ವಿರೋಧಿ ಗ್ಯಾಂಗ್‌ನ ಮಾಹಿತಿದಾರನಾಗಿದ್ದ ಎಂಬ ಆರೋಪದ ಮೇಲೆ 14 ವರ್ಷದ ಬಾಲಕನ ಮೇಲೆ ಒಟ್ಟು 13 ಮಂದಿ ದುರುಳರು ಲೈಂಗಿಕ ದೌರ್ಜನ್ಯ ಎಸಗಿ, 24 ಬಾರಿ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿಗಳಲ್ಲಿ ಹಲವು ಮಂದಿ ಅಪ್ರಾಪ್ತ ವಯಸ್ಕರು ಎಂದು ಹೇಳಲಾಗಿದೆ.
ಜುಲೈ 1ರಂದು ದೆಹಲಿ ಕಾಲುವೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ದೇಹದಲ್ಲಿ 24 ಇರಿತದ ಗಾಯಗಳು ಮತ್ತು ದೌರ್ಜನ್ಯ ಎಸಗಿದ ಗಾಯಗಳು ಕಂಡುಬಂದಿತ್ತು. ಈ ಸಂಬಂಧ ಪ್ರಮುಖ ಆರೋಪಿ ಕೃಷ್ಣ ಅಲಿಯಾಸ್ ಭೋಲಾ(19) ಸೇರಿದಂತೆ ಹತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ(ಜುಲೈ 25) ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜುಲೈ 18ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಕನ್ವರ್ ಶಿಬಿರದಿಂದ ಪೊಲೀಸರು ಮೂವರನ್ನು ಬಂಧಿಸಿದ್ದರು.
ಇದನ್ನು ಓದಿದ್ದೀರಾ? ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಶಾಲಾ ಶಿಕ್ಷಕಿ ಬಂಧನ
ಮೃತ ಬಾಲಕನು ತಮ್ಮ ವಿರೋಧಿ ಗ್ಯಾಂಗ್‌ನ ಬಧ್ವಾರ್ ಸಹೋದರರಾದ ಮೋನು ಮತ್ತು ಸೋನು ಅವರ ಮಾಹಿತಿದಾರ ಎಂದುಕೊಂಡು ಕೃಷ್ಣ ಈ ಕೊಲೆ ಮಾಡಲು ಯೋಜಿಸಿದ್ದ ಎನ್ನಲಾಗಿದೆ. ಅಕ್ರಮ ಮದ್ಯ ವ್ಯಾಪಾರ, ದರೋಡೆ ಸೇರಿದಂತೆ ಹಲವು ಆರೋಪಗಳನ್ನು ಹೊಂದಿರುವ ಬಧ್ವಾರ್ ಸಹೋದರರು ಸದ್ಯ ಜೈಲಿನಲ್ಲಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಹರೇಶ್ವರ ಸ್ವಾಮಿ, “ಸ್ವಲ್ಪ ಕೊಳೆತ ಯುವಕನ ಮೃತದೇಹವು ಮುನಕ್ ಕಾಲುವೆಯಲ್ಲಿ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡು ಸಂಪೂರ್ಣವಾಗಿ ಬೆತ್ತಲೆಯಾಗಿ ಬಿದ್ದಿರುವುದು ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯ ವರದಿಯು ಅಪರಾಧದ ಕ್ರೂರತೆಯನ್ನು ಬಹಿರಂಗಪಡಿಸಿತು” ಎಂದು ಹೇಳಿದ್ದಾರೆ.
“ಮರಣೋತ್ತರ ಪರೀಕ್ಷೆಯ ವರದಿಗಳು ಆತನ ದೇಹದ ಮೇಲೆ 24 ಇರಿತದ ಗಾಯಗಳಿದ್ದವು ಎಂದು ಬಹಿರಂಗಪಡಿಸಿವೆ. ಗುದದ್ವಾರದಲ್ಲಿ ಗಾಯದ ಗುರುತುಗಳಿವೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೃಢಪಟ್ಟಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಕನ್ವರ್ ಯಾತ್ರಿಕರಂತೆ ನಟಿಸುತ್ತಾ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಹರಿದ್ವಾರದಲ್ಲಿ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಅಪರಾಧವನ್ನು ಒಪ್ಪಿದ್ದಾರೆ. ದೀಪಕ್, ಚಂದನ್ ಮತ್ತು ಸಚಿನ್ ಎಂಬ ಇತರ ಮೂವರು ಆರೋಪಿಗಳ ಗುರುತನ್ನು ಬಹಿರಂಗಪಡಿಸಿದರು. ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
