ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ ನಲ್ಗೊಂಡದ ಚಿಟ್ಯಾಲದಲ್ಲಿ ನಡೆದಿದೆ. ಇದೇ ಏಪ್ರಿಲ್‌ನಲ್ಲಿ ದಲಿತ ಯುವಕ ಮತ್ತು ಯಾದವ ಸಮುದಾಯಕ್ಕೆ ಸೇರಿದ ಯುವತಿ ಅಂತರ್ಜಾತಿ ವಿವಾಹವಾಗಿದ್ದರು. ಆ ಬಳಿಕ ದಂಪತಿಗಳು ಬೇರೆ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು.
ಆದರೆ ಏಪ್ರಿಲ್ 16ರಂದು ಯಾದವ ಸಮುದಾಯವು ಗ್ರಾಮಸಭೆ ನಡೆಸಿ ಕುಟುಂಬವನ್ನು ಯಾವುದೇ ಕೆಲಸಗಳಿಗೆ ಸೇರಿಸಿಕೊಳ್ಳುವುದನ್ನು ನಿಷೇಧಿಸುವ ನಿರ್ಣಯವನ್ನು ಕೈಗೊಂಡಿದೆ. ಸಮುದಾಯದ ಹಿರಿಯರು ಈ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಅಂತರ್ಜಾತಿ ವಿವಾಹವಾಗಿದ್ದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ
“ಇದು ದಲಿತರ ಘನತೆಯನ್ನು ಕುಗ್ಗಿಸುವ ಕೆಲಸ” ಎಂದು ಜಾತಿ ತಾರತಮ್ಯ ವಿರೋಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪಲಮುರು ನಾಗಾರ್ಜುನ ಆರೋಪಿಸಿದ್ದಾರೆ.
“ಚಿಟ್ಯಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವೂ ದಲಿತರ ಮೇಲಿನ ಇತ್ತೀಚಿನ ದೌರ್ಜನ್ಯಗಳ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ” ಎಂದು ನಾಗಾರ್ಜುನ ದೂರಿದ್ದಾರೆ.
“ದಲಿತರ ಮೇಲೆ ಹಿಂಸಾಚಾರ, ಅವಮಾನ, ಸಾಮೂಹಿಕ ಬಹಿಷ್ಕಾರ ಮೊದಲಾದ ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಚಿಟ್ಯಾಲ ಸಬ್-ಇನ್‌ಸ್ಪೆಕ್ಟರ್‌ಗೆ ಮನವಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
