ಖ್ಯಾತ ಶಿಕ್ಷಕ ಫೈಸಲ್ ಖಾನ್ (ಖಾನ್ ಸರ್) ಮತ್ತು ಇತರ ಹಲವರು ತಮ್ಮ ವಿರುದ್ಧ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಹಿರಿಯ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಹಾಗೂ ಟಿವಿ ಟುಡೇ ನೆಟ್‌ವರ್ಕ್ (TV Today Network) ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆನ್‌ಲೈನ್‌ನಲ್ಲಿ “ಸ್ಟಾರ್ ಶಿಕ್ಷಕರ” ಹೆಚ್ಚುತ್ತಿರುವ ಪ್ರಭಾವದ ಕುರಿತು ಅಂಜನಾ ಅವರು ಮಾಡಿದ ಟೀಕೆಗೆ ಪ್ರತಿಕ್ರಿಯೆಯಾಗಿ ಈ ವಿವಾದ ಸೃಷ್ಟಿಯಾಗಿದೆ. ಜಸ್ಟೀಸ್ ನೀನಾ ಬನ್ಸಾಲ್ ಕೃಷ್ಣ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ತಮ್ಮ ಮತ್ತು ಇಂಡಿಯಾ ಟುಡೇ ಗ್ರೂಪ್ ವಿರುದ್ಧ ಪ್ರಕಟಿಸಲಾಗಿರುವ ಅವಹೇಳನಕಾರಿ ವಿಷಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಪ್ರತಿವಾದಿಗಳು ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಪೋಸ್ಟ್‌ಗಳನ್ನು ಹಾಕದಂತೆ ನಿರ್ಬಂಧಿಸಬೇಕು ಹಾಗೂ ₹2 ಕೋಟಿ ರೂಪಾಯಿಗಳ ನಷ್ಟಪರಿಹಾರವನ್ನೂ ನೀಡಬೇಕು ಎಂದು ಅಂಜನಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.
ಖಾನ್ ಸರ್ ಸೇರಿದಂತೆ ಇತರ ಪ್ರತಿವಾದಿಗಳು ತಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ವೀಡಿಯೊಗಳು ಮತ್ತು ಪ್ರಸಾರಗಳಲ್ಲಿ ಅಂಜನಾ ಹಾಗೂ ಆಜ್ ತಕ್ ವಾಹಿನಿಯನ್ನು ಅತ್ಯಂತ ನಿಂದನಾತ್ಮಕ ಪದಗಳಿಂದ ನಿರೂಪಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. “ಬಿಕಾವೂ ಪತ್ರಕಾರ್” (ಹಣಕ್ಕೆ ಮಾರಾಟವಾದ ಪತ್ರಕರ್ತೆ), “ಚಾಟುಕಾರ್” (ಚಮಚಾಗಿರಿ ಮಾಡುವವರು), “ದಲ್ಲಿ” ಮತ್ತು “ದಲಾಲಿ” (ಮಧ್ಯವರ್ತಿಗಳು/ಏಜೆಂಟರು), “ಫೇಕ್ ನ್ಯೂಸ್ ಕೀ ದುಕಾನ್” (ಸುಳ್ಳು ಸುದ್ದಿಯ ಅಂಗಡಿ) ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಅಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕರನ್ನು ʼಕವಡೆʼ ಕಿಮ್ಮತ್ತಿಲ್ಲದವರು ಎಂದ ಅಂಜನಾ ಕಶ್ಯಪ್; ಹುರಿದು ಮುಕ್ಕಿದ ಬಬಿತಾ ಟೀಚರ್!
ಈ ಮೊಕದ್ದಮೆಯಲ್ಲಿ ಖಾನ್ ಸರ್ ಮಾತ್ರವಲ್ಲದೆ ಅಭಿನಯ್ ಶರ್ಮಾ, ಬಬಿತಾ ತ್ಯಾಗಿ ಮತ್ತು ಅರವಿಂದ್ ಭದೌರಿಯಾ ಅವರಂತಹ ಖ್ಯಾತ ಶಿಕ್ಷಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಜತೆಗೆ ಕೆಲವು ಎಕ್ಸ್ (ಟ್ವಿಟರ್) ಖಾತೆಗಳು ಹಾಗೂ ‘4PM ನ್ಯೂಸ್ ನೆಟ್‌ವರ್ಕ್’ ವಿರುದ್ಧವೂ ಅಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಆನ್‌ಲೈನ್ ಟೀಚರ್‌ಗಳು ಕವಡೆ ಕಿಮ್ಮತ್ತಿಲ್ಲದವರು, ಮಹಾವಂಚಕರು, ಹಣ ಗಳಿಸಲು ನಾಟಕ ಆಡುತ್ತಾರೆ, ಶಿಕ್ಷಕರಿಗೂ ಇವರಿಗೂ ವ್ಯತ್ಯಾಸವಿದೆ” ಎಂದು ಅಂಜನಾ ಕಾರ್ಯಕ್ರಮವೊಂದರಲ್ಲಿ ಒದರಿದ್ದರು. ಅಲ್ಲಿಂದ ಈ ವಿವಾದ ಶುರುವಾಗಿದೆ.
“ಯೂಟ್ಯೂಬ್ ಅಥವಾ ಸೋಶಿಯಲ್ ಮೀಡಿಯಾ ವೇದಿಕೆಗೆ ಬಂದು ಒಬ್ಬ ಶಿಕ್ಷಕ ಮಾತನಾಡುತ್ತಾನೆ ಎಂದರೆ, ಅವನು ನೂರಕ್ಕೆ ನೂರರಷ್ಟು ಸತ್ಯ ಮತ್ತು ಸಂಪೂರ್ಣ ಮಾಹಿತಿಯನ್ನಿಟ್ಟುಕೊಂಡೇ ಮಾತನಾಡುತ್ತಾನೆ. ನಮ್ಮ ದೇಶದ ಮಾಧ್ಯಮಗಳ ಯೋಗ್ಯತೆ ಎಲ್ಲಿದೆ ಗೊತ್ತಾ? ಜಾಗತಿಕ ರ‍್ಯಾಂಕಿಂಗ್ ವರದಿಗಳು ಬಂದಾಗ ದೇಶದ ಪರವಾಗಿ ಇವರು ಎಲ್ಲೂ ಧ್ವನಿ ಎತ್ತುವುದಿಲ್ಲ. ಬದಲಿಗೆ ಇವರ ಪ್ರೈಮ್ ಟೈಮ್ (Prime Time) ಸುದ್ದಿಗಳು ಹೇಗಿರುತ್ತವೆ ಎಂದರೆ.. ‘ಆ ತಿನಿಸಿನಲ್ಲಿ ಸಾಸಿವೆ ಎಣ್ಣೆಯ ಸುವಾಸನೆ ಹೇಗಿದೆ?’, ‘ಮೆಲೋಡಿ ಚಾಕೊಲೇಟ್ ಯಾಕೆ ಇಷ್ಟೊಂದು ಚಾಕೊಲೇಟಿಯಾಗಿದೆ?’ ಮುಂತಾದ ಮೂರ್ಖತನದ ವಿಷಯಗಳ ಮೇಲೆ ಚರ್ಚೆ ಮಾಡಿ ಜನರ ದಾರಿ ತಪ್ಪಿಸುತ್ತಾರೆ.” ಎಂದು ಯೂಟ್ಯೂಬ್ ಶಿಕ್ಷಕಿ ಬಬಿತಾ ಅವರು ತಿರುಗೇಟು ನೀಡಿದ್ದರು.





