ಕಳೆದ ವಾರ ರಾಜ್ಯ ಪೊಲೀಸರು ಬಂಧಿಸಿದ್ದ ರೈತರನ್ನು ವಿವಿಧ ಜೈಲುಗಳಿಂದ ಬಿಡುಗಡೆ ಮಾಡಿದ ನಂತರ ಪಂಜಾಬ್ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಒಂದು ಲೋಟ ನೀರು ಕುಡಿದಿದ್ದಾರೆ. ಆದರೆ ಇನ್ನೂ ಕೂಡಾ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಅಂತ್ಯಗೊಳಿಸಿಲ್ಲ ಎಂದು ರೈತ ನಾಯಕ ಅಭಿಮನ್ಯು ಕೊಹರ್ ಶನಿವಾರ ಹೇಳಿದ್ದಾರೆ.
ದಲ್ಲೇವಾಲ್ ನೀರು ಕುಡಿದು ಉಪವಾಸ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಪಂಜಾಬ್ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ನಾಯಕ ಅಭಿಮನ್ಯು, “ದಲ್ಲೇವಾಲ್ ಉಪವಾಸ ಅಂತ್ಯಗೊಳಿಸಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ರೈತರ ಬೇಡಿಕೆಗಳು ಈಡೇರುವವರೆಗೆ ಆಮರಣಾಂತ ಉಪವಾಸ ನಿಲ್ಲಿಸುವುದಿಲ್ಲ: ದಲ್ಲೇವಾಲ್
“ಎಲ್ಲಾ ರೈತರ ಬಿಡುಗಡೆಯ ನಂತರವೇ ತಾನು ನೀರು ಕುಡಿಯುವುದಾಗಿ ದಲ್ಲೇವಾಲ್ ಹೇಳಿದ್ದರು. ಅದರಂತೆ ರೈತ ನಾಯಕರನ್ನು ಬಿಡುಗಡೆ ಮಾಡಿದ ನಂತರ ದಲ್ಲೇವಾಲ್ ಒಂದು ಲೋಟ ನೀರು ಕುಡಿದಿದ್ದಾರೆ. ಆದರೆ ದಲ್ಲೇವಾಲ್ ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಹರಡಲಾಗಿದೆ. ಈ ಬಗ್ಗೆ ನಾವು ಸ್ಪಷ್ಟಣೆ ನೀಡಲು ಬಯಸುತ್ತೇವೆ. ದಲ್ಲೇವಾಲ್ ಅವರು ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಮಾರ್ಚ್ 19ರಂದು ಹರಿಯಾಣದ ಖಾನೌರಿ ಮತ್ತು ಶಂಭು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ ದಲ್ಲೇವಾಲ್ ರೈತರ ಬಿಡುಗಡೆಯಾಗುವವರೆಗೂ ನೀರು ಕುಡಿಯುವುದಿಲ್ಲ ಎಂದು ಹೇಳಿದ್ದರು. ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 70 ವರ್ಷದ ದಲ್ಲೇವಾಲ್ ಹಲವು ತಿಂಗಳುಗಳಿಂದ ಉಪವಾಸ ನಡೆಸುತ್ತಿದ್ದಾರೆ. ಆರಂಭದಲ್ಲಿ ವೈದ್ಯಕೀಯ ನೆರವು ನಿರಾಕರಿಸಿದ್ದ ದಲ್ಲೇವಾಲ್ ಇದೀಗ ನೆರವು ಪಡೆಯುತ್ತಿದ್ದಾರೆ.
