ಕೇರಳವನ್ನು ‘ಮಿನಿ ಪಾಕಿಸ್ತಾನ’ ಎಂದು ಮಹಾರಾಷ್ಟ್ರ ಬಿಜೆಪಿ ಸಚಿವ ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನೆಟ್ಟಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಾಣೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪುರಂದರ್‌ನಲ್ಲಿ ನಡೆದ ‘ಶಿವ ಪ್ರತಾಪ್ ದಿನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಣೆ, “ಕೇರಳ ಮಿನಿ ಪಾಕಿಸ್ತಾನ. ಕೇರಳದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂಸದರಾಗಿ ಸಂಸತ್ತಿಗೆ ಆಯ್ಕೆಯಾಗುವುದಕ್ಕೆ ಇದೇ ನಿಖರ ಕಾರಣ. ಎಲ್ಲ ಭಯೋತ್ಪಾದಕರು ಅವರಿಗೆ ಮತ ನೀಡಿದ್ದಾರೆ” ಎಂದು ಹೇಳಿ, ವಿವಾದ ಸೃಷ್ಟಿಸಿದ್ದಾರೆ.
”ಕೇರಳ ಮಿನಿ ಪಾಕಿಸ್ತಾನವಾಗಿರುವ ಕಾರಣದಿಂದಲೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಅಲ್ಲಿ ಗೆದ್ದಿದ್ದಾರೆ. ಇದು ಸತ್ಯ; ತಮ್ಮೊಂದಿಗೆ ಭಯೋತ್ಪಾದಕರನ್ನು ಕರೆದುಕೊಂಡು ಹೋದ ಬಳಿಕ ಅವರು ಸಂಸದರಾಗಿದ್ದಾರೆ” ಎಂದು ರಾಣೆ ಹೇಳಿದ್ದಾರೆ.
ರಾಣೆ ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಾಟೀಲ್ ಕಿಡಿಕಾರಿದ್ದಾರೆ. ರಾಣೆ ಹೇಳಿಕೆಯ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಣೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
“ನಿತೇಶ್ ರಾಣೆ ಅವರು ಮಹಾರಾಷ್ಟ್ರದಲ್ಲಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದಾಗಿ ಪ್ರಮಾಣ ಮಾಡಿ ಸಚಿವರಾಗಿದ್ದಾರೆ. ಆದರೆ, ಅವರು ಕೇರಳವನ್ನು ಪಾಕಿಸ್ತಾನವೆಂದೂ, ಮತದಾರರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಈ ವ್ಯಕ್ತಿಗೆ ಸಚಿವ ಸಂಪುಟದಲ್ಲಿ ಉಳಿಯಲು ಹಕ್ಕಿದೆಯೇ” ಎಂದು ಅತುಲ್ ಲೋಂಧೆ ಪ್ರಶ್ನಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಮಾಜಿ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಅವರು, ”ಸಚಿವರೊಬ್ಬರು ಕೇರಳವನ್ನು ಪಾಕಿಸ್ತಾನ ಎಂದು ಕರೆಯುತ್ತಿರುವುದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು? ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಮಹಾಯುತಿ ಸರ್ಕಾರದ ಮಂತ್ರಿಗಳ ಅರ್ಹತೆಯ ಮಾನದಂಡವು ಸಮುದಾಯಗಳಲ್ಲಿ ದ್ವೇಷವನ್ನು ಸೃಷ್ಟಿಸುವುದು ಮತ್ತು ಪ್ರಚೋದನಕಾರಿ ಭಾಷೆ ಬಳಸುವುದೇ?” ಎಂದು ಕಾಂಗ್ರೆಸ್ ಹೇಳಿದೆ.