ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮೂವರು ಆಯುಕ್ತರು ಸೇರಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು.
“ಮತ ಕಳ್ಳತನ” ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆರೋಪಗಳ ಬಗ್ಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ರಾಜಕೀಯ ಪಕ್ಷವು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುತ್ತದೆ. ಆಯೋಗವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಮತ್ತು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡಲು ಆಯೋಗ ಬದ್ಧವಾಗಿದೆ. ದೇಶದಾದ್ಯಂತ ನಡೆಯುವ ಚುನಾವಣಾ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದೆ. 1 ಕೋಟಿಗೂ ಅಧಿಕ ಅಧಿಕಾರಿಗಳು, ಬೂತ್ ಮಟ್ಟದ ಏಜೆಂಟರು ದೇಶಾದ್ಯಂತ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ಹಾಗೆಯೇ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನು ಮತದಾರರಾಗಿ ನೋಂದಾಯಿಸಿಕೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಕರೆ ನೀಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6.5 ಲಕ್ಷ ಮತಗಳ ಪೈಕಿ 1 ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ವಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ವಿಶೇಷವಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 6.5 ಲಕ್ಷ ಮತಗಳ ಪೈಕಿ 1 ಲಕ್ಷಕ್ಕೂ ಅಧಿಕ ಮತಗಳು ಕಳ್ಳತನಕ್ಕೆ ಒಳಗಾಗಿವೆ ಎಂದು ಹೇಳಿದ್ದರು. ಅಲ್ಲದೆ, ಒಂದೇ ಮನೆಯಲ್ಲಿ 80 ಜನರು ನೋಂದಾಯಿಸಿಕೊಂಡಿದ್ದು, 120 ಚದರ ಅಡಿ ಕೋಣೆಯಲ್ಲಿ ಬಹುಸಂಖ್ಯೆ ಮತದಾರರು ಇದ್ದರು ಎಂದು ಉದಾಹರಣೆಗಳನ್ನು ನೀಡಿದ್ದರು. ಇದು 48 ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿದೆ ಎಂದು ಅವರು ಆರೋಪಿಸಿದ್ದರು.
https://shorturl.fm/kuHVP