ದೆಹಲಿ ವಿವಿಯ ಅಧೀನದ ಕಾಲೇಜಿಗೆ ವಿನಾಯಕ ದಾಮೋದರ್ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ʼಬ್ರಿಟಿಷರ ಬಳಿ ಕ್ಷಮಾಪಣೆಗೆ ಅರ್ಜಿ ಸಲ್ಲಿಸಿದವರನ್ನು ಬಿಜೆಪಿ ವೈಭವೀಕರಿಸುತ್ತಿದೆʼ ಎಂದು ದೆಹಲಿ ವಿವಿಯ ಅಧೀನದ ನಜಾಫ್ ಗಢದ ಕಾಲೇಜಿಗೆ ಸಾವರ್ಕರ್ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಈ ಕುರಿತು ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಮಾತನಾಡಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸಿ, ಬ್ರಿಟಿಷರೊಂದಿಗೆ ಸಹಕರಿಸಿದಾತನನ್ನು ಬಿಜೆಪಿ ಸಮರ್ಥಿಸುತ್ತಿದೆ. ಅನೇಕ ಜನರು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಬ್ರಿಟಿಷರಿಗೆ ಕ್ಷಮಾಪಣಾ ಅರ್ಜಿಗಳನ್ನು ಬರೆದು ಅವರಿಂದ ಪಿಂಚಣಿ ಸ್ವೀಕರಿಸಿದವರನ್ನು ಬಿಜೆಪಿ ಸಮರ್ಥಿಸುತ್ತಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ಡಿಸೆಂಬರ್ 26ರಂದು ನಿಧನರಾದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಹೊಸ ಕಾಲೇಜಿಗೆ ಇಡಬೇಕೆಂದು ಎನ್‌ಎಸ್‌ಯುಐ ಆಗ್ರಹಿಸಿದೆ. ಈ ಕುರಿತು ಎನ್ ಎಸ್ ಯುಐ ರಾಷ್ಟ್ರೀಯ ಅಧ್ಯಕ್ಷರಾದ ವರುಣ್ ಚೌಧರಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಕಾಲೇಜಿಗೆ ಮನಮೋಹನ್ ಸಿಂಗ್ ಅವರ ಹೆಸರಿಡುವಂತೆ ಆಗ್ರಹಿಸಿದ್ದಾರೆ.
ಆತ್ಮೀಯ ನರೇಂದ್ರ ಮೋದಿ ಜೀ, ನೀವು ಸಾವರ್ಕರ್ ಅವರ ಹೆಸರಿನಲ್ಲಿ ಕಾಲೇಜಿಗೆ ಶೀಲಾನ್ಯಾಸ ನೆರವೇರಿಸುವಾಗ, ಹೊಸ ಕಾಲೇಜಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಇಡಬೇಕೆಂದು ಎನ್‌ಎಸ್‌ಯುಐ ಒತ್ತಾಯಿಸುತ್ತದೆ. ಅವರು ಹಲವಾರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ತಂದರು. ಕೇಂದ್ರೀಯ ವಿಶ್ವವಿದ್ಯಾಲಯಕ್ಕೂ ಅವರ ಹೆಸರನ್ನು ಇಡಬೇಕುʼ ಎಂದು ವರುಣ್ ಚೌಧರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.