ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ವಿರುದ್ಧ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಮನೋಜ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ. ‘ಗಂಭೀರ್ ನನ್ನ ಕುಟುಂಬವನ್ನು ನಿಂದಿಸಿದ್ದಾರೆ. ಅಲ್ಲದೆ, ಸೌರವ್ ಗಂಗೂಲಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ಹಿಂದೆ, ಐಪಿಎಲ್‌ನಲ್ಲಿ ದೆಹಲಿ ತಂಡದಲ್ಲಿ ತಿವಾರಿ ಮತ್ತು ಗಂಭೀರ್ ಜೊತೆಯಾಗಿ ಆಟವಾಡಿದ್ದರು. ಆದರೆ, ಈಗ ಅವರಿಬ್ಬರ ನಡುವಿನ ವೈಮನಸ್ಸು ಮುನ್ನೆಲೆಗೆ ಬಂದಿದೆ. ಗಂಭೀರ್‌ರನ್ನು ‘ಕಪಟಿ’ ಎಂದು ತಿವಾರಿ ಕರೆದಿದ್ದಾರೆ.
“ಗಂಭೀರ್‌ಗೆ ಸ್ಪಷ್ಟತೆ ಮತ್ತು ನಿರ್ಣಾಯಕ ಕೋಚಿಂಗ್ ಶೈಲಿಯ ಕೊರತೆಯಿದೆ. ಅವರೊಬ್ಬ ಕಪಟಿ. ಅವರು ಏನು ಹೇಳುತ್ತಾರೋ ಅದನ್ನು ಮಾಡುವುದಿಲ್ಲ” ಎಂದು ತಿವಾರಿ ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯನ್ನು ಭಾರತ ತಂಡ ಸೋತಿದೆ. ಆ ಕಾರಣಕ್ಕಾಗಿ, ಟೀಮ್ ಇಂಡಿಯಾದ ಕೋಚ್ ಆಗಿರುವ ಗಂಭೀರ್ ವಿರುದ್ಧ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿವೆ. ಆದಾಗ್ಯೂ, ಇತ್ತೀಚೆಗೆ ಭಾರತ ತಂಡಕ್ಕೆ ಸೇರ್ಪಡೆಯಾಗಿರುವ ವೇಗಿ ಬೌಲರ್ ಹರ್ಷಿತ್ ರಾಣಾ ಅವರು ಗಂಭೀರ್‌ರನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಗಂಭೀರ್‌ರನ್ನು ರಾಣಾ ಸಮರ್ಥಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಿವಾರಿ, “ರಾಣಾ ಅವರು ಗಂಭೀರ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನನಗೆ ಆಶ್ಚರ್ಯವೇನೂ ಆಗಿಲ್ಲ. ಗಂಭೀರ್‌ರನ್ನು ರಾಣಾ ಯಾಕೆ ಸಮರ್ಥಿಸುತ್ತಿದ್ದಾರೆ. ಆಕಾಶ್ ದೀಪ್ ಬದಲಿಗೆ ಹರ್ಷಿತ್ ರಾಣಾ ಅವರು ಟೀಮ್‌ನಲ್ಲಿ ಆಡಿದ್ದಾರೆ. ಅದು ಸಾಧ್ಯವಾಗಿದ್ದು ಹೇಗೆ? ಆಕಾಶ್ ದೀಪ್ ಯಾವ ತಪ್ಪು ಮಾಡಿದ್ದರು” ಎಂದು ಪ್ರಶ್ನಿಸಿದ್ದಾರೆ.
“ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೂರ್ನಿಗಳಲ್ಲಿ ಆಕಾಶ್ ದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೂ ಅವರನ್ನು ಹೊರಗಿಡಲು ಕಾರಣವೇನು? ಆಕಾಶ್ ಅವರನ್ನು ಹೊರಗಿಟ್ಟು, ರಾಣಾ ಅವರನ್ನು ಆಯ್ಕೆ ಮಾಡಿದ್ದು ಸಂಪೂರ್ಣವಾಗಿ ಪಕ್ಷಪಾತದ ಆಯ್ಕೆಯಾಗಿದೆ. ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಗಂಭೀರ್‌ರನ್ನು ರಾಣಾ ಸಮರ್ಥಿಸಿಕೊಳ್ಳುತ್ತಾರೆ” ಎಂದು ತಿವಾರಿ ಹೇಳಿದ್ದಾರೆ.
“ಈ ಹಿಂದೆ, ಯಾರಾದರೂ ಸತ್ಯ ಹೇಳಿದರೆ, ಅಂತಹವರನ್ನು ಜನರು ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರಿಗೆ ನನ್ನ ಬಗ್ಗೆ ತಿಳಿದಿಲ್ಲ. ನಾನು ಸತ್ಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ” ಎಂದು ತಿವಾರಿ ತಿಳಿಸಿದ್ದಾರೆ.