ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿದ್ದ ದಲಿತ ಬಾಲಕ ಸಾವನ್ನಪ್ಪಿದ್ದಾನೆ. ತಮ್ಮ ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮೃತ ಬಾಲಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯ ಖೇರಿ ಪೊಲೀಸರು ಬಾಲಕ ಆಕಾಶ್ನನ್ನು ಸೆಪ್ಟೆಂಬರ್ 3ರಂದು ಬಂಧಿಸಿದ್ದರು.
ವಿಚಾರಣೆ ವೇಳೆ ಆತನಿಗೆ ಪೊಲೀಸರು ವಿಕೃತವಾಗಿ ಥಳಿಸಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ಹಲ್ಲೆಯಿಂದ ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ಆತನನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕಾಶ್ ಸಾವನ್ನಪ್ಪಿದ್ದಾನೆ.
“ಸಾವಿನ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ” ಎಂದು ಲಖಿಂಪುರ ಎಸ್ಪಿ ಗಣೇಶ್ ಪ್ರಸಾದ್ ಹೇಳಿದ್ದಾರೆ. ಬಾಲಕ ಆಕಾಶ್ ಸೆಪ್ಟಿಸೆಮಿಯಾದಿಂದ ಬಳಲುತ್ತಿದ್ದರು ಎಂದು ಸರ್ಕಲ್ ಆಫೀಸರ್ ರಮೇಶ್ ಕುಮಾರ್ ತಿವಾರಿ ಹೇಳಿಕೆ ನೀಡಿದ್ದಾರೆ.
ಬಾಲಕನ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಮೃತ ಬಾಲಕನ ಸಂಬಂಧಿಕರು ಮತ್ತು ಸಿಸಾವನ್ ಕಾಲಾ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಯ ಹೊರಗೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದಾರೆ.