ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲೆ ಮಾಡಲು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಅರವಿಂದ್ ಕೇಜ್ರಿವಾಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎರಡನೆ ವ್ಯಕ್ತಿಯ ಹೆಸರು ರೋಹಿತ್ ತ್ಯಾಗಿ ಎಂದಾಗಿದ್ದು, ಆತ ನಿರಂತರವಾಗಿ ಬಿಜೆಪಿ ನಾಯಕ ಪರ್ವೇಶ್ ವರ್ಮ ಅವರೊಂದಿಗಿರುತ್ತಾನೆ. ಪರ್ವೇಶ್ ವರ್ಮರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾನೆ. ಆತ ಕೂಡ ಕ್ರಿಮಿನಲ್ ಆಗಿದ್ದಾನೆ” ಎಂದು ಅತಿಶಿ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!
“ರೋಹಿತ್ ತ್ಯಾಗಿ ವಿರುದ್ಧ 2011ರಲ್ಲಿ ಒಂದು ಒಂದು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಹತ್ಯಾ ಪ್ರಯತ್ನದ ಪ್ರಕರಣವೂ ಇದ್ದು, ಈ ಪ್ರಕರಣಕ್ಕೆ 10 ವರ್ಷಗಳ ಶಿಕ್ಷೆ ಇದೆ. ಮೂರನೆಯ ವ್ಯಕ್ತಿಯನ್ನು ಸುಮಿತ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಕಳ್ಳತನ, ದರೋಡೆ ಹಾಗೂ ಹತ್ಯೆ ಪ್ರಯತ್ನದ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ” ಎಂದು ಅವರು ಆಪಾದಿಸಿದ್ದಾರೆ.
“ಈ ಎಲ್ಲ ಪ್ರಕರಣಗಳು ನಿನ್ನೆ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಿದವರು ಸಾಮಾನ್ಯ ಬಿಜೆಪಿ ಕಾರ್ಯಕರ್ತರಲ್ಲ. ಬದಲಿಗೆ ತರಬೇತಿ ಪಡೆದ ಗೂಂಡಾಗಳು ಮತ್ತು ಕ್ರಿಮಿನಲ್‌ಗಳು ಎಂಬುದನ್ನು ಹೇಳುತ್ತಿವೆ. ಚುನಾವಣೆಯ ಹೆದರಿಕೆಯಿಂದ ಬಿಜೆಪಿಯೀಗ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ”ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
