ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚೂಕ್ ಅವರನ್ನು ಪೊಲೀಸ್ ಬಲದಿಂದ ಬಂಧನ ಹಾಗೂ ʼಸಂಸತ್ ಚಲೋʼ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿ ಪ್ರಹಾರ, ಆಶ್ರುವಾಯು ಪ್ರಯೋಗ ಖಂಡಿಸಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮ ಕ್ರಾಂತಿ ಸೇನೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ನೇತ್ರತ್ವದಲ್ಲಿ ಇಲ್ಲಿಯ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿದರು.
ಗ್ರಾಮ ಕ್ರಾಂತಿ ಸೇನೆ ಸಂಸ್ಥಾಪಕ ಸಂದೀಪ ಮುಕಿಂದೆ ಮಾತನಾಡಿ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನೇತ್ರತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಸಂಸತ್ ಚಲೋ ವೇಳೆ ದೆಹಲಿಯ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ, ಆಶ್ರುವಾಯು ಸಿಡಿಸಿದ್ದು ತೀವ್ರ ಖಂಡನೀಯ. ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಪ್ರಧಾನಿ ಮೋದಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಕೇಂದ್ರದ ಯಾರೊಬ್ಬರೂ ಸಚಿವರು ಇಲ್ಲಿಯವರೆಗೆ ಚಕಾರವೆತ್ತಿಲ್ಲ. ಅದನ್ನು ವಿರೋಧಿಸಿ ದೆಹಲಿಯಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ನೆಪದಲ್ಲಿ ಪ್ರತಿಭಟನಾ ಸ್ಥಳದಿಂದ ಹೊತ್ತೊಯ್ದಿರುವ ಕ್ರಮ ಖಂಡನೀಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಹತ್ತಿಕ್ಕುವ ಯಾವುದೇ ಕ್ರಮವನ್ನು ಒಪ್ಪಲಾಗುವುದಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಸಂಸತ್ ಚಲೋ ನಡೆಸುತ್ತಿದ್ದ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಆಶ್ರುವಾಯು ಪ್ರಯೋಗಿಸಲು ಆದೇಶ ನೀಡಿದ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಬಡವರ ಮತ್ತು ಕನ್ನಡ ಮಾಧ್ಯಮ ಮಕ್ಕಳ ಶತ್ರುವಾದ ನೀಟ್ ಪರೀಕ್ಷಾ ಪದ್ಧತಿಯನ್ನು ರದ್ದುಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚೂಕ್ ಅವರನ್ನು ಪೊಲೀಸ್ ಬಲದಿಂದ ಹೊತ್ತೊಯ್ಯಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆಯಾಗಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಧನ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ | ಬರಪೀಡಿತ ಜಿಲ್ಲೆ ಘೋಷಿಸಿ, ಎಕರೆಗೆ ₹50 ಸಾವಿರ ಪರಿಹಾರ ನೀಡಿ : ಜೈಕರವೇ ಆಗ್ರಹ
ಪ್ರತಿಭಟನೆಯಲ್ಲಿ ಪ್ರಮುಖರಾದ ಸುರೇಶ ಮೋರೆ, ಇಕ್ರಾಮೊದ್ದೀನ್ ಖಾದಿವಾಲ, ರವೀಂದ್ರ ಕೋಳಕೂರ್, ಆಕಾಶ ಖಂಡಾಳೆ, ಅಶೋಕ ಶಿಂಧೆ, ಸತೀಷ ಗಾಯಕವಾಡ, ಜೈವಂತ ಸಿಂಗಾರೆ, ಸಾಗರ ರಾಯಗೊಳ, ಸುಮೀತ್ ಖೇಳಗೆ, ರಫಿ ಖುರೇಶಿ, ಕವಿರಾಜ, ಮೊಹ್ಮದ್ ಅರ್ಫಾತ್ ಅಹ್ಮದ್, ಆಕಾಶ ಕಿಣ್ಣಿಕರ್, ಅವಿನಾಶ ಗೋಡಬೋಲೆ, ಅತೀಷ ಗುಪ್ತಾ, ಜೈಭೀಮ್ ಕೋಲೆ, ಓಂಪ್ರಕಾಶ, ಮಡಿವಾಳ, ಪ್ರಫುಲ್ ಗಾಯಕವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.





