ಸೂಟ್‌ಕೇಸ್‌ನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ. ಮೃತ ಮಹಿಳೆ ತಮ್ಮ ಕಾರ್ಯಕರ್ತೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ರೋಹ್ಟಕ್‌ನ ಸಂಪ್ಲಾ ಬಸ್ ನಿಲ್ದಾಣದ ಬಳಿ ದೊಡ್ಡ ನೀಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂದು ಸಂಪ್ಲಾ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್‌ಎಫ್‌ಎಲ್ ತಂಡವು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯ ವಯಸ್ಸು 20 ರಿಂದ 22 ವರ್ಷವಿರಬಹುದು ಎಂದು ಹೇಳಲಾಗಿದೆ.
“ಯುವತಿಯನ್ನು ಕೊಲೆ ಮಾಡಿ ಆಕೆಯ ಶವವನ್ನು ರಸ್ತೆಗೆ ಎಸೆದು ಹೋಗಿರುವ ಸಾಧ್ಯತೆ ಇದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆಕೆಯ ಗುರುತನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಸಂಪ್ಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಿಜೇಂದ್ರ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಭರತ್ ಭೂಷಣ್ ಬಾತ್ರಾ ಅವರು ಸಂತ್ರಸ್ತೆಯು ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದಾರೆ. ಆಕೆಯ ಹೆಸರು ಹಿಮಾನಿ ನರ್ವಾಲ್ ಎಂದು ಹೇಳಿದ್ದಾರೆ. ಆಕೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸಕ್ರಿಯವಾಗಿದ್ದರು. ಹರಿಯಾಣ ಚುನಾವಣೆಯಲ್ಲಿ ನರ್ವಾಲ್ ಭೂಪಿಂದರ್ ಹೂಡಾ ಮತ್ತು ದೀಪಿಂದರ್ ಹೂಡಾ ಅವರ ಪರಿವಾಗಿ ಪ್ರಚಾರ ಮಾಡಿದ್ದರು ಎಂದು ಶಾಸಕ ಬಾತ್ರಾ ಹೇಳಿದ್ದಾರೆ.
ಯುವತಿ ಕೊಲೆಯನ್ನು ಕಾಂಗ್ರೆಸ್ ಹರಿಯಾಣ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ ತೀವ್ರವಾಗಿ ಖಂಡಿಸಿದ್ದಾರೆ. “ರೋಹ್ಟಕ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಆಕೆಯ ಆತ್ಮಕ್ಕೆ ಶಾಂತಿ ದೊರೆಯಲಿ. ಆಕೆಯ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ.
“ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆಗೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.