ಕೇರಳದ ಕ್ರೈಸ್ತ ಸನ್ಯಾಸಿನಿಯರ ಬಂಧನವು ಧಾರ್ಮಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ರಕ್ಷಣೆ ಮತ್ತು ರಾಜಕೀಯ ಧ್ರುವೀಕರಣದ ಕುರಿತಾದ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಪ್ರಕರಣವು ಸಂಸತ್‌ನಲ್ಲಿ ಮಾತ್ರವಲ್ಲ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.
ಉದ್ಯೋಗ ಕೊಡಿಸುವುದಾಗಿ ಹೇಳಿ ನಾರಾಯಣಪುರದ ಮೂವರು ಬುಡಕಟ್ಟು ಯುವತಿಯರನ್ನು ಮತಾಂತರಕ್ಕೆ ಒಳಪಡಿಸಿ, ಮಾನವ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದಾರೆಂಬ ಆರೋಪದಡಿ ಜುಲೈ 25ರಂದು ಛತ್ತೀಸ್‌ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಸೇರಿದಂತೆ ಮೂವರು ಮಹಿಳೆಯರನ್ನು ಬಂಧಿಸಲಾಗಿತ್ತು.
ಸ್ಥಳೀಯ ಬಜರಂಗ ದಳದ ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇಲೆ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಹಾಗೂ ಸುಕಮಾನ್ ಮಾಂಡವಿ ಎಂಬ ಕ್ರೈಸ್ತ ಸನ್ಯಾಸಿನಿಯರ ಬಂಧನವಾಗಿತ್ತು.
ಈ ಮೂವರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 143(ಮಾನವ ಕಳ್ಳಸಾಗಾಣಿಕೆ) ಮತ್ತು ಛತ್ತೀಸ್‌ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-1968ರ ಸೆಕ್ಷನ್ 4(ಮತಾಂತರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಈ ಘಟನೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಕೇರಳ ಮತ್ತು ದೆಹಲಿಯಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಮಂಗಳವಾರ ನಡೆದ ಮೂವರು ಆರೋಪಿಗಳ ಜಾಮೀನು ವಿಚಾರಣೆಯ ವೇಳೆ ದುರ್ಗ್, ಭಿಲೈ ಹಾಗೂ ರಾಯ್‌ಪುರದ ಕ್ರಿಶ್ಚಿಯನ್ ಸಂಘಟನೆಗಳು ಸ್ಥಳೀಯ ನ್ಯಾಯಾಲಯದಲ್ಲಿ ಒಟ್ಟುಗೂಡಿ ಬಂಧನವನ್ನು ವಿರೋಧಿಸಿದವು.
ಸಿಸ್ಟರ್ ಪ್ರೀತಿ ಮೇರಿ ಮತ್ತು ಸಿಸ್ಟರ್ ವಂದನಾ ಫ್ರಾನ್ಸಿಸ್ ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್(ಗ್ರೀನ್ ಗಾರ್ಡೆನ್ಸ್) ಸಂಸ್ಥೆಗೆ ಸೇರಿದವರು. ಈ ಸಂಸ್ಥೆಯ ಪ್ರಧಾನ ಕಚೇರಿ ಕೇರಳದ ಆಲಪ್ಪುಳದ ಚೆರ್ತಲಾದಲ್ಲಿದೆ. ಸಿಸ್ಟರ್ ಪ್ರೀತಿ ಎರ್ನಾಕುಲಂ ಜಿಲ್ಲೆಯ ಎಳವೂರ್‌ನವರು. ಸಿಸ್ಟರ್ ವಂದನಾ ಕಣ್ಣೂರಿನ ಉದಯಗಿರಿ ಗ್ರಾಮದವರು.
“ನಮ್ಮ ಸಂಸ್ಥೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದೆ. ಸಿಸ್ಟರ್ ಪ್ರೀತಿ ಮಧುಮೇಹ ರೋಗದಿಂದ ಬಳಲುತ್ತಿದ್ದು, ಅವರಿಗೆ ಔಷಧಿಗಳು ಬೇಕಾಗಿರುವುದರ ಕುರಿತು ತಿಳಿದುಕೊಳ್ಳಲು ಜೈಲಿನಲ್ಲಿ ಭೇಟಿಯಾಗಲಾಗಿತ್ತು. ಕ್ರೈಸ್ತ ಸನ್ಯಾಸಿನಿಯರು, ಆ ಮೂವರು ಮಹಿಳೆಯರನ್ನು ಆಗ್ರಾದ ಕಾನ್ವೆಂಟ್‌ನಲ್ಲಿ ಕೆಲಸಕ್ಕಾಗಿ ಕರೆದೊಯ್ಯುತ್ತಿದ್ದರು. ಇವರಿಗೆ ಈ ಹಿಂದೆ ಕಾನ್ವೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಉದ್ಯೋಗದ ಬಗ್ಗೆ ಸೂಚಿಸಿದ್ದರು. ಹಾಗಾಗಿ ಇವರು ಕಾನ್ವೆಂಟ್‌ನಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದರು. ಅಲ್ಲದೆ ಅವರ ಪೋಷಕರ ಅನುಮತಿಯೊಂದಿಗೇ ಅವರಿಗೆ ಕೆಲಸ ನೀಡಲಾಗಿತ್ತು” ಎಂದು ಅಸ್ಸಿಸಿ ಸಿಸ್ಟರ್ಸ್‌ನ ಪ್ರಾಂತೀಯ ಜನರಲ್ ನಿತ್ಯಾ ಫ್ರಾನ್ಸಿಸ್ ಮಾಧ್ಯಮಗಳಿಗೆ ಹೇಳಿದ್ದಾರೆ.
“ಸಿಸ್ಟರ್ ಪ್ರೀತಿ ವರ್ಷಗಳಿಂದ ಉತ್ತರ ಭಾರತದಲ್ಲಿ ಕೆಲಸ ಮಾಡುತ್ತಿದ್ದರೂ, ಇಂತಹ ಘಟನೆಯನ್ನು ಎಂದೂ ಎದುರಿಸಿರಲಿಲ್ಲ. ಆದರೆ, ಇತ್ತೀಚಿನ ಭೇಟಿಯೊಂದರಲ್ಲಿ, ʼಪರಿಸ್ಥಿತಿ ಬದಲಾಗುತ್ತಿದೆ, ನಾವು ನಮ್ಮ ಸನ್ಯಾಸಿನಿಯ ಉಡುಗೆಯಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಿಲ್ಲʼವೆಂದು ಪ್ರೀತಿ ಹೇಳುತ್ತಿದ್ದರು” ಎಂದು ಅವರ ಅತ್ತಿಗೆ ರೈಜಿ ಸಿಜೋ ಹೇಳಿದ್ದಾರೆ.
“ಕೆಲವರು ಇದಕ್ಕೆ ರಾಜಕೀಯ ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವೆಲ್ಲರೂ ಅವರು ಶೀಘ್ರವಾಗಿ ಜೈಲಿನಿಂದ ಬಿಡುಗಡೆಯಾಗಬೇಕೆಂದು ಬಯಸುತ್ತೇವೆ” ಎಂದು ಛತ್ತೀಸ್‌ಗಢ ಡಯೋಸಿಸ್‌ನ ಕಾರ್ಯದರ್ಶಿ ಮತ್ತು ಕ್ರಿಶ್ಚಿಯನ್ ನಾಯಕ ನಿತಿನ್ ಲಾರೆನ್ಸ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
“ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಜರಂಗದಳ ಕಾರ್ಯಕರ್ತರು ಶಂಕಿತರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯದ್ದೇ ಎಂದು ಹೇಳಲಾದ ಕೆಲವು ವೀಡಿಯೊಗಳು, ಶಂಕಿತರನ್ನು ಬಂಧಿಸಲಾಗಿದ್ದ ದುರ್ಗ್ ಜಿಆರ್‌ಪಿ ಪೊಲೀಸ್ ಠಾಣೆಗೆ ಬಜರಂಗದಳದ ಗುಂಪು ನುಗ್ಗುತ್ತಿರುವುದನ್ನು ತೋರಿಸುತ್ತವೆ” ಎಂದು ಕ್ರಿಶ್ಚಿಯನ್ ಸಂಘಟನೆಗಳು ಆರೋಪಿಸಿವೆ.
“ಯಾವುದೇ ಪೂರ್ವ ತನಿಖೆಯಿಲ್ಲದೆ ಬಂಧನ ಮಾಡಲಾಗಿದೆ. ದುರ್ಗ್‌ನ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್‌ಪಿ) ದಾಖಲಿಸಿದ ಎಫ್‌ಐಆರ್ ಕೇವಲ ಅನುಮಾನದ ಆಧಾರದಲ್ಲಿದೆ. ಮೂವರು ಮಹಿಳೆಯರು ವಯಸ್ಕರಾಗಿದ್ದು, ಅವರ ಕುಟುಂಬವು ಕೆಲಸಕ್ಕಾಗಿ ಹೋಗಲು ಒಪ್ಪಿಗೆ ನೀಡಿತ್ತು. ಆದರೆ ಒತ್ತಡದಿಂದ ಆ ಮೂವರ ಬಂಧನವಾಗಿದೆ” ಎಂದು ಆರೋಪಿಗಳ ವಕೀಲ ತಮಾಸ್ಕರ್ ತಾಂಡನ್ ಆರೋಪಿಸಿದ್ದಾರೆ.
ದುರ್ಗ್‌ನ ಕಾಂಗ್ರೆಸ್ ನಾಯಕಿ ಆನ್ನಿ ಪೀಟರ್, ಮಂಗಳವಾರ ಬಂಧನದ ಬಗ್ಗೆ ತಿಳಿದ ತಕ್ಷಣ ಪೊಲೀಸ್ ಠಾಣೆಗೆ ತೆರಳಿದಾಗ ಒಂದಿಷ್ಟು ಜನ ಇದ್ದರು. ಸಂಜೆಯ ಹೊತ್ತಿಗೆ ಎಫ್‌ಐಆರ್ ದಾಖಲಾಗಿರುವುದು ತಿಳಿದುಬಂದಿದೆ. ಈ ವೇಳೆ ಇಬ್ಬರು ಸ್ತ್ರೀಯರನ್ನು ಭೇಟಿಯಾಗಲು ಅನುಮತಿ ಕೇಳಿದರೂ ಅವರು ಮಾತನಾಡಲು ಸಾಧ್ಯವಾಗಿರಲಿಲ್ಲವೆಂದು ಹೇಳಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರ ಬಂಧನ ಕೇರಳದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ವಿಶೇಷವಾಗಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಯುಡಿಎಫ್ ಒಕ್ಕೂಟಗಳು ಈ ಕ್ರಮವನ್ನು ಖಂಡಿಸಿದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಂಧನವನ್ನು ʼಬಿಜೆಪಿ-ಆರ್‌ಎಸ್‌ಎಸ್‌ನ ಗೂಂಡಾಗಿರಿʼ ಎಂದು ಕರೆದರು, ಇದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ʼವ್ಯವಸ್ಥಿತ ದೌರ್ಜನ್ಯʼದ ಭಾಗವಾಗಿದೆ ಎಂದು ಆರೋಪಿಸಿದರು. ಅವರು ಕ್ರೈಸ್ತ ಸನ್ಯಾಸಿನಿಯರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಈ ಅನ್ಯಾಯಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಕೋರಿದರು.
ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್, ಆರ್‌ಎಸ್‌ಪಿಯ ಎನ್.ಕೆ ಪ್ರೇಮಚಂದ್ರನ್ ಮತ್ತು ಐಯುಎಂಎಲ್‌ನ ಇ.ಟಿ ಮೊಹಮ್ಮದ್ ಬಶೀರ್ ಸೇರಿದಂತೆ ಯುಡಿಎಫ್ ಸಂಸದರು ಜುಲೈ 28ರಂದು ಸಂಸತ್ ಸಂಕೀರ್ಣದ ಮಕರ್ ದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನಿಲ್ಲಿಸಿ’ ಎಂಬ ಪೋಸ್ಟರ್‌ಗಳೊಂದಿಗೆ ಪ್ರತಿಭಟನೆ ನಡೆಸಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು, ಕ್ಯಾಥೊಲಿಕ್ ಕನ್ಯಾಸ್ತ್ರೀಯರ ಬಿಡುಗಡೆ ಮತ್ತು ಪಾರದರ್ಶಕ ತನಿಖೆಗೆ ಒತ್ತಾಯಿಸಿದರು. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಈ ಘಟನೆಯನ್ನು ʼಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಗಂಭೀರ ದಾಳಿʼ ಎಂದು ಖಂಡಿಸಿದರು.
ಮೂವರು ಬುಡಕಟ್ಟು ಯುವತಿಯರ ಕುಟುಂಬಗಳು, “ತಮ್ಮ ಮಕ್ಕಳನ್ನು ಉದ್ಯೋಗಕ್ಕಾಗಿ ಸ್ವಯಂಪ್ರೇರಿತವಾಗಿ ಕ್ರೈಸ್ತ ಸನ್ಯಾಸಿನಿಯರೊಂದಿಗೆ ಕಳುಹಿಸಿದ್ದೇವೆಂದು ಜುಲೈ 26ರಂದು ಸ್ಥಳೀಯ ಪೊಲೀಸರಿಗೆ ಲಿಖಿತ ದೃಢೀಕರಣ ಸಲ್ಲಿಸಿದ್ದು, ʼಯಾವುದೇ ಒತ್ತಾಯದ ಮತಾಂತರ ಅಥವಾ ಕಳ್ಳಸಾಗಾಣಿಕೆ ಆಗಿಲ್ಲʼ ಎಂಬುದನ್ನು ಸ್ಪಷ್ಟಪಡಿಸಿದರು. ಆದರೂ, ತನಿಖೆ ಮುಂದುವರಿದಿದೆ” ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಕೇರಳದ ಕ್ಯಾಥೊಲಿಕ್ ಬಿಷಪ್‌ಗಳ ಸಮಿತಿ(ಕೆಸಿಬಿಸಿ) ಮತ್ತು ಕ್ಯಾಥೊಲಿಕ್ ಬಿಷಪ್‌ಗಳ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ಈ ಬಂಧನವನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು ಅಮಾನವೀಯ ಕೃತ್ಯವೆಂದು ಕರೆದಿವೆ. ಸಿಬಿಸಿಐನ ಉಪ ಕಾರ್ಯದರ್ಶಿ ಮ್ಯಾಥ್ಯೂ ಕೊಯಿಕ್ಕಲ್, ಈ ಎಫ್‌ಐಆರ್ ಕಾಲ್ಪನಿಕ. ಅದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಎಲ್‌ಡಿಎಫ್‌ನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಈ ʼಅನ್ಯಾಯದʼ ಬಂಧನದ ಕುರಿತು ಚರ್ಚೆಗೆ ಒತ್ತಾಯಿಸಿ ಅಡ್ಜರ್ನ್‌ಮೆಂಟ್ ಡಿಬೇಟ್‌ಗೆ ನೋಟಿಸ್ ಸಲ್ಲಿಸಿದರು. ಕಾಂಗ್ರೆಸ್ ಸಂಸದ ಶಶಿ ತರೂರ್, ʼಗೂಂಡಾಗಿರಿʼ ಎಂದು ಕರೆದಿದ್ದು, ನಿರಪರಾಧಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೇರಳದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ನಾಯಕರ ನಿಯೋಗವು ಬುಧವಾರ ಬೆಳಿಗ್ಗೆ ದುರ್ಗ್ ಕೇಂದ್ರ ಜೈಲಿನಲ್ಲಿರುವ ಕ್ರೈಸ್ತ ಸನ್ಯಾಸಿನಿಯರನ್ನು ಭೇಟಿ ಮಾಡಿದ್ದು, ನಿಯೋಗದಲ್ಲಿ ಕಾಂಗ್ರೆಸ್‌ನ ಸಂಸದರಾದ ಬೆನ್ನಿ ಬೆಹನನ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಕ್ಷದ ಎನ್‌ಕೆ ಪ್ರೇಮಚಂದ್ರನ್ ಮತ್ತು ಕೇರಳ ಕಾಂಗ್ರೆಸ್‌ನ ಕೆ ಫ್ರಾನ್ಸಿಸ್ ಜಾರ್ಜ್ ಇದ್ದರು.

“ನಾವು ಸನ್ಯಾಸಿನಿಯರೊಂದಿಗೆ ದೀರ್ಘ ಚರ್ಚೆ ನಡೆಸಿದ್ದೇವೆ. ಅವರು(ಸನ್ಯಾಸಿನಿಯರು) ಮುಗ್ಧರು. ರೈಲ್ವೆ ನಿಲ್ದಾಣದಲ್ಲಿ ಮೂವರು ಮಹಿಳೆಯರನ್ನು ಬರಮಾಡಿಕೊಳ್ಳಲು ಹೋಗಿದ್ದರು” ಎಂದು ಪ್ರೇಮಚಂದ್ರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರು ಮತ್ತು ಬಂಧಿತ ಮಹಿಳೆ ಇನ್ನೂ ಜೈಲಿನಲ್ಲೇ ಇದ್ದಾರೆ. ಆದರೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾದ ಮೂವರು ಮಹಿಳೆಯರನ್ನು ಆಶ್ರಯ ಗೃಹಕ್ಕೆ ಕಳುಹಿಸಲಾಗಿದೆ.
ಛತ್ತೀಸ್‌ಗಢ ಸರ್ಕಾರದ ಪ್ರತಿಕ್ರಿಯೆ: ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಈ ಬಂಧನವನ್ನು ಸಮರ್ಥಿಸಿಕೊಂಡಿದ್ದು, “ಇದು ಮಾನವ ಕಳ್ಳಸಾಗಾಣಿಕೆ ಮತ್ತು ಮತಾಂತರದ ಗಂಭೀರ ಪ್ರಕರಣವಾಗಿದೆ. ನಾರಾಯಣಪುರದ ಮೂವರು ಯುವತಿಯರಿಗೆ ಉದ್ಯೋಗದ ಭರವಸೆ ನೀಡಿ, ಅವರನ್ನು ಆಗ್ರಾಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವಿಷಯವನ್ನು ರಾಜಕೀಯಗೊಳಿಸದಂತೆ ನಮ್ಮ ಬಸ್ತಾರ್(ಬುಡಕಟ್ಟು ಸಮುದಾಯ)ನ ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಷಯ” ಎಂದರು.
ಛತ್ತೀಸ್‌ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು, “ಈ ಘಟನೆಯನ್ನು ಆಧರಿಸಿ, ರಾಜ್ಯದಲ್ಲಿ ಹೊಸ ಕಠಿಣ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಈ ಕಾನೂನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿದೆ” ಎಂದು ಘೋಷಿದರು.
2026ರ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಕ್ರಿಶ್ಚಿಯನ್ ಸಮುದಾಯದ ಬೆಂಬಲವನ್ನು ಗಳಿಸಲು ಬಿಜೆಪಿ ಯತ್ನಿಸುತ್ತಿದ್ದು, ಇಂತಹ ಘಟನೆ ನಡೆದಿರುವುದರಿಂದ ತಮ್ಮ ಮೇಲಿನ ಆರೋಪವನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತು. ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಕ್ರೈಸ್ತ ಸನ್ಯಾಸಿನಿಯರು ಯಾವುದೇ ತಪ್ಪು ಮಾಡಿಲ್ಲ. ಅವರ ಬಿಡುಗಡೆಗೆ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಸಾಮಾನ್ಯ ಕಾರ್ಯದರ್ಶಿ ಅನೂಪ್ ಆಂಟನಿಯ ನೇತೃತ್ವದಲ್ಲಿ ಒಂದು ತಂಡವನ್ನು ಛತ್ತೀಸ್‌ಗಢಕ್ಕೆ ಕಳುಹಿಸಲಾಗಿದೆ.
ಈ ಘಟನೆಯು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತಾದ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯದ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಘಟನೆಯು ರಾಜಕೀಯವಾಗಿ ಸವಾಲಾಗಿದೆ. ಛತ್ತೀಸ್‌ಗಢದಲ್ಲಿ ಮತಾಂತರ ವಿರೋಧಿ ಕಾನೂನುಗಳ ಬಗ್ಗೆ ಮತ್ತಷ್ಟು ಕಠಿಣ ಕ್ರಮಗಳ ಕೈಗೊಳ್ಳುವುದಾಗಿ ಘೋಷಿಸಿರುವುದು ಈ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇದನ್ನೂ ಓದಿದ್ದೀರಾ? ಮಹಿಳಾ ಸಶಕ್ತೀಕರಣದ ವೇಗ ಹೆಚ್ಚಿಸಿದ ಶಕ್ತಿ ಯೋಜನೆ; ಉಡಾಫೆ ಹೇಳಿಕೆಗಳಿಗೆ ತಕ್ಕ ಉತ್ತರ
ಮತಾಂತರ ಆರೋಪದಡಿ ಛತ್ತೀಸ್‌ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಕೇರಳದ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಗದ್ದಲ, ಚರ್ಚೆ, ವಿವಾದಗಳು ಉಂಟಾಗಿವೆ. ಅಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಛತ್ತೀಸ್‌ಗಢದ ಇಂತಹ ನಡೆಯ ವಿರುದ್ಧ ಸಂಸತ್‌ನಲ್ಲಿ ತೀವ್ರ ಆಕ್ರೋಶಗಳು ಉಂಟಾಗಿದ್ದು, ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಲಾಗುತ್ತಿದೆ.
ಕೇರಳದ ಕ್ರೈಸ್ತ ಸನ್ಯಾಸಿನಿಯರ ಬಂಧನವು ಧಾರ್ಮಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ರಕ್ಷಣೆ ಮತ್ತು ರಾಜಕೀಯ ಧ್ರುವೀಕರಣದ ಕುರಿತಾದ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಪ್ರಕರಣವು ಸಂಸತ್‌ನಲ್ಲಿ ಮಾತ್ರವಲ್ಲ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ. ತನಿಖೆಯು ಮುಂದುವರೆದಂತೆ, ಈ ವಿಷಯವು ಭಾರತದ ಧಾರ್ಮಿಕ ಮತ್ತು ಸಾಮಾಜಿಕ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
Yee portalge Christian m7ssionary fund maadtidya.