ಪ್ರಬಲ ಜಾತಿಗೆ ಪುರಷರ ಗುಂಪೊಂದು 62 ವರ್ಷದ ದಲಿತ ಮಹಿಳೆಗೆ ಕಾರಿನಲ್ಲಿ ಹಲವು ಬಾರಿ ಡಿಕ್ಕಿ ಹೊಡೆದು ಕೊಂದಿರುವ ಅಮಾನುಷ, ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಘಟನೆಯಲ್ಲಿ, ಇತರ ಐದು ಮಂದಿ ದಲಿತರು ಗಾಯಗೊಂಡಿದ್ದಾರೆ.
ಇತ್ತೀಚೆಗೆ, ಆರೋಪಿಗಳ ಗುಂಪು ಅತಿವೇಗವಾಗಿ ವಾಹನ ಚಾಲನೆ ಮಾಡಿದ್ದನ್ನು ದಲಿತರು ಪ್ರಶ್ನಿಸಿದ್ದರು. ಆ ಘಟನೆಯ ಬಳಿಕ ಮಹಿಳೆ ಮತ್ತು ಇತರರ ಮೇಲೆ ದಾಳಿ ಮಾಡಲಾಗಿದೆ. ದಲಿತರಿಗೆ ಜಾತಿ ನಿಂದನೆ ಮಾಡಿರುವ ಆರೋಪಿಗಳು, ಬಳಿಕ ತಮ್ಮ ಕಾರಿನಲ್ಲಿ ಹಲವು ಬಾರಿ ಮಹಿಳೆಗೆ ಡಿಕ್ಕಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯು ಬುಲಂದ್‌ಶಹರ್ ಪ್ರದೇಶದ ಸುನೆಹ್ರಾ ಗ್ರಾಮದಲ್ಲಿ ನಡೆದಿದೆ. ವಿಕೃತ ದಾಳಿಯಲ್ಲಿ ಶೀಲಾ ದೇವಿ ಅವರು ಸಾವನ್ನಪಿದ್ದಾರೆ.
ಶೀಲಾ ದೇವಿ ಅವರು ತಮ್ಮ ಮನೆಯ ಹೊರಗೆ ಕುಳಿತಿದ್ದಾಗ, ಅದೇ ಗ್ರಾಮದ ಪ್ರಬಲ ಜಾತಿಯ ತಪೇಶ್ ಸಿಂಗ್ ಮತ್ತು ಅವರ ಮಗ ಪ್ರಿಯಾಂಶು ಸಿಂಗ್ ಹಾಗೂ ಇತರರು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಕಾರಿನ ವೇಗವನ್ನು ಕಡಿಮೆ ಮಾಡುವಂತೆ ದಲಿತ ಮುಖಂಡ ಭೂಪೇಂದ್ರ ಕೂಗಿದ್ದಾರೆ. ಇದರಿಂದ, ಕುಪಿತಗೊಂಡ ಆರೋಪಿಗಳು ಕಾರಿನಿಂದ ಹೊರ ಬಂದು ಭೂಪೇಂದ್ರ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು
ಘಟನೆಯ ಬಳಿಕ, ಆರೋಪಿಗಳು ಶೀಲಾ ದೇವಿ ಅವರೊಂದಿಗೆ ಕುಳಿತಿದ್ದ ದಲಿತರ ಗುಂಪಿನ ಮೇಲೆ ಕಾರು ಚಲಾಯಿಸಿದ್ದಾರೆ. ಹಲವು ಬಾರಿ ಕಾರನ್ನು ಹಿಂದಕ್ಕೂ-ಮುಂದಕ್ಕೂ ಚಲಾಯಿಸಿ, ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ, ಶೀಲಾ ದೇವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಐದು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
“ತಪೇಶ್ ಕುಮಾರ್, ಪ್ರಿಯಾಂಶು ಸಿಂಗ್, ವರುಣ್ ಕುಮಾರ್, ಅತುಲ್ ಸಿಂಗ್, ಕೃಷ್ಣ ಸಿಂಗ್ ಮತ್ತು ಮಾನವ್ ಕುಮಾರ್ ಎಂಬ ಆರು ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಕೊಲೆ, ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ, ಗಲಭೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ” ಎಂದು ಬುಲಂದ್‌ಶಹರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.