ಸರ್ಕಾರಿ ಶಾಲೆಯೊಂದರ ಗೋಡೆಗೆ ನಾಲ್ಕು ಲೀಟರ್ ಬಣ್ಣ ಬಳಿಯಲು 168 ಕಾರ್ಮಿಕರನ್ನು ಮತ್ತು 65 ಮೇಸ್ತ್ರಿಗಳನ್ನು ಬಳಸಲಾಗಿದೆ ಎಂದು ಬಿಲ್ ಮಾಡಿ, ಹಸೀ-ಹಸೀಯಾಗಿ ಭ್ರಷ್ಟಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದ ಶಾಡೋಲ್ ಜಿಲ್ಲೆಯ ಸಕಂಡಿಯಲ್ಲಿ ನಡೆದಿದೆ.
ನಕಲಿ ಬಿಲ್ ತಯಾರಿಸಿರುವ ಎರಡು ಬಿಲ್‌ಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದರಲ್ಲಿ, ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ಬಣ್ಣ ಬಳಿಯಲು 1.07 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಸೂಚಿಸಿದ್ದರೆ, ಮತ್ತೊಂದರಲ್ಲಿ, ನಿಪನಿಯ ಗ್ರಾಮದ ಇನ್ನೊಂದು ಶಾಲೆಯಲ್ಲಿ 20 ಲೀಟರ್ ಬಣ್ಣ ಬಳಿಯಲು 2.3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ.
ಸಕಂಡಿ ಶಾಲೆಯ ಒಂದು ಗೋಟೆಗೆ ನಾಲ್ಕು ಲೀಟರ್ ಬಣ್ಣ ಬಳಿಯಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಬಿಲ್‌ನಲ್ಲಿ ವಿವರಿಸಲಾಗಿದೆ. ಅಂತೆಯೇ, ನಿಪಾನಿಯ ಶಾಲೆಯ 10 ಕಿಟಕಿ ಮತ್ತು ನಾಲ್ಕು ಬಾಗಿಲುಗಳಿಗೆ 20 ಲೀಟರ್ ಬಣ್ಣ ಬಳಿಯಲು 275 ಕಾರ್ಮಿಕರು ಮತ್ತು 150 ಮೇಸ್ತ್ರಿಗಳನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಮತ್ತೊಂದು ಬಿಲ್‌ನಲ್ಲಿ ತೋರಿಸಲಾಗಿದೆ.
ಈ ಎರಡೂ ಶಾಲೆಗಳಿಗೆ ಬಣ್ಣ ಬಳಿಯುವ ಕಾಮಗಾರಿಯನ್ನು ‘ಸುಧಾರಕ್ ಕನ್ಸ್‌ಸ್ಟ್ರಕ್ಷನ್’ ಎಂಬ ಸಂಸ್ಥೆ ಗುತ್ತಿಗೆ ಪಡೆದಿತ್ತು. ಇದೇ ಸಂಸ್ಥೆ ಈ ರೀತಿಯ ಬಿಲ್ ಸಿದ್ದಪಡಿಸಿ, ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಲಾಗಿದೆ.
ನಕಲಿ ಬಿಲ್ ಸೃಷ್ಟಿಸಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಫೂಲ್ಸಿಂಗ್ ಮಾರ್ಪಾಚಿ ಹೇಳಿದ್ದಾರೆ.