ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಧೀರ್ ರಂಜನ್ ಚೌಧರಿ ಮಮತಾ ಅವರನ್ನು ಅವಕಾಶವಾದಿ ಎಂದು ಕರೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ರಂಜನ್ ಚೌಧರಿ, ಮಮತಾ ಬ್ಯಾನರ್ಜಿ ಸಹಾಯದೊಂದಿಗೆ ನಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತನ್ನ ಸ್ವಂತ ಬಲದೊಂದಿಗೆ ಹೇಗೆ ಸ್ಪರ್ಧಿಸಬೇಕೆಂದು ಕಾಂಗ್ರೆಸ್‌ಗೆ ಗೊತ್ತಿದೆ. ಬಂಗಾಳದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಟಿಎಂಸಿ ಅಧಿಕಾರಕ್ಕೆ ಬಂದಿದ್ದು ಎಂಬುದನ್ನು ಮಮತಾ ಬ್ಯಾನರ್ಜಿ ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದಿದ್ದಾರೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಅಧೀರ್ ರಂಜನ್ ಚೌಧರಿ ಇಂಡಿಯಾ ಒಕ್ಕೂಟದ ಮಿತ್ರಪಕ್ಷವಾದ ಟಿಎಂಸಿ ವಿರುದ್ಧ ಜ.20 ರಂದು ಟೀಕೆ ವ್ಯಕ್ತಪಡಿಸಿ, ಈ ಹಿಂದೆ ಟಿಎಂಸಿಯನ್ನು ಸೋಲಿಸಿರುವುದಾಗಿ ತಿಳಿಸಿದ್ದರು. ಈ ಹೇಳಿಕೆಯ ನಂತರ ಮೈತ್ರಿಕೂಟ ಬಿರುಕುಗೊಂಡು ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಂಭವವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಟಿಎಂಸಿ ಕೇವಲ ಎರಡು ಕ್ಷೇತ್ರ ಹಂಚಿಕೆ ಮಾಡಿದ್ದಕ್ಕೆ ಜನವರಿ ಮೊದಲ ವಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಅಧೀರ್ ರಂಜನ್, ನಾವು ಕ್ಷೇತ್ರ ಹಂಚಿಕೆಗಾಗಿ ಭಿಕ್ಷೆ ಬೇಡುತ್ತಿಲ್ಲ ಎಂದು ಹೇಳಿದ್ದರು.
ಟಿಎಂಸಿ ಕಾಂಗ್ರೆಸ್‌ನೊಂದಿಗೆ ಇಂಡಿಯಾ ಒಕ್ಕೂಟದ ಭಾಗವಾಗಿದೆ. 2024ರ ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಪರಿಸ್ಥಿತಿಗಳನ್ನು ಗಮನಿಸಿದರೆ ಎರಡೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿಸುವ ಸಾಧ್ಯತೆಯಿದೆ.
ಮೈತ್ರಿ ಪಕ್ಷಗಳ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಮತಾ ಅವರು ತಮಗೆ ತುಂಬಾ ಆಪ್ತರಾಗಿದ್ದು, ಇಂತಹ ಹೇಳಿಕೆಗಳಿಂದ ಯಾವುದೇ ತೊಂದರೆಯುಂಟಾಗುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನಮ್ಮ ನಾಯಕರು ಏನಾದರೂ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಇಂತಹ ವಿಷಯಗಳು ಪ್ರಮುಖವಾಗುವುದಿಲ್ಲ” ಎಂದು ಹೇಳಿದ್ದಾರೆ.
ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಿದರೆ I N D I A ಒಕ್ಕೂಟ ಪಶ್ಚಿಮ ಬಂಗಾಳದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಜಯ ಸಾಧಿಸಬಹುದು. ಹೊಂದಾಣಿಕೆ ಮಾಡದಿದ್ದಲ್ಲಿ ಬಿಜೆಪಿ ಅರ್ಧಕ್ಕೂ ಅಧಿಕ ಸೀಟುಗಳನ್ನು ಸುಲಭವಾಗಿ ತನ್ನದನ್ನಾಗಿಸಿಕೊಳ್ಳಬಹುದು.
ಕೋಮು ಶಕ್ತಿಗಳನ್ನು ಸೋಲಿಸಬೇಕಾದರೆ , ಕೋಮು ವಿರೋಧಿ ಪಕ್ಷಗಳು ಒಂದಾಗಬೇಕು. ತೃಣಮೂಲ ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರುಗಳು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು , ಕೋಮು ಶಕ್ತಿಗಳ ಹುಟ್ಟಡಗಿಸಲಾದರೂ ಒಂದಾಗಬೇಕು.