ತಮಿಳುನಾಡು ಸರಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆ (TASMAC) ಮೇಲಿನ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಎಲ್ಲ ಮಿತಿಗಳನ್ನು ಮೀರಿದೆ ಎಂದು ಟೀಕಿಸಿದೆ.
ಇ.ಡಿ ದಾಳಿಗಳನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಮತ್ತು ತಮಿಳುನಾಡು ಸರಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆ (TASMAC) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಇ.ಡಿಗೆ ನೋಟಿಸ್ ನೀಡಿದೆ.
ಸರಕಾರಿ ಸ್ವಾಮ್ಯದ ಸಂಸ್ಥೆಯ ಮೇಲೆ ಇ.ಡಿಯ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ನಿಮ್ಮ ಜಾರಿ ನಿರ್ದೇಶನಾಲಯವು ಎಲ್ಲ ಮಿತಿಗಳನ್ನು ಮೀರುತ್ತಿದೆ. ಈ ಅಪರಾಧವು ನಿಗಮದ ವಿರುದ್ಧ ಹೇಗೆ ಆಗುತ್ತದೆ? ನೀವು ದೇಶದ ಒಕ್ಕೂಟ ರಚನೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೀರಿ ಎಂದು ಸಿಜೆಐ ಗವಾಯಿ ಟೀಕಿಸಿದರು.
TASMAC ಪ್ರಧಾನ ಕಚೇರಿ ಸೇರಿದಂತೆ ಇತರ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ TASMAC ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
TASMAC ತಮಿಳುನಾಡು ಸರಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿದ್ದು, ಇದು ತಮಿಳುನಾಡಿನಲ್ಲಿ ಮದ್ಯಪಾನದ ಸಗಟು ಮತ್ತು ಚಿಲ್ಲರೆ ಮಾರಾಟದ ಮೇಲೆ ಏಕಸ್ವಾಮ್ಯವನ್ನು ಹೊಂದಿದೆ.
ಮೇ 16ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮಿಳುನಾಡಿನಾದ್ಯಂತ TASMACನ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. TASMAC ಮೇಲೆ ಅಕ್ರಮ ಹಣ ವರ್ಗಾವಣೆ, 1,000 ಕೋಟಿ ರೂಪಾಯಿಗಳ ಮದ್ಯ ಹಗರಣ, ಡಿಸ್ಟಿಲರಿಗಳು ಮದ್ಯ ಪೂರೈಕೆ ಆದೇಶಗಳನ್ನು ಪಡೆಯಲು ಲೆಕ್ಕವಿಲ್ಲದ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ
ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಹಂತದ ದಾಳಿಗಳನ್ನು ನಡೆಸಿದ್ದ ಇ.ಡಿ ಅಧಿಕಾರಿಗಳು, ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಮತ್ತು ಡಿಸ್ಟಿಲರಿ ಕಂಪನಿಗಳ ಮೂಲಕ 1,000 ಕೋಟಿ ರೂ. ಮೌಲ್ಯದ ಲೆಕ್ಕವಿಲ್ಲದ ನಗದು ವಹಿವಾಟು ಕಂಡುಬಂದಿದೆ ಎಂದು ಕಾರ್ಯಾಚರಣೆಯ ನಂತರ ತಿಳಿಸಿದ್ದರು.
ಇ.ಡಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ, ಇದು ಸಂವಿಧಾನದ ಉಲ್ಲಂಘನೆ ಎಂದು ತಮಿಳುನಾಡು ಸರ್ಕಾರ ಹಾಗೂ TASMAC ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ TASMAC ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ತಮಿಳುನಾಡು ಸರ್ಕಾರ ಮತ್ತು TASMAC ಪರ ವಕೀಲರು, ಜಾರಿ ನಿರ್ದೇಶನಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಮತ್ತು ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ತನಿಖೆಗಳನ್ನು ನಡೆಸುತ್ತಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು.
ಇ.ಡಿ ತನ್ನ ಕಾರ್ಯಾಚರಣೆಯ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ TASMAC ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಕಿರುಕುಳಕ್ಕೆ ಒಳಪಡಿಸಲಾಗಿತ್ತು ಮತ್ತು ದೀರ್ಘಕಾಲದವರೆಗೆ ಬಂಧನದಲ್ಲಿ ಇಡಲಾಗಿತ್ತು. ಅಲ್ಲದೆ ಅವರ ಫೋನ್‌ಗಳು ಮತ್ತು ವೈಯಕ್ತಿಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಅವರ ಗೌಪ್ಯತೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಕೀಲರು ವಾದ ಮಂಡಿಸಿದರು.
ಈ ನಡುವೆ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶಗಳಿಗಾಗಿ ಮತ್ತು ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ನಡೆದಿದೆ. ತುಮಕೂರಿನ ಎಸ್ಎಸ್ಐಟಿ ಹಾಗೂ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಮೇಲೆ ಮೇ 21ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರವು ಬಿಜೆಪಿಯೇತರ ಸರ್ಕಾರ ಹಾಗೂ ತನ್ನ ವಿರೋಧಿಗಳನ್ನು ಬಗ್ಗುಬಡಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.