ಮಣಿಪುರದಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದ್ದು, ಶಂಕಿತ ಉಗ್ರರು ಸೋಮವಾರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಭದ್ರತಾ ತಂಡದ ಮೇಲೆ ದಾಳಿ ನಡೆಸಿದ್ದು ಪೊಲೀಸ್ ಸಿಬ್ಬಂದಿಯೋರ್ವರಿಗೆ ಗಾಯವಾಗಿದೆ.
ಪೊಲೀಸರ ಪ್ರಕಾರ, ಕಾಂಗ್‌ಪೋಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಬೆಳಿಗ್ಗೆ 10:30ರ ಸುಮಾರಿಗೆ ತಂಡವು ಜಿರಿಬಾಮ್‌ಗೆ ಹೋಗುತ್ತಿದ್ದಾಗ ದಾಳಿ ನಡೆಸಿದೆ. ಇತ್ತೀಚೆಗೆ ಮೈತಿ ಮತ್ತು ಕುಕಿ ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಈ ಸ್ಥಳದಲ್ಲಿಯೇ ನಡೆದಿದೆ.
ಸಂಘರ್ಷದ ಪರಿಸ್ಥಿತಿಯನ್ನು ಅವಲೋಕಿಸಲು ಸಿಎಂ ಬಿರೇನ್ ಸಿಂಗ್ ಮಂಗಳವಾರ ಚಾಪರ್‌ನಲ್ಲಿ ಪಟ್ಟಣಕ್ಕೆ ತೆರಳಲಿದ್ದರು. ಈ ವೇಳೆ ದಾಳಿ ನಡೆದಿದ್ದು, ಕಾನ್‌ಸ್ಟೆಬಲ್‌ನನ್ನು ರಾಜ್ಯದ ರಾಜಧಾನಿ ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಕಾನ್‌ಸ್ಟೆಬಲ್‌ಗೆ ಬುಲೆಟ್ ತಗುಲಿದೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ವರ್ಷ ಕಳೆದರೂ ಶಾಂತಿಯಿಲ್ಲ, ಈಶಾನ್ಯ ರಾಜ್ಯಕ್ಕೆ ಆದ್ಯತೆ ನೀಡಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್
ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿಂಗ್, “ಈ ಘಟನೆಯು ಅತ್ಯಂತ ದುರದೃಷ್ಟಕರ ಮತ್ತು ಅತ್ಯಂತ ಖಂಡನೀಯ. ಇದು ಮುಖ್ಯಮಂತ್ರಿ ಹಾಗೂ ರಾಜ್ಯದ ಜನತೆಯ ಮೇಲಿನ ದಾಳಿಯಾಗಿದೆ. ಈ ಕೃತ್ಯಗಳನ್ನು ತಡೆಯಲು ರಾಜ್ಯ ಸರ್ಕಾರ ಏನಾದರೂ ಮಾಡಲೇಬೇಕಾಗಿದೆ” ಎಂದು ತಿಳಿಸಿದರು.
ಅಪರಾಧಿಗಳ ಮೇಲೆ ಕ್ರಮಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.
#WATCH | Violence in Jiribam, Manipur | Imphal: Manipur CM N Biren Singh says, “It is very unfortunate and highly condemnable. It is an attack directly on the Chief Minister, means directly on the people of the state. So, State Government has to do something. So, I will take a… pic.twitter.com/sH5I9qYJhf
— ANI (@ANI) June 10, 2024
ಇನ್ನು ಜಿರಿಬಾಮ್‌ಗೆ ಭೇಟಿ ನೀಡುವ ಕುರಿತು ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಮುಖಂಡರಿಗೆ ಸಿಎಂ ಮೌಖಿಕ ಭರವಸೆ ನೀಡಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಈ ಪತ್ರಿಕೆಗೆ ತಿಳಿಸಿದ್ದಾರೆ.
ಅಸ್ಸಾಂನ ಬರಾಕ್ ಕಣಿವೆಯಲ್ಲಿ ಕ್ಯಾಚಾರ್ ಜಿಲ್ಲೆಗೆ ಹೊಂದಿಕೊಂಡು ಮಣಿಪುರದ ಪಶ್ಚಿಮದ ಗಡಿಯಲ್ಲಿ ನೆಲೆಗೊಂಡಿರುವ ಜಿರಿಬಾಮ್ ಜಿಲ್ಲೆಯಲ್ಲಿ ಮೈತಿ, ಕುಕಿ ಮತ್ತು ಇತರೆ ಬುಡಕಟ್ಟು ಜನಾಂಗದ ಮಿಶ್ರ ಜನಸಂಖ್ಯೆಯಿದೆ.