ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸಿಆರ್‌ಪಿಎಫ್ ಸಿಬ್ಬಂದಿ ಮೋತಿ ರಾಮ್ ಜಾಟ್ ಅನ್ನು ಬಂಧಿಸಿದೆ. ಎನ್‌ಐಎ ದೆಹಲಿಯಲ್ಲಿ ಮೋತಿ ರಾಮ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಪಾಕಿಸ್ತಾನ ಗುಪ್ತಚರ ಅಧಿಕಾರಿಗಳೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಎನ್‌ಐಎ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪಾಕಿಸ್ತಾನದ ಪರ ಬೇಹುಗಾರಿಕೆ; ಗುಜರಾತ್‌ನ ಸಹದೇವ್ ಗೋಹಿಲ್ ಬಂಧನ
ಆರೋಪಿ ಮೋತಿ ರಾಮ್ 2023ರಿಂದ ಪಾಕಿಸ್ತಾನ ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗುಪ್ತ, ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗೆಯೇ ಬೇರೆ ಬೇರೆ ಮಾರ್ಗಗಳಿಂದ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಂದ ಹಣವನ್ನು ಪಡದುಕೊಳ್ಳುತ್ತಿದ್ದ ಎನ್ನಲಾಗಿದೆ. ಇನ್ನು ಪಟಿಯಾಲ ಹೌಸ್ ನ್ಯಾಯಾಲಯ ವಿಶೇಷ ಪೀಠ ಮೋತಿ ರಾಮ್ ಅನ್ನು ಜೂನ್ 6ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ.
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುವವರು ಮುಸ್ಲಿಮರೇ ಎಂಬಂತಹ ಅಪಪ್ರಚಾರವನ್ನು ಬಿಜೆಪಿ ಮಾಡುತ್ತಿರುವ ನಡುವೆ ಹಲವು ಮುಸ್ಲಿಮೇತರರು ಹಣದ ಆಸೆಗಾಗಿ ದೇಶದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿರುವುದು ಬಯಲಾಗುತ್ತಿದೆ.
ಇತ್ತೀಚೆಗೆ ಭಾರತೀಯ ವಾಯುಪಡೆ(ಐಎಎಫ್) ಮತ್ತು ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ಗಳ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನಲ್ಲಿ ಆರೋಗ್ಯ ಕಾರ್ಯಕರ್ತ ಸಹದೇವ್ ಸಿಂಗ್ ಗೋಹಿಲ್(28 ವರ್ಷ) ಎಂಬಾತನನ್ನು ಬಂಧಿಸಲಾಗಿದೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನದ ಬಳಿಕ ಈ ಜಾಲದಲ್ಲಿರುವ 12 ಮಂದಿಯನ್ನು ಬಂಧಿಸಲಾಗಿದೆ.
