ಉತ್ತರದ ಮೂರು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದ್ದರೂ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸರ್ಕಾರ ರಚಿಸಲು ಸಜ್ಜಾಗಿರುವ ಬಿಜೆಪಿಗಿಂತ ಪಕ್ಷವು 9.44 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, ಮತದಾರರು ಪಕ್ಷವನ್ನು ಅಧಿಕಾರಕ್ಕೆ ತರಲಿಲ್ಲ, ಆದರೆ ಬಿಜೆಪಿಗಿಂತ ಹೆಚ್ಚು ಮತಗಳನ್ನು ನೀಡುವ ಮೂಲಕ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ನಾವು ಅಧಿಕಾರದಿಂದ ದೂರ ಇದ್ದೇವೆ, ಆದರೆ ಜನರ ನಂಬಿಕೆ ಮತ್ತು ಪ್ರೀತಿಯಿಂದಲ್ಲ. ನಮ್ಮ ಪಕ್ಷಕ್ಕೆ ಜನರು ಅಧಿಕಾರ ನೀಡದೆ ಇರಬಹುದು, ಆದ್ರೆ ಮನದಾಳದಿಂದ ಮತ ನೀಡಿದ್ದಾರೆ. ಅವರಿಗೆ ತಲೆಬಾಗಿದ್ದೇವೆ, ಕೃತಜ್ಞರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ 49,077,907 ಮತಗಳನ್ನು ಗಳಿಸಿದರೆ, ಬಿಜೆಪಿ 48,133,463 ಮತಗಳನ್ನು ಗಳಿಸಿದೆ. ಬಿಜೆಪಿಯ ರಾಜಕೀಯ ಧ್ರುವೀಕರಣ ಮತ್ತು ದ್ವೇಷದಿಂದ ಕಾಂಗ್ರೆಸ್ ಸೋತಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?
“ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿಲ್ಲದಿದ್ದರೂ, ಸಾರ್ವಜನಿಕರ ಕುಂದುಕೊರತೆಗಳಿಗೆ ಪಕ್ಷ ಸ್ಪಂದಿಸುತ್ತದೆ ಮತ್ತು ಬಿಜೆಪಿಯು ಪ್ರಚಾರ ಮಾಡುತ್ತಿರುವ ಕೋಮುವಾದಿ ರಾಜಕಾರಣದ ವಿರುದ್ಧ ಹೋರಾಡುತ್ತದೆ” ಎಂದು ಅವರು ಹೇಳಿದರು.
“ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಶೇ 46.27, ಕಾಂಗ್ರೆಸ್‌ಗೆ ಶೇ. 42.23, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಶೇ. 48.55, ನಮ್ಮ ಪಕ್ಷಕ್ಕೆ ಶೇ. 40.40, ರಾಜಸ್ಥಾನದಲ್ಲಿ ಶೇ. 41.69 ಕಾಂಗ್ರೆಸ್‌ಗೆ ಶೇ. 39.53 ಮತ ಬಂದಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಸರಾಸರಿ ಶೇ 50ರಷ್ಟು ಮತದಾರರು ನಿರಾಕರಿಸಿರುವುದು ಸ್ಪಷ್ಟ. ನಾವು ಅಧಿಕಾರದಿಂದ ದೂರ ಇದ್ದರೂ, ಜನರ ಬದುಕು ಬವಣೆಗಳ ಬಗ್ಗೆ ಧ್ವನಿಯಾಗುತ್ತೇವೆ. ದ್ವೇಷ ರಾಜಕೀಯದ ವಿರುದ್ಧ ಪ್ರೀತಿ ವಿಶ್ವಾಸದ ರಾಜಕೀಯ ಮುಂದುವರೆಸುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಮತ್ತೆ ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.