ಹಿಂದಿ ಸುದ್ದಿವಾಹಿನಿ Aaj Tak ನ ನಿರೂಪಕಿ ಅಂಜನಾ ಓಂ ಕಶ್ಯಪ್ ಇತ್ತೀಚೆಗೆ ಆನ್ಲೈನ್ ಮತ್ತು ಯೂಟ್ಯೂಬ್ ಶಿಕ್ಷಕರ ಕುರಿತು ಆಡಿದ ಮಾತುಗಳು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. “ಆನ್ಲೈನ್ ಟೀಚರ್ಗಳು ಕವಡೆ ಕಿಮ್ಮತ್ತಿಲ್ಲದವರು, ಮಹಾವಂಚಕರು, ಹಣ ಗಳಿಸಲು ನಾಟಕ ಆಡುತ್ತಾರೆ, ಶಿಕ್ಷಕರಿಗೂ ಇವರಿಗೂ ವ್ಯತ್ಯಾಸವಿದೆ” ಎಂದು ಅಂಜನಾ ಕಾರ್ಯಕ್ರಮವೊಂದರಲ್ಲಿ ಒದರಿದ್ದರು. ಮಾಧ್ಯಮದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಡೀ ಶಿಕ್ಷಕ ವೃತ್ತಿಗೆ ಅಪಮಾನ ಮಾಡಿದ ಈ ನಡೆಗೆ, ಖ್ಯಾತ ಆನ್ಲೈನ್ ಶಿಕ್ಷಕಿ ಬಬಿತಾ ಮೇಡಂ ತಮ್ಮ ವಿಡಿಯೋ ಮೂಲಕ ಸಾಕ್ಷಿ ಸಮೇತ ತಕ್ಕ ಉತ್ತರ ನೀಡಿದ್ದಾರೆ.
“ನಿಮ್ಮ ಧ್ವನಿ ದೊಡ್ಡದಿದೆ ಎಂದಾಕ್ಷಣ ನೀವು ಹೇಳುವುದೆಲ್ಲಾ ಸತ್ಯವಾಗುವುದಿಲ್ಲ ಅಂಜನಾ ಅವರೇ” ಎಂದು ಆರಂಭಿಸಿದ ಬಬಿತಾ ಟೀಚರ್, “ಅಂಜನಾ ಓಂ ಕಶ್ಯಪ್ ಅವರು ಶಿಕ್ಷಕರನ್ನು ‘ಕವಡೆ ಕಿಮ್ಮತ್ತಿನವರು’ ಎಂದು ಕರೆದಿದ್ದಾರೆ. ನಾಣ್ಯಗಳ ಇತಿಹಾಸದಲ್ಲಿ ಕವಡೆ ಅತ್ಯಂತ ಸಣ್ಣ ಮೌಲ್ಯದ್ದು ಹೌದು. ಶಿಕ್ಷಕರು ಕವಡೆ ಬೆಲೆಯವರಾದರೆ, ಅವರ (ಅಂಜನಾ) ತರಹದ ಪತ್ರಕರ್ತರು ಕವಡೆ ಕಾಸಿಗೂ ಲಾಯಕ್ಕಿಲ್ಲದವರು! ಇವರಿಗೆ ಸಮಾಜದಲ್ಲಿ ಯಾವುದೇ ಗೌರವ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ನ್ಯೂಸ್ ಚಾನೆಲ್ಗಳಿಗಿಂತ ಆನ್ಲೈನ್ ಶಿಕ್ಷಕರ ಮಾತುಗಳು ಮತ್ತು ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ ಎಂಬ ಒಂದೇ ಹೊಟ್ಟೆಕಿಚ್ಚಿಗೆ ಇವರು ಈ ರೀತಿ ಮಾತನಾಡುತ್ತಿದ್ದಾರೆ.”
“ಯೂಟ್ಯೂಬ್ ಅಥವಾ ಸೋಶಿಯಲ್ ಮೀಡಿಯಾ ವೇದಿಕೆಗೆ ಬಂದು ಒಬ್ಬ ಶಿಕ್ಷಕ ಮಾತನಾಡುತ್ತಾನೆ ಎಂದರೆ, ಅವನು ನೂರಕ್ಕೆ ನೂರರಷ್ಟು ಸತ್ಯ ಮತ್ತು ಸಂಪೂರ್ಣ ಮಾಹಿತಿಯನ್ನಿಟ್ಟುಕೊಂಡೇ ಮಾತನಾಡುತ್ತಾನೆ. ನಮ್ಮ ದೇಶದ ಮಾಧ್ಯಮಗಳ ಯೋಗ್ಯತೆ ಎಲ್ಲಿದೆ ಗೊತ್ತಾ? ಜಾಗತಿಕ ರ್ಯಾಂಕಿಂಗ್ ವರದಿಗಳು ಬಂದಾಗ ದೇಶದ ಪರವಾಗಿ ಇವರು ಎಲ್ಲೂ ಧ್ವನಿ ಎತ್ತುವುದಿಲ್ಲ. ಬದಲಿಗೆ ಇವರ ಪ್ರೈಮ್ ಟೈಮ್ (Prime Time) ಸುದ್ದಿಗಳು ಹೇಗಿರುತ್ತವೆ ಎಂದರೆ.. ‘ಆ ತಿನಿಸಿನಲ್ಲಿ ಸಾಸಿವೆ ಎಣ್ಣೆಯ ಸುವಾಸನೆ ಹೇಗಿದೆ?’, ‘ಮೆಲೋಡಿ ಚಾಕೊಲೇಟ್ ಯಾಕೆ ಇಷ್ಟೊಂದು ಚಾಕೊಲೇಟಿಯಾಗಿದೆ?’ ಮುಂತಾದ ಮೂರ್ಖತನದ ವಿಷಯಗಳ ಮೇಲೆ ಚರ್ಚೆ ಮಾಡಿ ಜನರ ದಾರಿ ತಪ್ಪಿಸುತ್ತಾರೆ.”
ಅಂಜನಾ ಅವರ ಹಳೆಯ ವರದಿಗಾರಿಕೆಯನ್ನು ನೆನಪಿಸುತ್ತಾ.. “ಅಂಜನಾ ಓಂ ಕಶ್ಯಪ್ ಅವರ ಪತ್ರಿಕೋದ್ಯಮದ ಮಟ್ಟ ಎಂತದ್ದು ಎಂದರೆ, ಇವರು ಬಾಂಗ್ಲಾದೇಶದ ಒಂದು ಕೋಣಕ್ಕೆ ‘ಡೊನಾಲ್ಡ್ ಟ್ರಂಪ್’ ಎಂದು ಹೆಸರಿಟ್ಟು, ಅದರ ಬಗ್ಗೆ ದೊಡ್ಡ ಸುದ್ದಿ ಮಾಡಿದ್ದರು! ಇದು ಇವರ ಪತ್ರಿಕೋದ್ಯಮದ ಗುಣಮಟ್ಟ. ಇವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪತ್ರಕರ್ತೆಯಂತೆ! ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಎದುರು ಸಂದರ್ಶನಕ್ಕೆ ಕುಳಿತಾಗ ಇವರ ಬಾಡಿ ಲ್ಯಾಂಗ್ವೇಜ್ (ದೇಹದ ಭಾಷೆ) ಮತ್ತು ಕುಳಿತಿದ್ದ ಅಸಭ್ಯ ರೀತಿ ಜಾಗತಿಕ ಮಟ್ಟದಲ್ಲಿ ತೀವ್ರ ನೆಗೆಟಿವ್ ವಿಮರ್ಶೆಗೆ ಒಳಗಾಗಿತ್ತು. ವಿಶ್ವದ ಅಷ್ಟು ದೊಡ್ಡ ನಾಯಕರ ಎದುರು ಹೇಗೆ ಕೂರಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಇವರು, ಇಂದು ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಯೋಗ್ಯತೆಯನ್ನು ಅಳೆಯಲು ಬಂದಿದ್ದಾರೆ! ಎಂದು ತರಾಟೆಗೆ ತೆಗೆದುಕೊಂಡರು.
“ಶಾಲೆ-ಕಾಲೇಜುಗಳಿಗೆ ಮಕ್ಕಳು ಹೋಗುತ್ತಿಲ್ಲ, ಕೋಚಿಂಗ್ ಸೆಂಟರ್ಗಳ ಕಡೆ ಓಡುತ್ತಿದ್ದಾರೆ ಎಂದು ಅಂಜನಾ ದೂಷಿಸುತ್ತಾರೆ. ಹಾಗಾದರೆ ಸರ್ಕಾರಿ ಶಾಲೆಗಳಲ್ಲಿರುವ ಕೊರತೆಗಳ ಬಗ್ಗೆ ನಿಮ್ಮ ಚಾನೆಲ್ಗಳಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ? ದೇಶದ ಎಷ್ಟೋ ಶಾಲೆಗಳಲ್ಲಿ ಇಂದಿಗೂ ಶಿಕ್ಷಕರ ನೇಮಕಾತಿಯೇ ಆಗಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ 10ನೇ ತರಗತಿಯ ನಂತರ ‘ಸೈನ್ಸ್ ಸ್ಟ್ರೀಮ್’ (ವಿಜ್ಞಾನ ವಿಭಾಗ) ಇರುವುದೇ ಇಲ್ಲ. ಹಳ್ಳಿಯ ಬಡ ವಿದ್ಯಾರ್ಥಿ ಅಥವಾ ಹೆಣ್ಣುಮಕ್ಕಳು ಓದಬೇಕಾದರೆ ನಗರಗಳಿಗೆ ಹೋಗಬೇಕು. ಅಷ್ಟೊಂದು ಬಸ್ ಚಾರ್ಜ್, ರೂಮ್ ಬಾಡಿಗೆ ಕೊಡಲು ಬಡವರ ಬಳಿ ಹಣ ಎಲ್ಲಿದೆ? ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆಯೂ ಇದೆ. ಇಂತಹ ದೇಶದ ಗಂಭೀರ ಸಮಸ್ಯೆಗಳು ಇವರಿಗೆ ಸುದ್ದಿಯಾಗುವುದಿಲ್ಲ” ಎಂದು ಬಬಿತಾ ಮೇಡಂ ಕಿಡಿಕಾರಿದ್ದಾರೆ.
ಬಬಿತಾ ಮೇಡಂ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಅಂಜನಾ ಓಂ ಕಶ್ಯಪ್ ವಿರುದ್ಧ ಮುಗಿಬಿದ್ದಿದ್ದಾರೆ.
“ದೊಡ್ಡ ನಗರಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಕೊಟ್ಟು ಕೋಚಿಂಗ್ ಪಡೆಯಲು ನಮ್ಮ ಬಳಿ ಹಣವಿರಲಿಲ್ಲ. ಆನ್ಲೈನ್ ಶಿಕ್ಷಕರಿಂದಲೇ ನಾವು ಇಂದು ಉಚಿತವಾಗಿ ಓದಿ ಸರ್ಕಾರಿ ಕೆಲಸದಲ್ಲಿದ್ದೇವೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದೇವೆ. ನಮಗೆ ಟಿವಿ ಆ್ಯಂಕರ್ಗಳು ಯಾರೆಂದೇ ಗೊತ್ತಿಲ್ಲ, ಆದರೆ ನಮ್ಮ ಬದುಕನ್ನು ಬದಲಿಸಿದ ಗುರುಗಳು ಯಾರೆಂದು ಚೆನ್ನಾಗಿ ಗೊತ್ತು!” ಎಂದು ವಿದ್ಯಾರ್ಥಿಗಳು ಶಿಕ್ಷಕರ ಪರವಾಗಿ ನಿಂತಿದ್ದಾರೆ.
ಇದನ್ನೂ ಓದಿ: ಅಹಿಂದ ಛಿದ್ರಕ್ಕೆ ಆರ್ಎಸ್ಎಸ್ ಕುತಂತ್ರ; ಕಾಂಗ್ರೆಸ್ಗೆ ಎಚ್ಚರಿಕೆಯ ಕರೆಗಂಟೆ!
ಪ್ರಜಾಪ್ರಭುತ್ವದ 4ನೇ ಸ್ತಂಭ ಎಂದು ಕರೆಸಿಕೊಳ್ಳುವ ಮಾಧ್ಯಮ ರಂಗದ ಪ್ರತಿಯೊಬ್ಬರೂ ತಮಗಿರುವ ಅಧಿಕಾರವನ್ನು ಸಮಾಜದ ಅತ್ಯಂತ ಗೌರವಾನ್ವಿತ ‘ಶಿಕ್ಷಕ ವೃತ್ತಿ’ಯನ್ನು ಹೀಯಾಳಿಸಲು ಬಳಸಿದ್ದು ಅತ್ಯಂತ ದುರದೃಷ್ಟಕರ. ಕೋವಿಡ್ ಬಿಕ್ಕಟ್ಟಿನ ಸಮಯದಿಂದ ಹಿಡಿದು ಇಂದಿನವರೆಗೂ ದೇಶದ ಮೂಲೆ ಮೂಲೆಯ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ತಲುಪಿಸುವಲ್ಲಿ ಆನ್ಲೈನ್ ಹಾಗೂ ಯೂಟ್ಯೂಬ್ ಶಿಕ್ಷಕರ ಕೊಡುಗೆ ಅನನ್ಯ. ಟಿಆರ್ಪಿ ಹಾಗೂ ಹಣ ಗಳಿಕೆಯನ್ನೇ ಮುಖ್ಯವಾಗಿಸಿಕೊಂಡು ಸಮಾಜದ ನೈಜ ಸಮಸ್ಯೆಗಳನ್ನು ಮರೆತಿರುವ ಇಂದಿನ ಕೆಲವು ಮಾಧ್ಯಮಗಳಿಗೆ ಬಬಿತಾ ಟೀಚರ್ ನೀಡಿರುವ ಉತ್ತರ ತಕ್ಕ ಪಾಠವಾಗಿದೆ.





