ಭಾರತವನ್ನು ತೊರೆಯುವಂತೆ ಪಾಕಿಸ್ತಾನದ ಪ್ರಜೆಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಇಂದಿಗೆ (ಏಪ್ರಿಲ್ 27) ಮುಗಿಯಲಿದೆ. ಹಲವಾರು ಪಾಕ್ ಪ್ರಜೆಗಳು ಪಾಕಿಸ್ತಾನಕ್ಕೆ ಮರಳಲಾಗದೆ ಪರಿತಪಿಸುತ್ತಿದ್ದಾರೆ. ಅವರಲ್ಲಿ ಹಲವರು ಹಿಂದುಗಳೂ ಇದ್ದಾರೆ.
ಈಗ, ಪಾಕಿಸ್ತಾನಕ್ಕೆ ವಾಪಸ್ ಹೋಗಲು ಮನಸ್ಸಿಲ್ಲದೆ, ಕಂಗಾಲಾಗಿರುವವರಲ್ಲಿ, ಪಾಕಿಸ್ತಾನದಲ್ಲಿ ಹುಟ್ಟಿ, ಭಾರತದ ಸೊಸೆಯಾಗಿರುವ ಸೀಮಾ ಹೈದರ್ ಕೂಡ ಒಬ್ಬರು.
2023ರಲ್ಲಿ ಪ್ರೀತಿ ಅರಸಿ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದ ಸೀಮಾ ಅವರು, ಉತ್ತರ ಪ್ರದೇಶದ ಸಚಿನ್ ಮೀನಾ ಎಂಬವರನ್ನು ವಿವಾಹವಾಹಿದ್ದರು. ಒಂದು ಮಗುವಿಗೂ ಜನ್ಮ ನೀಡಿದ್ದಾರೆ. ಆದರೆ, ಇದೀಗ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಹೋಗುವಂತೆ ಸೂಚನೆ ನೀಡಲಾಗಿದೆ. ಅವರು ಭಾರತವನ್ನು ತೊರೆಯುವುದಿಲ್ಲ ಎಂದಿದ್ದಾರೆ.
“ನಾನು ಭಾರತದ ಸೊಸೆ. ನನ್ನ ಪತಿ, ಮಗು ಭಾರತದಲ್ಲಿಯೇ ಇದ್ದಾರೆ. ನಾನು ಭಾರತವನ್ನು ತೊರೆಯುವುದಿಲ್ಲ” ಎಂದು ಸೀಮಾ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೀಮಾ, “ದಯವಿಟ್ಟು ನನ್ನನ್ನು ಇಲ್ಲಿಯೇ ಇರಲು ಬಿಡಿ. ನಾನು ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ನಾನು ಇಲ್ಲಿಯೇ ಇರುತ್ತೇನೆ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಕಾರಣವೆಂದು ಭಾರತ ಆರೋಪಿಸಿದೆ. ಪ್ರತಿಕಾರವಾಗಿ ಪಾಕಿಸ್ತಾನದ ಪ್ರಜೆಗಳಿಗೆ ಭಾರತ ತೊರೆಯುವಂತೆ ಕೇಂದ್ರ ಸರ್ಕರ ನಿರ್ದೇಶಿಸಿದೆ. ಪಾಕ್ ಪ್ರಜೆಗಳು ತಮ್ಮ ವೀಸಾಗಳನ್ನು ಏಪ್ರಿಲ್ 17ರ ಒಳಗೆ ಸರ್ಕಾರಕ್ಕೆ ವಾಪಸ್ ಕೊಡುವಂತೆ ಸೂಚಿಸಿದೆ.