ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು 134 ಜನ್ಮ ದಿನಾಚರಣೆಯಲ್ಲಿ ಏಪ್ರಿಲ್ 14ರಂದು (ಸೋಮವಾರ) ಆಚರಿಸಲಾಗಿದೆ. ಅದೇ ದಿನ, ಅಂಬೇಡ್ಕರ್ ಜನಸಿದ ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ದಲಿತ ವರನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿ, ಜಾತಿ ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ.
ಬಾಬಾ ಸಾಹೇಬ್ಅಂಬೇಡ್ಕರರು 1891ರ ಏಪ್ರಿಲ್ 14ರಂದು ಇಂಧೋರ್ ಜಿಲ್ಲೆಯ ಮಾಹೋ ಗ್ರಾಮದಲ್ಲಿ ಜನಿಸಿದ್ದರು. ಇದೀಗ, 134 ವರ್ಷಗಳ ಬಳಿಕ ಇದೇ ಜಿಲ್ಲೆಯಲ್ಲಿ ಅಂಬೇಡ್ಕರ್ ಜನ್ಮ ದಿನದಂದೇ ಜಾತಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಇಂಧೋರ್ ಜಿಲ್ಲೆಯ ಸಾಂಘ್ವಿ ಗ್ರಾಮದಲ್ಲಿ ದಲಿತ ಜೋಡಿಯ ವಿವಾಹ ನಿಶ್ಚಯವಾಗಿತ್ತು. ಗ್ರಾಮಕ್ಕೆ ಬಂದ ವರನನ್ನು ಪೂಜೆ ಸಲ್ಲಿಸಲು ದೇವಾಸ್ಥಾನಕ್ಕೆ ಕರೆದೊಯ್ದಾಗ ಅವರನ್ನು ಗ್ರಾಮದ ಪ್ರಬಲ ಜಾತಿಯವರು ತಡೆದಿದ್ದಾರೆ. ವರ ದಲಿತ ಎಂಬ ಕಾರಣಕ್ಕಾಗಿ ದೇವಾಲಯ ಪ್ರವೇಶಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 2 ಗಂಟೆಗಳ ಕಾಲ ಜಾತಿವಾದಿ ಪ್ರಬಲ ಜಾತಿಯವರು ಮತ್ತು ವಧುವಿನ ಕುಟುಂಬದ ನಡುವೆ ವಾಗ್ವಾದ ನಡೆದಿದೆ. ಅಂತಿಮವಾಗಿ, ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದ್ದು, ಪೊಲೀಸರ ಸಮ್ಮುಖದಲ್ಲಿ ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಈ ವರದಿ ಓದಿದ್ದೀರಾ?: ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’: ಅಂಬೇಡ್ಕರ್ ತೆರೆದಿಟ್ಟ ಬೌದ್ಧ ಭಾರತದ ಇತಿಹಾಸ
ಘಟನೆಯನ್ನು ಖಂಡಿಸಿರುವ ಅಖಿಲ ಭಾರತ ಬಲೈ ಮಹಾಸಂಘದ ಅಧ್ಯಕ್ಷ ಮನೋಜ್ ಪರ್ಮಾರ್, “ನಮ್ಮ ಸಮುದಾಯವು ಇನ್ನೂ ಜಾತಿ ತಾರತಮ್ಯ ಎದುರಿಸುತ್ತಿದೆ. ದಲಿತರನ್ನು ದೇವಾಲಯ ಪ್ರವೇಶಿಸದಂತೆ ತಡೆಯಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂಘ್ವಿ ಗ್ರಾಮದಲ್ಲಿ, ಪರಿಶಿಷ್ಟ ಜಾತಿಯ ವರನನ್ನು ದೇವಸ್ಥಾನ ಪ್ರವೇಶಿಸದಂತೆ ತಡೆಯಲಾಗಿಲ್ಲ. ಬದಲಾಗಿ, ಗರ್ಭಗುಡಿ ಪ್ರವೇಶಿಸದಂತೆ ತಡೆಯಲಾಗಿದೆ. ಗರ್ಭಗುಡಿಗೆ ಅರ್ಚಕರು ಮಾತ್ರವೇ ಹೋಗಬಹುದು ಎಂಬುದು ಗ್ರಾಮದ ದೇವಾಲಯದ ನಿಯಮವಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.