- ಪತ್ರದಲ್ಲಿ ಕಾಯ್ದೆಗೆ ರಾಜ್ಯ ಸರ್ಕಾರಗಳ ಅಭಿಪ್ರಾಯ ಮುಖ್ಯ ಎಂದು ಉಲ್ಲೇಖ
- ರಾಜ್ಯಗಳ ಅಭಿಪ್ರಾಯಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲು ಸೂಚನೆ
ಸಲಿಂಗ ವಿವಾಹ ಕಾಯ್ದೆಯನ್ನು ಜಾರಿ ತರುವ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಹತ್ತು ದಿನಗಳೊಳಗೆ ಸಲಿಂಗ ವಿವಾಹ ಕಾಯ್ದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.
ಕೇಂದ್ರ ಕಾನೂನು ಸಚಿವಾಲಯವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಹತ್ತು ದಿನಗಳ ಒಳಗೆ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವಿನಲ್ಲಿ ಯಾವುದೇ ವಿಳಂಬವಿಲ್ಲದೆ ಸರಿಯಾದ ನಿರ್ಧಾರ ತೆಗೆದುಕೊಳ್ಳತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯಗಳಿಗೆ ಬರೆದ ಪತ್ರದಲ್ಲಿ, “ಮದುವೆ ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿ ನಮೂದು 5ರ ಅಡಿಯಲ್ಲಿ ಬರುತ್ತದೆ, ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಎರಡೂ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಒಳಗೊಂಡಂತೆ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಾಗುವುದು. ಈ ಕಾಯ್ದೆಗೆ ರಾಜ್ಯ ಸರ್ಕಾರಗಳ ಅಭಿಪ್ರಾಯವು ಮುಖ್ಯ” ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಲಿಂಗ ವಿವಾಹ ಮಾನ್ಯತೆ; ವಿಶೇಷ ವಿವಾಹ ಕಾಯ್ದೆ ವ್ಯಾಪ್ತಿಯಲ್ಲಿ ಮಾತ್ರ ವಿಚಾರಣೆ ಎಂದ ಸುಪ್ರೀಂ ಕೋರ್ಟ್
ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸುವ ಮೂಲಕ ನ್ಯಾಯಾಲಯದ ಮುಂದೆ ತನ್ನ ವಿಚಾರಗಳನ್ನು ತಿಳಿಸಲಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ವಿಚಾರವಾಗಿ ಸಮಾಲೋಚನೆ ಮಾಡಲು ಮುಕ್ತವಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಮಂಜೂರಾತಿ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿರೋಧಿಸಿದ ಕೇಂದ್ರವು, “ಹೊಸ ಸಾಮಾಜಿಕ ಸಂಬಂಧವನ್ನು ರಚಿಸುವ ಬಗ್ಗೆ ಸಂಸತ್ತು ಮಾತ್ರ ನಿರ್ಧರಿಸಬಹುದು” ಎಂದು ಮಂಗಳವಾರ ಹೇಳಿತ್ತು.
“ವಿಚಾರಣೆಯಲ್ಲಿ ಹಾಜರಿರುವವರು ರಾಷ್ಟ್ರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಮತ್ತು ಈ ಬಗ್ಗೆ ನಿರ್ಧರಿಸುವ ವ್ಯಾಪ್ತಿ ನ್ಯಾಯಾಲಯಕ್ಕೆ ಬರುತ್ತದೆಯೇ ಎಂದು ಮೊದಲು ಪರಿಶೀಲಿಸಬೇಕು” ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು.
“ಸಾಮಾನ್ಯ ಜನರು ಮತ್ತು ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ವಿಚಾರಣೆ ಮತ್ತು ಫಲಿತಾಂಶ ದೇಶದಲ್ಲಿ ಗಮನಾರ್ಹ ಪರಿಣಾಮ ಉಂಟು ಮಾಡುತ್ತದೆ” ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಕಳೆದ ವರ್ಷ ನವೆಂಬರ್ 25ರಂದು ಇಬ್ಬರು ಸಲಿಂಗಕಾಮಿ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಖಾತ್ರಿ ಪಡಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹಗಳನ್ನು ನೋಂದಾಯಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.