ಉತ್ತರ ಪ್ರದೇಶದ 16 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಲಿಸುವ ಸ್ಲೀಪರ್ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ದಾರುಣ ಘಟನೆಯೊಂದು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ವರದಿಯಾಗಿದೆ. ಸುಮಾರು 47 ಕಿಲೋಮೀಟರ್ಗಳವರೆಗೆ ಬಸ್ ಚಲಾಯಿಸುತ್ತಲೇ ಈ ಕೃತ್ಯವೆಸಗಲಾಗಿದ್ದು, ಬಳಿಕ ಆಕೆಯನ್ನು ಪ್ರಮುಖ ಬಸ್ ನಿಲ್ದಾಣದ ಬಳಿ ಇಳಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 4ರ ರಾತ್ರಿ ಕಾಶ್ಮೀರ್ ಗೇಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತೆಯು ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ 11ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕುಟುಂಬದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮನೆಯವರಿಗೆ ತಿಳಿಸದೆ ಆಕೆ ತನ್ನ ಸಂಬಂಧಿಕರ ಮನೆಗೆ ಹೋಗಲು ನೋಯ್ಡಾಗೆ ಹೊರಟಿದ್ದಳು. ಧಾರಾಕಾರ ಮಳೆ ಮತ್ತು ಕತ್ತಲೆಯ ನಡುವೆ, ಆಕೆ ದಾರಿ ತಪ್ಪಿ ‘ಪರಿ ಚೌಕ್’ ಬಳಿ ಇಳಿದಿದ್ದಾಳೆ.
ಮಳೆಯಲ್ಲಿ ಸಿಲುಕಿದ್ದ ವಿದ್ಯಾರ್ಥಿನಿ, ಆ ಮಾರ್ಗವಾಗಿ ಬಂದ ಖಾಲಿ ಸ್ಲೀಪರ್ ಬಸ್ ಅನ್ನು ನಿಲ್ಲಿಸಿ ಸಹಾಯ ಕೇಳಿದ್ದಾಳೆ. ತಾವು ನೋಯ್ಡಾ ಸೆಕ್ಟರ್ 63ರ ಕಡೆಗೆ ಹೋಗುತ್ತಿರುವುದಾಗಿ ನಂಬಿಸಿದ ಚಾಲಕ ಮತ್ತು ನಿರ್ವಾಹಕ ಆಕೆಯನ್ನು ಬಸ್ ಹತ್ತಿಸಿಕೊಂಡಿದ್ದಾರೆ.
ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆಯೇ ನಿರ್ವಾಹಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಬಳಿಕ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಹಾಗೂ ವಿರೋಧಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೃತ್ಯದ ನಂತರ ತಡರಾತ್ರಿ ಕಾಶ್ಮೀರ್ ಗೇಟ್ ಬಸ್ ನಿಲ್ದಾಣದ ಸಮೀಪದ ರಿಂಗ್ ರೋಡ್ ಬಳಿ ಆಕೆಯನ್ನು ಅಸಹಾಯಕ ಸ್ಥಿತಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಕಷ್ಟಕ್ಕೀಡಾದ ವಿದ್ಯಾರ್ಥಿನಿ ತಕ್ಷಣವೇ ಕಾಶ್ಮೀರ್ ಗೇಟ್ ಪೊಲೀಸರನ್ನು ಸಂಪರ್ಕಿಸಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾಳೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ತಿಮರ್ಪುರದ ಬಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾದ ಸ್ಲೀಪರ್ ಬಸ್ ಅನ್ನು ಜಪ್ತಿ ಮಾಡಿದ್ದಾರೆ. ಹೆಚ್ಚಿನ ತಪಾಸಣೆಗಾಗಿ ವಾಹನವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ.
ಯಾಂತ್ರಿಕ ದೋಷದ ಕಾರಣ ಸೂರಜ್ಪುರದ ಗ್ಯಾರೇಜ್ಗೆ ಬಸ್ ಅನ್ನು ದುರಸ್ತಿಗೆ ಬಿಡಲಾಗಿತ್ತು. ರಿಪೇರಿ ಮುಗಿಸಿಕೊಂಡು ಖಾಲಿ ಬಸ್ ಅನ್ನು ತಿಮರ್ಪುರಕ್ಕೆ ತರುತ್ತಿದ್ದಾಗ ಪರಿ ಚೌಕ್ ಬಳಿ ವಿದ್ಯಾರ್ಥಿನಿ ಇವರಿಗೆ ಸಿಕ್ಕಿದ್ದಾಳೆ. ಬಸ್ ಪರಿ ಚೌಕ್ನಿಂದ ಕಾಶ್ಮೀರ್ ಗೇಟ್ವರೆಗೆ ಸುಮಾರು 47 ಕಿ.ಮೀ ಚಲಿಸಿದೆ. ಸ್ಲೀಪರ್ ಕಂಪಾರ್ಟ್ಮೆಂಟ್ಗಳಿಗೆ ಪರದೆಗಳನ್ನು ಅಳವಡಿಸಿದ್ದರಿಂದ ಒಳಗಡೆ ನಡೆಯುತ್ತಿದ್ದ ಕೃತ್ಯ ಹೊರಗಿನವರಿಗೆ ತಿಳಿದಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.




