ಸರ್ಕಾರಿ ಸ್ವಾಮ್ಯದ ದೂರದರ್ಶನ ಲೋಗೋ ಬಣ್ಣವನ್ನು ಕೇಸರೀಕರಣಗೊಳಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ಡಿಡಿ ಲೋಗೋ ಬಣ್ಣ ಬದಲಿಸಿರುವುದು ಕೇಸರೀಕರಣವನ್ನು ಎಲ್ಲಡೆ ಬಳಸುವ ಬಿಜೆಪಿ ಪಿತೂರಿಯ ಮುನ್ಸೂಚನೆ ಎಂದು ತಿಳಿಸಿದ್ದಾರೆ.
“ಲೋಗೋ ಬದಲಾವಣೆ ಕೇಸರೀಕರಣದ ಮುನ್ಸೂಚನೆಯಾಗಿದೆ. 2024ರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಇಂತಹ ಪ್ಯಾಸಿಸಂ ವಿರುದ್ಧ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಲಿದ್ದಾರೆ. ತಮಿಳು ಕವಿ ತಿರುನಳ್ಳುವರ್ ಅವರನ್ನು ಕೇಸರೀಕರಣಗೊಳಿಸಲಾಗಿದೆ. ತಮಿಳುನಾಡಿನ ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ” ಎಂದು ಸ್ಟಾಲಿನ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಗೋ ಬದಲಾವಣೆ ಬಗ್ಗೆ ಪ್ರತಿಪಕ್ಷಗಳು ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇದು ತೀವ್ರ ಅಕ್ರಮವಾಗಿದ್ದು, ಬಿಜೆಪಿ ಪರವಾದ ಪಕ್ಷಪಾತವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್ ಲೋಗೊ ಬಣ್ಣವನ್ನು ಕೇಸರಿ ಬಣ್ಣದೊಂದಿಗೆ ಬದಲಾಯಿಸಲಾಗಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿರುವ ಡಿಡಿ ನ್ಯೂಸ್, ನಮ್ಮ ಮೌಲ್ಯಗಳು ಹಾಗೆ ಉಳಿದುಕೊಂಡಿದ್ದು,ಹೊಸ ಅವತಾರದೊಂದಿಗೆ ನಾವು ಈಗ ಲಭ್ಯವಿದ್ದೇವೆ. ಎಲ್ಲ ನೂತನ ಡಿಡಿ ನ್ಯೂಸ್ ಅನುಭವದೊಂದಿಗೆ ಹಿಂದೆಂದಿಗಿಂತಲೂ ಹೊಸ ಸುದ್ದಿಯ ಪಯಣಕ್ಕೆ ಸಿದ್ದರಾಗಿ ಎಂದು ತಿಳಿಸಿತ್ತು.
ಡಿಡಿ ನ್ಯೂಸ್ ಲೋಗೊಗೆ ಕೇಸರಿ ಬಣ್ಣ ಕೇಸರಿಕರಣಗೊಳಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ತನ್ನ ಕೇಸರಿ ಬಣ್ಣವನ್ನು ಸರ್ಕಾರಿ ಅಧೀನದ ಮಾಧ್ಯಮ ಸಂಸ್ಥೆಗೂ ಬಳಿದಿದೆ. ಕೇಸರಿ ಬಣ್ಣವು ಹಿಂದುತ್ವದೊಂದಿಗೆ ಸಂಬಂಧ ಹೊಂದದ್ದು, ಈ ಸಿದ್ದಾಂತವನ್ನು ಮಾಧ್ಯಮ ಸಂಸ್ಥೆಯ ಮೂಲಕ ಪ್ರತಿಪಾದಿಸಲು ಹೊರಟಿದೆ ಎಂದು ಹಲವರು ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸರ್ಕಾರ್, ರಾಷ್ಟ್ರೀಯ ಪ್ರಸಾರ ಮಾಧ್ಯಮ ದೂರದರ್ಶನದ ಐತಿಹಾಸಿಕವಾದ ಪ್ರಮುಖ ಲೋಗೊ ಕೇಸರಿಕರಣಗೊಂಡಿದೆ. ಪ್ರಸಾರ ಭಾರತಿಯ ಮಾಜಿ ಸಿಇಒ ಆಗಿ ಕೇಸರಿಕರಣದ ಎಚ್ಚರಿಕೆ ಹಾಗೂ ಅನುಭವದೊಂದಿಗೆ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ. ಇದು ಇನ್ನು ಪ್ರಸಾರ ಭಾರತಿಯಲ್ಲ, ಇದು ಪ್ರಚಾರ ಭಾರತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದರು.
ದೂರದರ್ಶನವು ಪ್ರಸಾರ ಭಾರತಿಯ ಅಂಗಸಂಸ್ಥೆಯಾಗಿದ್ದು, ಆಲ್ ಇಂಡಿಯಾ ರೇಡಿಯೋ ಸೇರಿದಂತೆ ಹಲವು ಅಂಗಸಂಸ್ಥೆಗಳಿವೆ.
