ದಲಿತ ಯುವತಿ ದೇವಸ್ಥಾನದಲ್ಲಿ ಮದುವೆಯಾಗಲು ಬಂದಿದ್ದಾಗ, ಅವರ ವಿವಾಹಕ್ಕೆ ದೇವಾಲಯದ ಅರ್ಚಕ ಮತ್ತು ಸಹಚರರು ಅಡ್ಡಿಪಡಿಸಿರುವ ಘಟನೆ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯದಲ್ಲಿ ಜಾತಿ ತಾರತಮ್ಯ ಎಸಗಿದ ಆರೋಪದ ಮೇಲೆ ಅರ್ಚಕ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೌರಿ ಜಿಲ್ಲೆಯ ಕಥೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ದಲಿತ ನಿವಾಸಿ ನಕುಲ್ ದಾಸ್ ಅವರ ಮಗಳಿಗೆ ವಿವಾಹ ನಿಶ್ಚಯವಾಗಿತ್ತು. ದೇವಸ್ಥಾನದಲ್ಲಿ ಮದುವೆ ಕಾರ್ಯ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ಆಕೆಯ ವಿವಾಹಕ್ಕೆ ಬ್ರಾಹ್ಮಣ ಸಮುದಾಯದ ಸದಸ್ಯರು ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲದೆ, ದೇವಾಲಯದ ಯಜ್ಞಶಾಲೆಗೆ ಅರ್ಚಕ ಬೀಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಾಲಯದಲ್ಲಿ ಜಾತಿ ದೌರ್ಜನ್ಯ ಎಸಗಿರುವ ಮಾಹಿತಿ ಪಡೆದ ಸ್ಥಳೀಯರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಬೀಗ ತೆರೆಸಿ, ಮದುವೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಜಾತಿ ತಾರತಮ್ಯ ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ.
ಯುವತಿಯ ತಂದೆ ನಕುಲ್ ದಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಹಣಕಾಸಿನ ತೊಂದರೆಯಿಂದಾಗಿ ನಮ್ಮ ಮಗಳ ಮದುವೆಯನ್ನು ಆದಿಶಕ್ತಿ ಮಾ ಭುವನೇಶ್ವರಿ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಿದೆವು. ನಾವು ದೇವಾಲಯದ ಬೀಗವನ್ನು ತೆರೆಯಲು ಕೇಳಿದಾಗ, ನಮ್ಮ ಜಾತಿಯನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸಲಾಗಿದೆ. ನಮ್ಮ ಕುಟುಂಬದ ಮೇಲೆ ದೇವಾಲಯದ ಅರ್ಚಕರು ಮತ್ತು ಇತರರು ಜಾತಿ ತಾರತಮ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದಾರೆ.