ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿ ಎರಡು ವಿಭಿನ್ನ ಕ್ಷೇತ್ರಗಳ ಮತದಾರರ ಪಟ್ಟಿಗೆ ಏಕಕಾಲದಲ್ಲಿ ಹೆಸರು ದಾಖಲಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನವೆಂಬರ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.
“ಆರೋಪಿಯಾಗಿರುವ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರ ವಿರುದ್ಧ ಪ್ರಾಥಮಿಕ ಹಂತದ ಪ್ರಕರಣವನ್ನು ದಾಖಲಿಸಲು ಈ ನ್ಯಾಯಾಲಯವು ಪರಿಗಣಿಸಿದೆ“ ಎಂದು ಕಳೆದ ವಾರ ನೀಡಿದ ಆದೇಶದಲ್ಲಿ ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಜಿಂದರ್ ಕೌರ್ ತಿಳಿಸಿದ್ದಾರೆ.
ಇಬ್ಬರು ಸಾಕ್ಷಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಮತದಾರರ ಪಟ್ಟಿಗಳ ಪ್ರಕಾರ, ಸುನೀತಾ ಕೇಜ್ರಿವಾಲ್ ಅವರ ಹೆಸರು ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರ ಮತ್ತು ಉತ್ತರ ಪ್ರದೇಶದ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಪ್ರಕರಣದ ದೂರುದಾರರಾಗಿರುವ ದೆಹಲಿ ಬಿಜೆಪಿ ಕಾರ್ಯದರ್ಶಿ ಹರೀಶ್ ಖುರಾನಾ ಕೂಡ ನ್ಯಾಯಾಲಯದಲ್ಲಿ ಈ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಭಾರತ್ ಮಾತಾ ಕೀ ಜೈ’ ಎಂದ ಅಮಿತಾಭ್ ಬಚ್ಚನ್; ನೆಟ್ಟಿಗರಿಂದ ತರಾಟೆ
“ನಾನು ಈ ದೂರನ್ನು 2019 ರಲ್ಲಿ ಸಲ್ಲಿಸಿದ್ದೆ. ದೆಹಲಿಯ ಚಾಂದಿನಿ ಚೌಕ್ ಮತ್ತು ಗಾಜಿಯಾಬಾದ್‌ನ ಸಾಹಿಬಾಬಾದ್‌ನಲ್ಲಿ ಮತದಾರರಾಗಿ ನೋಂದಾಯಿಸಿರುವುದು ಕಾನೂನುಬಾಹಿರವಾಗಿದೆ” ಎಂದು ಖುರಾನಾ ತಿಳಿಸಿದ್ದಾರೆ.
“ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಇಬ್ಬರೂ ಐಆರ್‌ಎಸ್ ಅಧಿಕಾರಿಗಳಾಗಿದ್ದರು. ದೇಶದಲ್ಲಿ ಒಂದು ರಾಷ್ಟ್ರ ಮತ್ತು ಒಂದು ಮತದಾರರ ಗುರುತಿನ ಚೀಟಿ ಜಾರಿಯಲ್ಲಿದೆ ಎಂದು ತಿಳಿದಿರುವ ಕಾರಣ ಅವರು ಇಂತಹ ಅಪರಾಧವನ್ನು ಮಾಡಿರುವುದು ಅಕ್ಷಮ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
1950ರ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 17ರ ಪ್ರಕಾರ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಯಾವುದೇ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗುವುದಿಲ್ಲ.
ವಿವಿಧ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ನೀಡಲು ಯಾವುದೇ ‘ಸ್ಪಷ್ಟ ಕಾರಣಗಳನ್ನು’ ಹೇಳಬೇಕಾಗಿಲ್ಲ ಮತ್ತು ಸಮನ್ಸ್ ಆದೇಶವನ್ನು ರವಾನಿಸುವಾಗ ಮ್ಯಾಜಿಸ್ಟ್ರೇಟ್ ಪ್ರಾಥಮಿಕ ಆರೋಪಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅಭಿಪ್ರಾಯಪಟ್ಟಿದೆ.