ಮಹಿಳೆಯೊಬ್ಬರು ತಾವು ಪಡೆದಿದ್ದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿಲ್ಲವೆಂಬ ಕಾರಣಕ್ಕೆ, ಆಕೆಯ ತಲೆ ಬೋಳಿಸಿ, ಅಮಾನುಷವಾಗಿ ಥಳಿಸಿರುವ ಅಮಾನವೀಯ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಗೆ ಅಗರ್ತಲಾದಲ್ಲಿರುವ ಸ್ವ-ಸಹಾಯ ಗುಂಪು (ಎಸ್‌ಎಚ್‌ಜಿ) ಸಾಲ ನೀಡಿತ್ತು. ಆ ಸಾಲವನ್ನು ಮರುಪಾವತಿ ಮಾಡಿಲ್ಲವೆಂದು ಎಸ್‌ಎಚ್‌ಜಿಯ ಪಾಲುದಾರರು ಆಕೆಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಮಹಿಳಾ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಬಿಶಾಲ್‌ಗಢ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣಕಾಸಿನ ವಿವಾದದಿಂದಾಗಿ ಎಚ್‌ಎಸ್‌ಜಿಯ ಮಹಿಳೆಯ ಗುಂಪು ತನ್ನ ತಲೆ ಬೋಳಿಸಿ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
“ನನ್ನ ಪತಿ ಎಸ್‌ಎಚ್‌ಜಿಯಿಂದ ಸಾಲ ಪಡೆದಿದ್ದರು. ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಮರುಪಾವತಿ ಸಮಯ ನೀಡುವಂತೆ ಎಚ್‌ಎಚ್‌ಜಿ ಬಳಿ ಮನವಿ ಮಾಡಿದ್ದೆವು. ಆದರೆ, ನನ್ನ ಮನೆಗೆ ನುಗ್ಗಿದ ಸುಮಾರು 15 ಮಹಿಳೆಯರಿದ್ದ ಗುಂಪು, ನನ್ನನ್ನು ಮನೆಯಿಂದ ಹೊರಗೆ ಎಳೆದೊಯ್ದು ಅವಾಚ್ಯವಾಗಿ ನಿಂದಿಸಿ, ಥಳಿಸಿದ್ದಾರೆ. ನನ್ನ ತಲೆ ಬೋಳಿಸಿದ್ದಾರೆ” ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 74, 115(2) ಮತ್ತು 3 (5) ಅಡಿ ಪ್ರಕರಣ ದಾಖಲಾಗಿದೆ.