ಹಲ್ದ್‌ವಾನಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪಡೆಗಳನ್ನು ಕಳಿಸುವಂತೆ ಉತ್ತರಾಖಂಡ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿದೆ. ಸದ್ಯ ಗಲಭೆ ತಹಬದಿಗೆ ಬಂದಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರಯಲಾಗಿದೆ. ಇಂಟರ್‌ನೆಟ್ ಸಂಪರ್ಕ ಪುನರ್‌ಸ್ಥಾಪನೆಯಾಗಿದೆ, ಜನಜೀವನ ಕೂಡ ಸಹಜಸ್ಥಿತಿಗೆ ಮರಳುತ್ತಿದೆ.
ಈ ನಡುವೆ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾಗಿರುವ ಅಬ್ದುಲ್ ಮಾಲಿಕ್ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಹಲ್ದ್‌ವಾನಿಯ ಭಾನುಲೋಪುರ ಪ್ರದೇಶದಲ್ಲಿ ಅತಿಕ್ರಮಣ ಆಸ್ತಿ ತೆರವು ಕಾರ್ಯಾಚರಣೆಯಲ್ಲಿ ಮಸೀದಿ ಮತ್ತು ಮದರಸಾ ಕೆಡವಲು ಸ್ಥಳೀಯ ಆಡಳಿತ ಮುಂದಾದಾಗ ಹಿಂಸಾಚಾರ ಭುಗಿಲೆದ್ದು ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಆದೇಶದ ಪ್ರತಿ ತೋರಿಸದೆ ಜಿಲ್ಲಾಡಳಿತ ತೆರವು ಕಾರ್ಯಾಚರಣೆಗೆ ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅತಿಕ್ರಮಣ ತೆರವು ಮಾಡಲು ಇನ್ನಷ್ಟು ಕಾಲಾವಕಾಶ ಕೊಡಬೇಕು ಎನ್ನುವ ಸ್ಥಳೀಯರ ಮನವಿಗೆ ಆಡಳಿತ ಒಪ್ಪಿರಲಿಲ್ಲ. ಆಡಳಿತ ಒತ್ತಡಪೂರ್ವಕ ತೆರವು ಕಾರ್ಯಾಚರಣೆ ನಡೆಸಿದಾಗ ನಿವಾಸಿಗಳು ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟಕ್ಕೆ ಪ್ರತಿಯಾಗಿ ಪೊಲೀಸರು ಸ್ಥಳದಲ್ಲೇ ಗುಂಡು ಹಾರಿಸಿದ್ದರು. ಸ್ಥಳೀಯ ಸಮುದಾಯ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಕ್ರಿಯೆ ನೀಡಿತ್ತು.
ಉತ್ತರಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಾಲ್ಕು ಹೆಚ್ಚುವರಿ ಅರೆಸೇನಾ ತುಕಡಿಗಳನ್ನು ಕಳಿಸುವಂತೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ
ಭಾನುಲೋಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿಕ್ರಮಣ ನೆಲಸಮ ಮಾಡುವ ಸಂದರ್ಭದಲ್ಲಿ ಉಂಟಾದ ಕಾನೂನು ಸುವ್ಯವಸ್ಥೆಯ ನಿರಂತರ ಅಡಚಣೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ನಿರ್ವಹಿಸಲು ನಾಲ್ಕು ಹೆಚ್ಚುವರಿ ಅರೆಸೇನಾ ತುಕಡಿಗಳನ್ನು ಜಿಲ್ಲೆಗೆ ಕಳಿಸುವಂತೆ ಉತ್ತರಾಖಂಡ ಆಡಳಿತದ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದದ್ದಾರೆ.
ಇದೀಗ ಭಾನುಲೋಪುರದಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಪೊಲೀಸರು ಕಟ್ಟೆಚ್ಚರ ಮುಂದುವರೆಸಿದ್ದಾರೆ.