ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಸತ್ ಚಲೋ ಮೆರವಣಿಗೆ ವೇಳೆ ಮೋದಿ ಸರ್ಕಾರ ಮತ್ತು ದೆಹಲಿ ಪೊಲೀಸರು ಹಿಂಸಾತ್ಮಕ ದೌರ್ಜನ್ಯ ಎಸಗಿದ್ದಾರೆ. ಈ ದೌರ್ಜನ್ಯವನ್ನು ಖಂಡಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಪ್ರಧಾನಿ ಮೋದಿ ನಿವಾಸದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮೋದಿ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡದಿದೆ. ಪರೀಕ್ಷಾ ಅಕ್ರಮಗಳು ಮತ್ತು ಸೋಮವಾರ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಸಂಪೂರ್ಣ ಹೊಣೆ ಹೊತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ನಡೆದಿರುವ ಈ ಪೋಲೀಸ್ ದೌರ್ಜನ್ಯವು ಸಂಪೂರ್ಣವಾಗಿ ‘ಭಾರತೀಯತೆಗೆ ವಿರುದ್ಧವಾಗಿದೆ. ಈ ಕೃತ್ಯಕ್ಕಾಗಿ ಪ್ರಧಾನಿ ಮೋದಿ ದೇಶದ ಯುವಸಮುದಾಯದ ಬಳಿ ಕ್ಷಮೆಯಾಚಿಸಬೇಕು. ಪ್ರತಿಭಟನೆ ನಡೆಸುತ್ತಿರುವ ಯುವಕರು ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ನ್ಯೂನತೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಇಡೀ ದೇಶಕ್ಕೆ ತಿಳಿದಿರುವಂತೆ ಪ್ರಸ್ತುತ ಭಾರತೀಯ ಪರೀಕ್ಷಾ ವ್ಯವಸ್ಥೆಯು ಗೆದ್ದಲು ಹಿಡಿದು ಟೊಳ್ಳಾಗಿದೆ” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್ ಮತ್ತು ಆರ್‌ಎಸ್‌ಪಿ ಸಂಸದ ಎನ್. ಕೆ. ಪ್ರೇಮಚಂದ್ರನ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಪ್ರಮುಖ ನಾಯಕರೊಂದಿಗೆ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಸಂಸತ್ತಿನಲ್ಲಿ ತಕ್ಷಣವೇ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಈ ಚರ್ಚೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕೆಂದು ಓಂ ಬಿರ್ಲಾ ಹೇಳಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಸಂಸತ್ತಿನ ಸಭಾಪತಿಯೊಬ್ಬರು ಕಲಾಪದಲ್ಲಿ ವಿಷಯಗಳ ಚರ್ಚೆಗೆ ಸರ್ಕಾರದ ಅನುಮತಿ ಪಡೆಯುವುದು ಪ್ರಜಾಪ್ರಭುತ್ವದ ಅಣಕ ಎಂದಿದ್ದಾರೆ.




