ಗುಜರಾತ್‌ನಲ್ಲಿ ಎನ್‌ಜಿಒ ಮುಖ್ಯಸ್ಥರಾಗಿದ್ದಾಗ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಕಾರ್ಯಕರ್ತೆ ಮೇಧಾ ಪಾಟ್ಕರ್ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ದೆಹಲಿಯ ನ್ಯಾಯಾಲಯವು ಇಂದು ಪ್ರಕಟಿಸಿದ್ದು, 5 ತಿಂಗಳ ಸರಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ಮೊತ್ತವನ್ನು ಪಾವತಿಸುವಂತೆ ತಿಳಿಸಿದೆ.
ಕಳೆದ ಮೇ 25ರಂದು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ ಎಂದು ಘೋಷಿಸಿದ್ದ ದೆಹಲಿಯ ಸಾಕೇತ್ ನ್ಯಾಯಾಲಯವು, ಜುಲೈ 1ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತ್ತು.
ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಸಂತ್ರಸ್ತರ ಪರಿಣಾಮದ ವರದಿಯನ್ನು (ವಿಐಆರ್) ಸಲ್ಲಿಸಿರುವುದನ್ನು ಗಮನಿಸಿದ್ದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಈ ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ್ದಾರೆ.
#WATCH | Delhi: Narmada Bachao Andolan activist Medha Patkar says, “The truth can never be defeated…We have not tried to defame anyone, we only do our work…We will challenge the court’s judgement…” https://t.co/8KDuq5ufK8 pic.twitter.com/hDelxBLe4G
— ANI (@ANI) July 1, 2024
ಶಿಕ್ಷೆಯ ಈ ತೀರ್ಪನ್ನು ಪ್ರಶ್ನಿಸಲು ಮೇಧಾ ಪಾಟ್ಕರ್ ಅವರಿಗೆ ದೆಹಲಿಯ ಸಾಕೇತ್ ನ್ಯಾಯಾಲಯವು 30 ದಿನಗಳವರೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಅಲ್ಲಿಯವರೆಗೆ ಈ ಶಿಕ್ಷೆಯು ಅಮಾನತಿನಲ್ಲಿರಲಿದೆ ಎಂದು ತಿಳಿಸಿದೆ.
ಅಲ್ಲದೇ, 10 ಲಕ್ಷ ರೂ ಮೊತ್ತವನ್ನು ವಿಕೆ ಸಕ್ಸೇನಾ ಅವರಿಗೆ ಪಾವತಿಸುವಂತೆ ತಿಳಿಸಿದ್ದರೂ, ತೀರ್ಪಿನ ಆದೇಶದಲ್ಲಿ, “ವಿಕೆ ಸಕ್ಸೇನಾ ಪರ ವಕೀಲರು ಯಾವುದೇ ಪರಿಹಾರವನ್ನು ಬಯಸುತ್ತಿಲ್ಲ. ಈ ಮೊತ್ತವನ್ನು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ನೀಡುವಂತೆ ತಿಳಿಸಿದ್ದಾರೆ. ದೂರುದಾರರಿಗೆ ನೀಡಬೇಕಿರುವ ಪರಿಹಾರದ ಮೊತ್ತವನ್ನು ಅವರ ಇಚ್ಛೆಯಂತೆ ಅದನ್ನು ವಿಲೇವಾರಿ ಮಾಡಬಹುದು” ಎಂದು ನ್ಯಾಯಾಲಯ ಹೇಳಿದೆ.
Delhi Court Sentences Medha Patkar To 5 Months Imprisonment In 23 Yrs Old Defamation Case Filed By LG VK Saxena | @nupur_0111 @LtGovDelhi @medhanarmada https://t.co/ufz0yJqmvk
— Live Law (@LiveLawIndia) July 1, 2024
ತೀರ್ಪು ಪ್ರಕಟಗೊಂಡ ಬಳಿಕ ಪ್ರತಿಕ್ರಿಯಿಸಿರುವ ನರ್ಮದಾ ಬಚಾವೋ ಆಂದೋಲನ ಕಾರ್ಯಕರ್ತೆ ಮೇಧಾ ಪಾಟ್ಕರ್, “ಸತ್ಯವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ನಾವು ಯಾರನ್ನೂ ದೂಷಿಸಲು ಪ್ರಯತ್ನಿಸಿಲ್ಲ. ನಮ್ಮ ಕೆಲಸವನ್ನು ಮಾತ್ರ ಮಾಡುತ್ತೇವೆ. ನ್ಯಾಯಾಲಯದ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ” ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ತನ್ನ ಮತ್ತು ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮೇಧಾ ಪಾಟ್ಕರ್ ಮತ್ತು ವಿಕೆ ಸಕ್ಸೇನಾ 2000ರಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದರು. ವಿಕೆ ಸಕ್ಸೇನಾ ಆಗ ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು.
ಟಿವಿ ಚಾನೆಲ್‌ನಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಮೇಧಾ ಪಾಟ್ಕರ್ ವಿರುದ್ಧ ವಿಕೆ ಸಕ್ಸೇನಾ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಕ್ಸೇನಾ ವಿರುದ್ಧದ ಮೇಧಾ ಪಾಟ್ಕರ್ ಅವರ ಹೇಳಿಕೆಗಳು ಮಾನಹಾನಿಕರ ಮಾತ್ರವಲ್ಲದೆ ನಕಾರಾತ್ಮಕ ಗ್ರಹಿಕೆಗಳನ್ನು ಪ್ರಚೋದಿಸುವಂತಿತ್ತು ಎಂದು ಹೇಳಿತ್ತು.
“ಆರೋಪಿ ಮೇಧಾ ಪಾಟ್ಕರ್ ಅವರು ದೂರುದಾರರ ಪ್ರತಿಷ್ಠೆಗೆ ಹಾನಿಯುಂಟುಮಾಡುವ ಉದ್ದೇಶ ಹೊಂದಿದ್ದರು ಎಂಬುದು ಸಾಬೀತಾಗಿದೆ” ಎಂದು ನ್ಯಾಯಾಲಯ ಹೇಳಿದೆ. “ವಿಕೆ ಸಕ್ಸೇನಾ ಗುಜರಾತ್‌ನ ಜನರನ್ನು ಮತ್ತು ಅವರ ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡವಿಟ್ಟಿದ್ದಾರೆ” ಎಂಬ ಮೇಧಾ ಪಾಟ್ಕರ್ ಅವರ ಆರೋಪವು ಅವರ ಸಾರ್ವಜನಿಕ ಸೇವೆಯ ಮೇಲಿನ ನೇರ ದಾಳಿಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಆರೋಪಿಯಾದ ಮೇಧಾ ಪಾಟ್ಕರ್ ಈ ಹೇಳಿಕೆಗೆ ಯಾವುದೇ ಪುರಾವೆಗಳನ್ನು ಒದಗಿಸಲು ವಿಫಲವಾಗಿದ್ದಾರೆ. ಅಥವಾ ಈ ಆರೋಪಗಳ ಮೂಲಕ ಹಾನಿ ಉಂಟುಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಮೇಧಾ ಪಾಟ್ಕರ್ ಅವರು ಐಪಿಸಿಯ ಸೆಕ್ಷನ್ 500ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾರೆ. ಈ ಮೂಲಕ ಆಕೆಗೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಮೊದಲ ಭಾಷಣದಲ್ಲೇ ಶಿವ ದೇವರ ಫೋಟೋ ತೋರಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
2017ರಲ್ಲಿ ಉದ್ಘಾಟನೆಗೊಂಡ ಗುಜರಾತ್‌ನಲ್ಲಿ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣವು 40,000 ಕುಟುಂಬಗಳ ಮೇಲೆ ಪರಿಣಾಮ ಬೀರಬಹುದು ಎಂದು ನರ್ಮದಾ ಬಚಾವೋ ಆಂದೋಲನ್ ಹೇಳಿಕೊಂಡಿತ್ತು. ಕುಟುಂಬಗಳು ತಮ್ಮ ಮನೆಗಳನ್ನು ತೊರೆಯಬೇಕಾಗಬಹುದು, ಅದು ಮುಳುಗಬಹುದು ಎಂದು ಅದು ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿತ್ತು.
