ದಲಿತ ವರನ ವಿವಾಹ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿ ವರ ಸೇರಿದಂತೆ ಹಲವು ಮಂದಿ ಮೇಲೆ ಸವರ್ಣೀಯರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ನಾಗ್ಲಾ ತಾಲ್ಫಿ ಪ್ರದೇಶದಲ್ಲಿ ನಡೆದಿದೆ.
ವಿವಾಹ ಮೆರವಣಿಗೆ ವೇಳೆ ಮೇಲ್ಜಾತಿಯ ಜನರ ಗುಂಪೊಂದು ದಲಿತ ವರನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಘಟನೆಯಲ್ಲಿ ವರನ ಕಡೆಯ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿ ಸವರ್ಣಿಯರ ವಿಕೃತಿ
ನಾಗ್ಲಾ ತಾಲ್ಫಿ ನಿವಾಸಿ ಅನಿತಾ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಸಂಜೆ ಮಥುರಾದಿಂದ ಅವರ ಮಗಳ ಮದುವೆ ಮೆರವಣಿಗೆ ಆರಂಭವಾಗಿದ್ದು, ಈ ವೇಳೆ ಘಟನೆ ನಡೆಸಿದೆ. ಅಡೆತಡೆ ಉಂಟಾದ ಕಾರಣದಿಂದಾಗಿ ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ಮನೆಯಲ್ಲಿ ವಿವಾಹ ನಡೆಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಗೀತದೊಂದಿಗೆ ಮೆರವಣಿಗೆ ಸಾಗುತ್ತಿದ್ದಂತೆ ಸವರ್ಣೀಯ ಪುರುಷರ ಗುಂಪೊಂದು ಕೋಲುಗಳು ಮತ್ತು ಲಾಠಿಗಳೊಂದಿಗೆ ಬಂದು ವರ ಮತ್ತು ಇತರ ಹಲವರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
In UP's Agra, a Dalit couple's wedding ceremony was attacked with sticks and other weapons by Thakur caste goons.
— Mission Ambedkar (@MissionAmbedkar) April 17, 2025
Several dalits are seriously injured. The state government's apathy towards dalits is horrifying. They're not safe anywhere. pic.twitter.com/2i6UumzvOl
“ದಾಳಿ ನಡೆಸಿದವರು ವರ ಮತ್ತು ಅವರ ಕುಟುಂಬದ ಹಲವರಿಗೆ ಥಳಿಸಿದ್ದಾರೆ. ಹಲ್ಲೆಯಿಂದಾಗಿ, ಮದುವೆ ಸ್ಥಳದಲ್ಲಿ ಯಾವುದೇ ಆಚರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇಡೀ ಸಮಾರಂಭವನ್ನು ನಮ್ಮ ಮನೆಯಲ್ಲೇ ಮಾಡಬೇಕಾಯಿತು” ಎಂದು ಅನಿತಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.
“ದಾಳಿಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಸಹಾಯಕ ಪೊಲೀಸ್ ಆಯುಕ್ತ ಪಿ ಕೆ ರೈ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದಿಹುಲೀ ದಲಿತ ಹತ್ಯಾಕಾಂಡ; 44 ವರ್ಷ ನಡೆದ ಕೇಸಿನ ಬೆವರು-ನೆತ್ತರು-ಕಂಬನಿಯ ಕತೆಯೇನು?
ದಾಳಿಗೆ ಸಂಬಂಧಿಸಿದಂತೆ ಒಂಬತ್ತು ಪರಿಚಿತ ಮತ್ತು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆಯೂ ದಲಿತ ಯುವಕನ ಮದುವೆ ಮೆರವಣಿಗೆ ಸವರ್ಣೀಯರು ಅಡ್ಡಿ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಈ ಹಿಂದೆ ಕುದುರೆ ಮೇಲೆ ಮೆರವಣಿಗೆ ಮಾಡಿದ ಕಾರಣಕ್ಕೆ ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ರಾಜಸ್ಥಾನದ ಅಜ್ಮೈರ್ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವರ ಕುದುರೆ ಏರಿ ದಿಬ್ಬಣದೊಂದಿಗೆ ವಿವಾಹ ನಿಗದಿಯಾದ ಸ್ಥಳಕ್ಕೆ ಬರಲು ಸವರ್ಣೀಯರ ವಿರೋಧ ವ್ಯಕ್ತವಾಗಿದ್ದ ಕಾರಣ ಸುಮಾರು 200 ಪೊಲೀಸರು ಭದ್ರತೆಯೊಂದಿಗೆ ವಿವಾಹವನ್ನು ನೆರವೇರಿಸಲಾಗಿತ್ತು.
ಇನ್ನು ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನವೇ ಇಂದೋರ್ ಜಿಲ್ಲೆಯ ದಲಿತ ವರ ದೇವಾಲಯ ಪ್ರವೇಶಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆ ವರ ಪೊಲೀಸ್ ರಕ್ಷಣೆಯಲ್ಲಿ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಹೀಗೆ ದಲಿತರ ಮೇಲೆ ಇಂದಿಗೂ ಜಾತಿ ದೌರ್ಜನ್ಯ ನಿಂತಿಲ್ಲ. ದೇಶ ಎಷ್ಟು ಮುಂದುವರಿದರೂ ದಲಿತ ಮೇಲಿನ ದೌರ್ಜನ್ಯ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ.
