ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ದೆಹಲಿಯ ಬಿಜೆಪಿ ಸಚಿವರೋರ್ವರು ಉದ್ಘಾಟನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್‌ಗೊಳಗಾಗಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ಪರ್ವೇಶ್ ಸಾಹಿಬ್ ಸಿಂಗ್ ಅವರು ಟ್ರೋಲ್‌ಗೊಳಗಾದ ಸಚಿವ.
ದೆಹಲಿಯಲ್ಲಿನ ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗಳಿಗೆ ಮುಕ್ತಿ ನೀಡುವ ಸಲುವಾಗಿ ಅಭಿಯಾನವನ್ನು ಆರಂಭಿಸಿರುವ ಲೋಕೋಪಯೋಗಿ ಸಚಿವ ಪರ್ವೇಶ್ ಸಾಹಿಬ್ ಸಿಂಗ್, ಚಿತ್ತರಂಜನ್ ಪಾರ್ಕ್ ಮತ್ತು ಪ್ರೆಸ್ ಎನ್‌ಕ್ಲೇವ್‌ಗೆ ಪ್ರದೇಶದಲ್ಲಿ ಚಾಲನೆ ನೀಡಿದರು. ರಸ್ತೆಯ ಗುಂಡಿಗೆ ಕಾರ್ಮಿಕರು ಡಾಂಬರು ಹಾಕಿದ ಬಳಿಕ ಅದನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಆ ಬಳಿಕ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರು ಸಚಿವರನ್ನು ಸನ್ಮಾನಿಸಿದ್ದಾರೆ. ಆ ಬಳಿಕ ಈ ಎಲ್ಲ ಬೆಳವಣಿಗೆಯನ್ನು ಸೋಷಿಯಲ್ ಮೀಡಿಯಾದಲ್ಲಿ ‘ರೀಲ್ಸ್’ ಮಾಡಿ, ಹಂಚಿಕೊಂಡಿದ್ದಾರೆ.
ಬಳಿಕ ಈ ವಿಡಿಯೋವನ್ನು ಗಮನಿಸಿದ ನೆಟ್ಟಿಗರು, ಸಚಿವನ ನಡೆಗೆ ಟ್ರೋಲ್ ಮಾಡಿದ್ದಲ್ಲದೇ, ‘ಎಂತಹ ಅದ್ಭುತ ಸಾಧನೆ’ ಎಂದು ವ್ಯಂಗ್ಯವಾಡಿದ್ದಾರೆ.
ರೋಶನ್ ರೈ ಎಂಬುವವರು ಟ್ವೀಟ್ ಮಾಡಿ, “ದೆಹಲಿ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವನೋರ್ವ ಗುಂಡಿ ಮುಚ್ಚುವ ಕೆಲಸಕ್ಕೆ ಕ್ಯಾಮರಾಗಳೊಂದಿಗೆ ಬಂದಿದ್ದಲ್ಲದೇ ರಿಪೇರಿ ಮಾಡಿಸಿದ್ದಕ್ಕೆ ರೀಲ್ಸ್ ಮಾಡುವ ಮೂಲಕ ಅದರ ಯಶಸ್ಸನ್ನು ಪಡೆದುಕೊಳ್ಳಲು ಶ್ರಮಿಸಿದ್ದಾರೆ. ಇಷ್ಟೊಂದು ಕಂಟೆಂಟ್ ಎಲ್ಲಿ ಸಿಗಬಹುದು?” ಎಂದು ವ್ಯಂಗ್ಯವಾಡಿದ್ದಾರೆ.
“ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಗುಂಡಿಗಳು, ಕಸ ಅಥವಾ ಮುರಿದ ಬೀದಿ ದೀಪಗಳನ್ನು ವರದಿ ಮಾಡುವುದು ಸರಳವಾದ ಕೆಲಸ. ಫೋಟೋ ಕ್ಲಿಕ್ ಮಾಡಿ, ಸ್ಥಳೀಯ ನಗರದ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿ, ಜಿಪಿಎಸ್‌ನೊಂದಿಗೆ ಲಾಗ್ ಇನ್ ಮಾಡಿದರೆ ಸಾಕು. 48 ಗಂಟೆಗಳಲ್ಲಿ ಸರಿಪಡಿಸಲಾಗುತ್ತದೆ. ಆ ಬಳಿಕ ಕೆಲಸ ಆದ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಆದರೆ, ನಮ್ಮ ದೇಶದಲ್ಲಿ ಮಂತ್ರಿಗಳು ಬಂದು ರಸ್ತೆಯ ಗುಂಡಿ ಮುಚ್ಚುವ ಕೆಲಸವನ್ನು ಮಾಡಿಸಲು ಪೂರ್ಣ ಪ್ರಮಾಣದ ಪಿಆರ್ ಟೀಮ್ ಜೊತೆಗೆ ಬರ್ತಾರೆ. ಅದನ್ನು ಉದ್ಘಾಟಿಸಿದ ನಂತರ ರೀಲ್ಸ್ ಮಾಡಿ ಪ್ರಸಾರ ಮಾಡುತ್ತಾರೆ. ನಮ್ಮ ದೇಶದಲ್ಲಿ ಸಮಸ್ಯೆಗಳ ಪರಿಹಾರಕ್ಕಿಂತ ಅದರ ಯಶಸ್ಸನ್ನು ಪಡೆಯುವುದು ಹೋಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ನಾವು ಇನ್ನೂ ಕೂಡ ಮೂಲಭೂತ ವಿಷಯಗಳನ್ನು ಕೇಳುವುದರಲ್ಲೇ ಸಿಲುಕಿಕೊಂಡಿದ್ದೇವೆ ಎಂಬುವುದಕ್ಕೆ ಆಶ್ಚರ್ಯವಾಗುತ್ತಿಲ್ಲ” ಎಂದು ಸಿದ್ಧಾರ್ಥ ಎಂಬುವವರು ಟ್ವೀಟ್ ಮಾಡಿದ್ದಾರೆ.
ದೆಹಲಿಯ ವಿರೋಧ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷ ಕೂಡ ಸಚಿವನ ‘ರೀಲ್ಸ್’ ಅನ್ನು ಶೇರ್ ಮಾಡಿಕೊಂಡು, ವ್ಯಂಗ್ಯವಾಡಿದೆ. ಈ ನಡುವೆ ದೆಹಲಿ ಬಿಜೆಪಿಯು ತಮ್ಮ ಸರ್ಕಾರದ ಸಾಧನೆ ಇದು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡಿದೆ.
ತಮ್ಮ ಇಲಾಖೆಯ ರಸ್ತೆ ಗುಂಡಿ ಮುಚ್ಚುವ ಅಭಿಯಾನದ ಬಗ್ಗೆ ಮಾತನಾಡಿರುವ ಸಚಿವ ಪರ್ವೇಶ್ ಸಾಹಿಬ್ ಸಿಂಗ್, “ಕಳೆದ ನಾಲ್ಕು ತಿಂಗಳಿನಿಂದ ಇಲಾಖೆಯು ಹಾನಿಗೊಳಗಾದ ರಸ್ತೆಗಳನ್ನು ಗುರುತಿಸಿ ದುರಸ್ತಿ ಮಾಡುವ ಕೆಲಸ ಮಾಡುತ್ತಿದೆ. ಮಳೆಗಾಲ ಶೀಘ್ರದಲ್ಲೇ ಬರುವ ನಿರೀಕ್ಷೆಯಿರುವುದರಿಂದ, ಸರ್ಕಾರವು ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಜೂನ್ 24 ಅನ್ನು ತನ್ನ ಭರವಸೆಯನ್ನು ಈಡೇರಿಸಲು ಒಂದು ಮೈಲಿಗಲ್ಲು ದಿನಾಂಕ” ಎಂದು ತಿಳಿಸಿದ್ದಾರೆ.
“ದೆಹಲಿಯಲ್ಲಿ ಒಂದೇ ದಿನ 3400 ಹೊಂಡಗಳನ್ನು ದುರಸ್ತಿ ಮಾಡುವ ಐತಿಹಾಸಿಕ ದಾಖಲೆ ಮಾಡುವ ಅಭಿಯಾನವನ್ನು ನಡೆಸಲಾಗಿದೆ. ಒಂದು ಕಾಲದಲ್ಲಿ ರಸ್ತೆಗಳು ಹಾಳಾಗಿದ್ದವು. ಜನರು ಪರಿಹಾರಕ್ಕಾಗಿ ವರ್ಷಗಳ ಕಾಲ ಕಾಯುತ್ತಿದ್ದರು. ಅದಕ್ಕೆ ಪರಿಹಾರ ನೀಡುತ್ತಿದ್ದೇವೆ. 1,400 ಕಿಲೋಮೀಟರ್ ರಸ್ತೆಯಲ್ಲಿ 1 ದಿನದಲ್ಲಿ 3,400 ಹೊಂಡಗಳನ್ನು ದುರಸ್ತಿ ಮಾಡಲಾಗಿದೆ. ಇದು ಕೇವಲ ದಾಖಲೆಯಲ್ಲ, ನಮ್ಮ ಸರ್ಕಾರದ ತ್ವರಿತ ಕ್ರಮ” ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾರೆ.
