎನ್ನುತ್ತವೆ ವರದಿಗಳು. ಮಮತಾ ಅವರು ಅವಿವಾಹಿತರಾದ ಕಾರಣ, ತಮ್ಮ ಸಹೋದರ ಅಮಿತ್ ಬ್ಯಾನರ್ಜಿಯ ಮಗ ಅಭಿಷೇಕ್‌ ಅವರನ್ನು ರಾಜಕೀಯವಾಗಿ ಬೆಳೆಸುತ್ತಾ ಬಂದರು. ಆ ನಂತರ ಪಕ್ಷದೊಳಗೆ ಹಳೆಯ ತಲೆಮಾರು ಮತ್ತು ಹೊಸ ತಲೆಮಾರಿನ ನಡುವೆ ದೊಡ್ಡ ಬಿರುಕು ಉಂಟಾಯಿತು ಎಂದು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಹಲವಾರು ಟಿಎಂಸಿ ನಾಯಕರು, ಮಾಜಿ ಶಾಸಕರು ಮತ್ತು ಅಸಮಾಧಾನಿತರು ಅಭಿಷೇಕ್ ಅವರ ನಾಯಕತ್ವದ ಶೈಲಿ, ಕಾರ್ಪೊರೇಟ್ ಮಾದರಿಯ ರಾಜಕೀಯದಿಂದ ಕುದಿದು ಹೋದರು. ಜೊತೆಗೆ ಅಭಿಷೇಕ್‌ ಎಲ್ಲ ಅಧಿಕಾರವನ್ನು ತನ್ನೊಳಗೆ ಕೇಂದ್ರೀಕರಿಸಿಕೊಳ್ಳಲು ಯತ್ನಿಸಿದ್ದು ದೊಡ್ಡ ಒಡಕಿಗೂ ಕಾರಣವಾಯಿತು. ಚುನಾವಣಾ ಫಲಿತಾಂಶದ ಬೆನ್ನಲ್ಲೇ ಅದು ಸ್ಫೋಟಗೊಂಡಿತು. ಪಕ್ಷವನ್ನು ಕಮಾಂಡ್ ಮಾಡುತ್ತಿದ್ದ ಅಭಿಷೇಕ್‌ ಮತ್ತು ಅವರ ಬೆನ್ನಹಿಂದೆ ಇದ್ದು ಪಕ್ಷಕ್ಕೆ ಸಲಹೆಗಳನ್ನು ನೀಡುತ್ತಿದ್ದ ‘ಐ-ಪ್ಯಾಕ್’ (I-PAC) ಸಂಸ್ಥೆಯ ಹಸ್ತಕ್ಷೇಪಗಳು ಟೀಕೆಗೆ ಗುರಿಯಾದವು.

ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಕೇವಲ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಆಪ್ತ ಸಲಹೆಗಾರರ ಸಣ್ಣ ಗುಂಪಿನ ಸುತ್ತಲೇ ಗಿರಕಿಹೊಡೆಯುತ್ತಿತ್ತು. ಪಕ್ಷದೊಳಗಿನ ಸಾಂಪ್ರದಾಯಿಕ ಸಂವಹನ ವ್ಯವಸ್ಥೆಯು ಕಾಲಕ್ರಮೇಣ ದುರ್ಬಲಗೊಂಡಿತು. ತಳಮಟ್ಟದಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಮಾಜಿ ಹಾಗೂ ಬಂಡಾಯ ನಾಯಕರು ಆರೋಪಿಸಿದ್ದಾರೆ.

ಈ ಕುರಿತು ಅತ್ಯಂತ ಪ್ರಬಲವಾದ ಬಹಿರಂಗ ಟೀಕೆ ಕೃಷ್ಣೇಂದು ನಾರಾಯಣ್ ಚೌಧರಿ ಅವರಿಂದ ಬಂದಿತು. “ಟಿಎಂಸಿ ಪಕ್ಷವನ್ನು ಹಂತಹಂತವಾಗಿ ನಾಶಪಡಿಸಿದ ವ್ಯಕ್ತಿ ಎಂದರೆ ಅದು ಅಭಿಷೇಕ್ ಬ್ಯಾನರ್ಜಿ. ಅವರು ತಮಗೆ ಇಷ್ಟ ಬಂದಂತೆ ನಡೆದುಕೊಂಡರು” ಎನ್ನುತ್ತಾರೆ ಚೌದರಿ. ಮತ್ತೊಬ್ಬ ಟಿಎಂಸಿ ನಾಯಕ ರವೀಂದ್ರನಾಥ್ ಘೋಷ್ ಕೂಡ ಇದೇ ರೀತಿಯ ಆರೋಪ ಮಾಡಿದ್ದು, “ಅಭಿಷೇಕ್ ಪಕ್ಷದೊಳಗೆ ಎರಡನೇ ಶಕ್ತಿ ಕೇಂದ್ರವನ್ನು (ಸೆಕೆಂಡ್ ಪವರ್ ಸೆಂಟರ್) ಸೃಷ್ಟಿಸಿದ್ದರು” ಎಂದು ದೂರಿದ್ದಾರೆ.

ಇನ್ನೂ ಕೆಲವರು ಪಕ್ಷದ ಮೂಲ ಸ್ವರೂಪವೇ ಬದಲಾಗುತ್ತಿದೆ ಎಂದು ವಾದಿಸಿದರು. ಟಿಎಂಸಿ ವಕ್ತಾರ ಕೊಹಿನೂರ್ ಮಜುಂದಾರ್ ಅವರು, “ಹೊಸ ನಾಯಕತ್ವವು ಪಕ್ಷವನ್ನು ಒಂದು ಕಾರ್ಪೊರೇಟ್ ಸಂಸ್ಥೆಯನ್ನಾಗಿ ಪರಿವರ್ತಿಸುತ್ತಿದೆ” ಎಂದು ಆರೋಪಿಸಿದರೆ, ಹಿರಿಯ ನಾಯಕ ಅತಿನ್ ಘೋಷ್ ಅವರು ಮಮತಾ ಬ್ಯಾನರ್ಜಿ ಅವರ ರಾಜಕೀಯ ಪ್ರಯಾಣಕ್ಕೂ ಮತ್ತು ಅಭಿಷೇಕ್ ಅವರ ಪ್ರಯಾಣಕ್ಕೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾ, “ಮಮತಾ ಅವರು ತಳಮಟ್ಟದಿಂದ (ಗ್ರಾಸ್ರೂಟ್ಸ್) ಬೆಳೆದು ಬಂದವರು, ಆದರೆ ಅಭಿಷೇಕ್ ಹೊಸ ತಲೆಮಾರಿನ ನಾಯಕ” ಎಂದು ಮಾರ್ಮಿಕವಾಗಿ ಹೇಳುತ್ತಾರೆ.

‘ಐ ಪ್ಯಾಕ್’ ಹಸ್ತಕ್ಷೇಪ

‘ಐ ಪ್ಯಾಕ್’ ಎಂಬುದು ಚುನಾವಣಾ ತಂತ್ರಗಾರಿಕೆಗಳನ್ನು ರೂಪಿಸುವ ಕಾರ್ಪೊರೇಟ್ ಸಂಸ್ಥೆ. ಇದನ್ನು ಕಟ್ಟಿದ್ದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್. ಈ ಸಂಸ್ಥೆ ಹಲವು ರಾಜ್ಯಗಳಲ್ಲಿ ಹಲವು ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಿಕೊಡುವಲ್ಲಿ ಸಹಾಯ ಮಾಡಿದೆ. 2021ರಲ್ಲಿ ಅಭಿಷೇಕ್ ಬ್ಯಾನರ್ಜಿಯವರು ‘ಐ ಪ್ಯಾಕ್’ನ ಮೊರೆ ಹೋಗುತ್ತಾರೆ. ‘ದೀದಿ ಈ ಮಣ್ಣಿನ ಮಗಳು’, ‘ಮಮತಾ ಎಂದರೆ ಪಶ್ಚಿಮ ಬಂಗಾಳದ ಹೆಮ್ಮೆ’ ಎನ್ನುವ ಪ್ರಚಾರಗಳನ್ನು ಮುನ್ನೆಲೆಗೆ ತಂದು ಆ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ಈ ಸಂಸ್ಥೆ ವಹಿಸಿತ್ತು ಎಂದೇ ವಿಶ್ಲೇಷಿಸಲಾಗಿತ್ತು. 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮೇಲುಗೈ ಸಾಧಿಸಲು ಈ ಸಂಸ್ಥೆಯ ಸಲಹೆಗಳೇ ಕಾರಣವಾಗಿತ್ತು ಎಂದು ನಂಬಲಾಗಿದೆ. ಆದರೆ ಐ ಪ್ಯಾಕ್ ಯಾವ ಮಟ್ಟಕ್ಕೆ ಹಸ್ತಕ್ಷೇಪ ಮಾಡಿತೆಂದರೆ, ಪಕ್ಷದ ಆಂತರಿಕ ವಿಚಾರಗಳನ್ನು ನಿಯಂತ್ರಿಸುವಷ್ಟು ಅದು ಪ್ರಾಬಲ್ಯ ಸಾಧಿಸಿತು. ಐ ಪ್ಯಾಕ್‌ ಸಂಸ್ಥೆ ಟಿಎಂಸಿಯ ಅಂಗಸಂಸ್ಥೆಯಾಗಿ ರೂಪುಗೊಂಡಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿತ್ತು. ಐ ಪ್ಯಾಕ್‌ನ ಮುಖ್ಯಸ್ಥ ಪ್ರತೀಕ್ ಜೈನ್ ಮತ್ತು ನಿರ್ದೇಶಕ ವಿನೇಶ್ ಚಾಂದೆಲ್ ಅವರ ಮೇಲೆ ಜಾರಿ ನಿರ್ದೇಶನಾಲಯ ರೈಡ್ ಮಾಡಿದ್ದನ್ನು ಖಂಡಿಸಿದ್ದ ಟಿಎಂಸಿ, “ಇದು ಚುನಾವಣಾ ಪ್ರಚಾರದ ಮೇಲೆ ಆದ ದಾಳಿ” ಎಂದೇ ಟೀಕಿಸಿತ್ತು. ಇಷ್ಟರ ಮಟ್ಟಿಗೆ ಐ ಪ್ಯಾಕ್ ಮತ್ತು ಅಭಿಜಿತ್ ನೇತೃತ್ವದ ಟಿಎಂಸಿ ಸಂಬಂಧ ಗಾಢವಾಗಿತ್ತು.

ಇತ್ತ ಐ- ಪ್ಯಾಕ್ ಸಂಸ್ಥೆಯ ಸಲಹೆಗಾರರ ಪ್ರಭಾವ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ತಳಮಟ್ಟದ ಕಾರ್ಯಕರ್ತರು ನಿರ್ಲಕ್ಷ್ಯಕ್ಕೊಳಗಾಗುತ್ತಾ ಹೋದರು. ವರದಿಗಳಲ್ಲಿ ಉಲ್ಲೇಖಿಸಲಾದ ಹಿರಿಯ ನಾಯಕರೊಬ್ಬರು, “ಐ-ಪ್ಯಾಕ್ (I-PAC) ಸಲಹೆಗಾರರು ಅಭಿಷೇಕ್ ಬ್ಯಾನರ್ಜಿ ಅವರ ಹೆಸರು ಹೇಳಿ ಇತರ ನಾಯಕರನ್ನು ಬೆದರಿಸುತ್ತಿದ್ದರು” ಎಂದು ಹೇಳಿಕೊಂಡಿದ್ದಾರೆ.

ಐ ಪ್ಯಾಕ್‌ನ ಸಲಹೆಗಾರರು ಚುನಾಯಿತ ಜನಪ್ರತಿನಿಧಿಗಳನ್ನು ತೀರಾ ಕಡಿಮೆ ಸಮಯದ ನೋಟಿಸ್ನಲ್ಲಿ ಸಂಪರ್ಕಿಸಿ ವಿಡಿಯೋಗಳು, ಪ್ರಶಂಸಾಪತ್ರಗಳು ಮತ್ತು ಪ್ರಚಾರ ಸಾಮಗ್ರಿಗಳನ್ನು ಕೇಳುತ್ತಿದ್ದರು. ಇದು ಸಾಂಪ್ರದಾಯಿಕ ರಾಜಕೀಯ ಶೈಲಿಗೆ ಒಗ್ಗಿಕೊಂಡಿದ್ದ ನಾಯಕರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿತ್ತು ಎಂದು ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಸಲಹೆಗಾರರ ಆಧಾರಿತ ಈ ವಿಧಾನವನ್ನು ಬೆಂಬಲಿಸುವವರೂ ಇದ್ದರು. ಇಂತಹ ಪದ್ಧತಿಗಳು ಚುನಾವಣೆ ನಿರ್ವಹಣೆಯನ್ನು ಆಧುನೀಕರಿಸಲು ಮತ್ತು ಸಾಂಸ್ಥಿಕ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿದವು ಎಂದು ಕೆಲವರು ವಾದಿಸುತ್ತಾರೆ. ಆದರೆ ಈ ವ್ಯವಸ್ಥೆಯು ಸ್ಥಳೀಯ ನಾಯಕತ್ವವನ್ನು ದುರ್ಬಲಗೊಳಿಸಿತು ಮತ್ತು ಅನುಭವಿ ರಾಜಕೀಯ ಕಾರ್ಯಕರ್ತರ ಅಧಿಕಾರವನ್ನು ಕುಗ್ಗಿಸಿತು ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಉನ್ನತ ನಾಯಕತ್ವದೊಂದಿಗೆ ಪಕ್ಷದ ಮುಖಂಡರು ನೇರವಾಗಿ ಸಂವಹನ ನಡೆಸುವುದು ದಿನೇ ದಿನೇ ಕಷ್ಟವಾಯಿತು. ಈ ಹಿಂದೆ ಮಮತಾ ಬ್ಯಾನರ್ಜಿ ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಹೊಂದಿದ್ದ ಅನೇಕ ನಾಯಕರು, ಈಗ ಐ ಪ್ಯಾಕ್‌ನ ಹಸ್ತಕ್ಷೇಪಗಳಿಂದ ಕಾಯಬೇಕಾಯಿತು. ಹಿರಿಯ ನಾಯಕರು ಯಾವುದೇ ಪ್ರಶ್ನೆಗಳಿಲ್ಲದೆ ಸೂಚನೆಗಳನ್ನು ಪಾಲಿಸಬೇಕೆಂದು ನಿರೀಕ್ಷಿಸಲಾಗುತ್ತಿತ್ತು ಮತ್ತು ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುತ್ತಿರಲಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

“ನೀವು ಅಭಿಷೇಕ್ ಅವರನ್ನು ಟೀಕಿಸುವಂತಿರಲಿಲ್ಲ” ಎಂದು ರಿತಬ್ರತ ಹೇಳಿಕೊಂಡಿರುವುದು ಇದೇ ಕಾರಣಕ್ಕೆ. ಬಿಜೆಪಿಗೆ ಸೇರಿ ಈಗ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿ ಕೂಡ ಇದೇ ಅಭಿಷೇಕ್ ಬ್ಯಾನರ್ಜಿಯವರೊಂದಿಗೆ ದೀರ್ಘವಾಗಿ ಸೆಣಸಾಡಿದರೆಂದು ‘ದಿ ನ್ಯಾಷನಲ್ ಹೆರಾಲ್ಡ್‌’ನಲ್ಲಿ ಪ್ರಕಟವಾಗಿರುವ ಲೇಖನ ಉಲ್ಲೇಖಿಸುತ್ತದೆ. ಬಿಜೆಪಿ ಸೇರುವ ಮೊದಲು, ಸುವೇಂದು ಅವರು ಟಿಎಂಸಿಯ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದರು. ವಿಶೇಷವಾಗಿ ಪುರ್ಬಾ ಮೇದಿನಿಪುರದಲ್ಲಿ ಪಕ್ಷದ ಸಂಘಟನೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಧಿಕಾರಿ ಮತ್ತು ಅಭಿಷೇಕ್ ನಡುವೆ ತೀವ್ರ ಪೈಪೋಟಿ ಎದ್ದು- ಕೊನೆಗೆ ಅಧಿಕಾರಿಯು ಪಕ್ಷ ತೊರೆಯುವಲ್ಲಿ ಕೊನೆಯಾಯಿತು.

ಪಕ್ಷದೊಳಗೆ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರ ದೊಡ್ಡದಾಗುತ್ತಿದ್ದಂತೆ, ಸುವೇಂದು ಅವರು ತಮ್ಮ ಸ್ವಂತ ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು. ಸಾಂಸ್ಥಿಕ ಬಲವರ್ಧನೆ ಮತ್ತು ಸ್ಥಳೀಯ ಜನ ಬೆಂಬಲವನ್ನು ಗಳಿಸಿದ ಹಳೆಯ ತಲೆಮಾರಿನ ಮಾಸ್ ಲೀಡರ್‌ಗಳನ್ನು ಸುವೇಂದು ಅಧಿಕಾರಿ ಪ್ರತಿನಿಧಿಸಿದರೆ, ಆಧುನಿಕ ಪ್ರಚಾರ ನಿರ್ವಹಣೆ, ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಭಾವಿಸುವುದು ಮತ್ತು ಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದ ಹೊಸ ತಲೆಮಾರನ್ನು ಅಭಿಷೇಕ್ ಪ್ರತಿನಿಧಿಸಿದರು. ಸಾಂಪ್ರದಾಯಿಕ ನಾಯಕರು ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯವರ ಬೆಂಬಲಿಗರು ವಾದಿಸಿದರೆ, ಸ್ಪರ್ಧಾತ್ಮಕವಾಗಿ ಉಳಿಯಲು ಪಕ್ಷಕ್ಕೆ ಸಾಂಸ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಅಭಿಷೇಕ್ ಬೆಂಬಲಿಗರು ಪ್ರತಿಪಾದಿಸಿದರು. ಈ ಭಿನ್ನಾಭಿಪ್ರಾಯಗಳು ಅಂತಿಮವಾಗಿ ಬಗೆಹರಿಸಲಾಗದ ಮಟ್ಟಕ್ಕೆ ತಲುಪಿ, 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಧಿಕಾರಿ ಅವರು ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡರು. ಮುಂದೆ ಈ ರಾಜಕೀಯ ವೈಷಮ್ಯವು ವೈಯಕ್ತಿಕ ಮಟ್ಟಕ್ಕೂ ಇಳಿಯಿತು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಕೂಡಲೇ ಅಭಿಷೇಕ್ ಮೇಲಿನ ಆಕ್ರೋಶ ಸ್ಫೋಟಗೊಂಡಿತು. ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ತಂತ್ರ ಮತ್ತು ಸಲಹೆಗಾರರ ಮೇಲಿನ ಪಕ್ಷದ ಅತಿಯಾದ ಅವಲಂಬನೆಯನ್ನು ಹಿರಿಯ ನಾಯಕರು ಪ್ರಶ್ನಿಸಿದರು. ಅಭಿಷೇಕ್ ಅವರ ಅಧಿಕಾರ ಕೇಂದ್ರೀಕರಣವನ್ನು ದೂಷಿಸಿದರು. ಹಿರಿಯ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, “ಪಕ್ಷದ ನಾಯಕತ್ವವು ತಳಮಟ್ಟದ ಕಾರ್ಯಕರ್ತರಿಂದ ದೂರ ಸರಿದಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುವೇಂದು ಅಧಿಕಾರಿಯವರು ಯಾವ ಟೀಕೆಗಳನ್ನು ಮಾಡಿ, ಪಕ್ಷದಿಂದ ಹೊರಬಂದರೋ ಆ ಟೀಕೆಗಳನ್ನು ಇಂದಿನ ಬಂಡಾಯಗಾರರು ಅನುಮೋದಿಸುತ್ತಿದ್ದಾರೆ. ಅಂತಿಮವಾಗಿ ಇಲ್ಲಿ ಬಲಿಯಾಗುತ್ತಿರುವುದು ಮಾತ್ರ ಟಿಎಂಸಿ. ‘ಈ ಬಿಕ್ಕಟ್ಟನ್ನು ಇಳಿವಯಸ್ಸಿನಲ್ಲಿರುವ ಮಮತಾ ಅವರು ಹೇಗೆ ನಿಭಾಯಿಸುತ್ತಾರೆ?’ ಎಂಬುದರ ಮೇಲೆ ಪಕ್ಷದ ಭವಿಷ್ಯ ನಿಂತಿದೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...