ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಾನಾ ಚಂಡಮಾರುತ ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ, ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಭಾರಿ ಮಳೆಯಾಗುತ್ತಿದೆ.
ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.
ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಕೋಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಹೆಚ್ಚು ಮಳೆ ಸುರಿಯುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಮತ್ತು ಸಮೀಪದ ಜಗತ್‌ಸಿಂಗ್‌ಪುರದಲ್ಲಿ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆಯಿಂದ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿದೆ. ವಿಮಾನ ನಿಲ್ದಾಣವನ್ನು ಬಂದ್ ಮಾಡಿದ ಪರಿಣಾಮ ಸುಮಾರು 40 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸಂಚರಿಸುವ 400ಕ್ಕೂ ಹೆಚ್ಚು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಒಡಿಶಾದಲ್ಲಿ 14 ಜಿಲ್ಲೆಗಳ ಸುಮಾರು 6 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
‘ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಸುಮಾರು 21 ಸೆಂ .ಮೀ ನಷ್ಟು ಮಳೆ ಸುರಿಯಬಹುದು’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ
ಸುಮಾರು ಅರ್ಧದಷ್ಟು ಜನರು ‘ಡಾನಾ’ದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಡಿಶಾ ಸರ್ಕಾರವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು,
ಜನರ ಸ್ಥಳಾಂತರ ಕಾರ್ಯವನ್ನು ಆರಂಭಿಸಿದೆ.
ಒಡಿಶಾದ 14 ಜಿಲ್ಲೆಗಳಲ್ಲಿ ಸುಮಾರು 288 ರಕ್ಷಣಾ ತಂಡಗಳ ನಿಯೋಜನೆ ಮಾಡಲಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಹಾರ, ಕುಡಿಯುವ ನೀರು, ಶಿಶು ಆಹಾರದ ವ್ಯವಸ್ಥೆ. ಜೊತೆಗೆ, ಮಹಿಳಾ ಪೊಲೀಸ್ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
