ಜಾತಿವಾದಿ ಪ್ರಬಲ ಜಾತಿಯ ದುಷ್ಕರ್ಮಿಗಳು ದಲಿತ ಅಪ್ರಾಪ್ತ ಬಾಲಕನಿಗೆ ಅಮಾನವೀಯವಾಗಿ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಜಾತಿ ದೌರ್ಜನ್ಯದ ಈ ಘಟನೆ ನಡೆಸಿದ್ದು, ಗುರುವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 ವರ್ಷ ವಯಸ್ಸಿನ ಸಂತ್ರಸ್ತ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೌಂಡ್ ಮಿಕ್ಸರ್ ಮತ್ತು ಆಡಿಯೊ ಸಿಸ್ಟಮ್‌ಗಳನ್ನು ಹೊಂದಿಸುವ ಕೌಶಲ್ಯವನ್ನು ಕಲಿತಿದ್ದರು. ಮಂಗಳವಾರ ಅದೇ ಕೆಲಸಕ್ಕೆ ತೆರಳಿದ್ದರು. ಅಂದಿನ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಕಿಶನ್ ತಿವಾರಿ, ದಿಲೀಪ್ ಮಿಶ್ರಾ ಮತ್ತು ಸತ್ಯಂ ತಿವಾರಿ ಎಂಬುವರು ಆತನ ಮೇಲೆ ಜಾತಿ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ದಿಲೀಪ್ ಮಿಶ್ರಾ ಮದ್ಯದ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸತ್ಯಂ ಮತ್ತು ಕಿಶನ್ ಬಾಲಕನನ್ನು ಹಿಡಿದುಕೊಂಡಿದ್ದಾರೆ. ಮೂತ್ರವಿದ್ದ ಬಾಟಲಿಯನ್ನು ಬಾಲಕನ ಬಾಯಿಗೆ ಬಲವಂತವಾಗಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಆರೋಪಿಗಳ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಿಯೊ ಮಿಕ್ಸಿಂಗ್‌ಗಾಗಿ ಬಾಲಕನನ್ನು ಕರೆಸಿದ್ದರು. ಆ ಕೆಲಸಕ್ಕೆ ಬಾಲಕ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕಾಗಿ ಆರೋಪಿಗಳು ಆತನ ಮೇಲೆ ಸಿಟ್ಟಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
“ಆರೋಪಿಗಳು ಅಪ್ರಾಪ್ತರೊಂದಿಗೆ ಅನುಚಿತವಾಗಿ ವರ್ತಿಸಿ, ಥಳಿಸಿದ್ದಾರೆ. ಅವರಲ್ಲಿ ಒಬ್ಬರು ಇಡೀ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ” ಎಂದು ಗಿಲೌಲಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಹಿಮಾ ನಾಥ್ ಉಪಾಧ್ಯಾಯ ಹೇಳಿದ್ದಾರೆ.
ಸಂತ್ರಸ್ತ ಬಾಲಕ ಮನೆಗೆ ಬಂದು ತನ್ನ ಅಣ್ಣನಿಗೆ ಘಟನೆಯ ಬಗ್ಗೆ ಹೇಳಿಕೊಂಡಿದ್ದು, ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Ivarigella Katina Shiksheyagabeku