ಭಾರತದಲ್ಲಿ ಚೀನಾ ಪರ ಪ್ರಚಾರ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪದಲ್ಲಿ ನ್ಯೂಸ್‌ಕ್ಲಿಕ್ ಮಾನವ ಸಂಪನ್ಮೂಲ (ಎಚ್‌ಆರ್) ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದಾಖಲಾಗಿದ್ದ ಯುಎಪಿಎ ಪ್ರಕರಣದಲ್ಲಿ ಅವರು ವಿಚಾರಣಾ ನ್ಯಾಯಾಲಯದಿಂದ ಕ್ಷಮಾದಾನ ಪಡೆದಿದ್ದು, ಇದೀಗ, ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
“ಚಕ್ರವರ್ತಿ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲು ‘ಅಭ್ಯಂತರವಿಲ್ಲ’ ಎಂದು ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ತಿಳಿಸಿದೆ. ಚಕ್ರವರ್ತಿ ಕೂಡ ತಮ್ಮ ಹೇಳಿಕೆಗಳನ್ನು ಸಿಆರ್‌ಪಿಸಿ ಸೆಕ್ಷನ್ 164 ಅಡಿಯಲ್ಲಿ ದಾಖಲಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜವಾದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ” ಎಂದು ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿದ್ದ ಪೀಠವು ಆದೇಶದಲ್ಲಿ ಹೇಳಿದೆ.
“ಚಕ್ರವರ್ತಿ ಅವರ ವೈದ್ಯಕೀಯ ಸ್ಥಿತಿ ಮತ್ತು ಪ್ರಕರಣದ ಸಂಗತಿಗಳು ಹಾಗೂ ಸಂದರ್ಭಗಳ ಜೊತೆಗೆ ಪ್ರಾಸಿಕ್ಯೂಷನ್ ನೀಡಿದ ನಿರಾಕ್ಷೇಪಣೆಯನ್ನು ಹೈಕೋರ್ಟ್ ಪರಿಗಣಿಸಿದೆ. 25,000 ರೂಪಾಯಿಗಳ ‘ವೈಯಕ್ತಿಕ ಬಾಂಡ್’ಅನ್ನು ಚಕ್ರವರ್ತಿ ಒದಗಿಸಿದ ಮೇಲೆ, ಅವರನ್ನು ಬಂಧನದಿಂದ ಬಿಡುಗಡೆ ಮಾಡಬಹುದು” ಎಂದು ಹೈಕೋರ್ಟ್ ಹೇಳಿದೆ.
ಚಕ್ರವರ್ತಿ ಅವರ ವೈದ್ಯಕೀಯ ಸ್ಥಿತಿಯನ್ನು ಗಮನಿಸಿದ ನ್ಯಾಯಮೂರ್ತಿ ಶರ್ಮಾ, “ಚಕ್ರವರ್ತಿ ಅವರು ಪೋಲಿಯೊ ಸಮಸ್ಯೆಗೆ ತುತ್ತಾಗಿದ್ದಾರೆ. ಅವರಿಗೆ ಪಾರ್ಶ್ವವಾಯು ಸಮಸ್ಯೆಯಾಗಿದ್ದು, 59% ಶಾಶ್ವತ ದೈಹಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದಾರೆ. ಗಾಲಿಕುರ್ಚಿಯ ಮೇಲೆ ಅವಲಂಬಿತರಾಗಿದ್ದಾರೆ. ಅವರ ವೈದ್ಯಕೀಯ ಸ್ಥಿತಿಯ ವಿಚಾರದಲ್ಲಿ ಪ್ರಾಸಿಕ್ಯೂಷನ್‌ನಿಂದ ತಕಾರಾರು ಬಂದಿಲ್ಲ. ಅರ್ಜಿದಾರರ ವೈದ್ಯಕೀಯ ಸ್ಥಿತಿಯು ವಿಶೇಷ ಪರಿಗಣನೆಗೆ ಅರ್ಹವಾಗಿದೆ. ಒಬ್ಬ ವ್ಯಕ್ತಿಯ ದೈಹಿಕ ಅಂಗವೈಕಲ್ಯವು ಆತನ ಯೋಗಕ್ಷೇಮ ಮತ್ತು ದೈನಂದಿನ ಕಾರ್ಯನಿರ್ವಹಣೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಂದರ್ಭಗಳಲ್ಲಿ ನ್ಯಾಯಾಲಯವು ನ್ಯಾಯಯುತವಾಗಿ ತನ್ನ ಜವಾಬ್ದಾರಿ ನಿರ್ವಹಿಸಬೇಕು” ಎಂದು ಹೇಳಿದ್ದಾರೆ.
ಚಕ್ರವರ್ತಿ ಅವರನ್ನು 2023ರ ಅಕ್ಟೋಬರ್ 3ರಂದು ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದರು. ಅವರಿಗೆ ಜನವರಿ 6ರಂದು ಕ್ಷಮಾದಾನ ನೀಡಿದ್ದ ಸೆಷನ್ಸ್ ನ್ಯಾಯಲಯ, “ಚಕ್ರವರ್ತಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನೈಜ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಸ್ವಂತ ಇಚ್ಛೆಯಿಂದ ನೀಡಿದ ಹೇಳಿಕೆಯು ಉತ್ತಮ ಸಾಕ್ಷ್ಯವಾಗಿದೆ” ಎಂದು ಹೇಳಿತ್ತು.
ಚಕ್ರವರ್ತಿ ಅವರಿಗೆ ಕ್ಷಮಾದಾನ ನೀಡಿದ್ದ ವಿಚಾರಣಾ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿತ್ತು. “ಚಕ್ರವರ್ತಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಂದರ್ಭಗಳ ಸಂಪೂರ್ಣ ಮತ್ತು ನಿಜವಾದ ಮಾಹಿತಿಯನ್ನು ಬಹಿರಂಗಪಡಿಸಬೇಕು. ಉದ್ದೇಶಪೂರ್ವಕವಾಗಿ ಯಾವುದೇ ವಿಚಾರಗಳನ್ನು ಮರೆಮಾಚಬಾರದು. ಉದ್ದೇಶಪೂರ್ವಕವಾಗಿ ಸುಳ್ಳು ಪುರಾವೆಗಳನ್ನು ನೀಡಬಾರದು” ಎಂದು ಹೇಳಿತ್ತು.
ಇದೇ ಪ್ರಕರಣದಲ್ಲಿ ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಕೂಡ ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ.