ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಸಾಲ ಮನ್ನಾ ಸೇರಿದಂತೆ ಕೇಂದ್ರ ಸರ್ಕಾರವೇ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ದೆಹಲಿ ಚಲೋ’ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ರೈತರು ದೆಹಲಿಗೆ ಹೋಗದಂತೆ ತಡೆದಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋಗೆ ಕರೆಕೊಟ್ಟಿದ್ದು, ದೆಹಲಿಯತ್ತ ಹೊರಟಿದ್ದರು. ಅವರನ್ನು ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ರಸ್ತೆಗೆ ಬೃಹತ್ ಮುಳ್ಳು ತಂತಿ ಬೇಲಿಗಳನ್ನು ಹಾಕಿದ್ದಾರೆ. ಮುಳ್ಳು ತಂತಿಯ ತಡೆಗೋಡೆಯನ್ನು ಭೇದಿಸಿ ಮುನ್ನುಗ್ಗಲು ರೈತರು ಮುಂದಾಗಿದ್ದು, ಅವರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರೈತರು ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ಸಂಧಾನದ ಬಾಗಿಲುಗಳು ಮುಚ್ಚಿವೆ’ ಎಂದು ಹೇಳಿದೆ.
2020ರಲ್ಲಿ ಸತತ ಒಂದು ವರ್ಷಗಳ ಕಾಲ ನಡೆದ ರೈತ ಹೋರಾಟದ ಫಲವಾಗಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿತ್ತು. ಅಲ್ಲದೆ, ಎಂಎಸ್‌ಪಿ, ಕೃಷಿ ಸಾಲ ಮನ್ನಾ ಸೇರಿದಂತೆ ಕೆಲವು ಭರವಸೆಗಳನ್ನು ನೀಡಿತ್ತು. ಆದರೆ, ರೈತ ಹೋರಾಟ ಕೊನೆಗೊಂಡು ಮೂರು ವರ್ಷಗಳು ಕಳೆದರೂ ಕೇಂದ್ರ ಸರ್ಕಾರ ತನ್ನ ಭರವಸೆಗಳನ್ನು ಜಾರಿಗೆ ತಂದಿಲ್ಲ.
ಈ ವರದಿ ಓದಿದ್ದೀರಾ?: ದೆಹಲಿಯಲ್ಲಿ ಮತ್ತೆ ರೈತ ಘರ್ಜನೆ: ಸರ್ಕಾರಕ್ಕೆ 7 ದಿನಗಳ ‘ಡೆಡ್‌ಲೈನ್’
ಹೀಗಾಗಿ, ಕೇಂದ್ರ ಸರ್ಕಾರಕ್ಕೆ ತನ್ನ ಭರವಸೆಗಳನ್ನು ನೆನಪಿಸಲು ಇದೇ ವರ್ಷದ ಫೆಬ್ರವರಿ 13ರಿಂದ ದೆಹಲಿ ಚಲೋಗೆ ಸಂಯುಕ್ತ ಕಿಸಾನ್ ವೋರ್ಚಾ ಮತ್ತು ಕಿಸಾನ್ ಮಝ್ದೂರ್ ಸಭಾ ಕರೆ ಕೊಟ್ಟಿದ್ದವು. ಪಂಜಾಬ್‌ನಿಂದ ಹೊರಟಿದ್ದ ರೈತರನ್ನು ಪಂಜಾಬ್-ಹರಿಯಾಣ ಗಡಿ ಖನೌರಿ ಬಳಿ ಭದ್ರತಾ ಪಡೆಗಳು ತಡೆದಿದ್ದವು.
ಖನೌರಿ ಗಡಿಯಲ್ಲೇ ರೈತರು ಪ್ರತಿಭಟನೆ ಮುಂದುವರೆಸಿದ್ದರು. ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿಯೇ ಲೋಕಸಭಾ ಚುನಾವಣೆ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳೂ ನಡೆದಿವೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ, ಶುಕ್ರವಾರ ಮತ್ತೆ ದೆಹಲಿ ಚಲೋಗೆ ರೈತ ಸಂಘಟನೆಗಳು ಕರೆಕೊಟ್ಟಿದ್ದವು. ಇದೀಗ, ರೈತರನ್ನು ಶಂಭು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ.