ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮೂರನೇ ಸಾರ್ವಜನಿಕ ಅರ್ಜಿಯನ್ನು ಗಮನಿಸಿದ ದೆಹಲಿ ಹೈಕೋರ್ಟ್, ಇನ್ನೊಮ್ಮೆ ಈ ರೀತಿಯ ಅರ್ಜಿ ಸಲ್ಲಿಸಿದರೆ ಭಾರೀ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಶಾಸಕ ಸಂದೀಪ್ ಕುಮಾರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು, “ಇನ್ನೊಮ್ಮೆ ಈ ರೀತಿಯ ಅರ್ಜಿ ಹಿಡಿದುಕೊಂಡು ಬಂದರೆ ನಿಮ್ಮ ಮೇಲೆ ಭಾರೀ ಮೊತ್ತದ ದಂಡವನ್ನು ವಿಧಿಸಬೇಕಾಗುತ್ತದೆ” ಎಂದು ಗರಂ ಆಗಿಯೇ ತಿಳಿಸಿದರು.
[BREAKING] “Publicity interest litigation”: Delhi High Court on third petition to remove Arvind Kejriwal as Chief Minister
report by @prashantjha996 #DelhiHighCourt #ArvindKejriwal @ArvindKejriwal https://t.co/BRrrC7nzHA
— Bar and Bench (@barandbench) April 8, 2024
“ಇದೇ ರೀತಿಯ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠವು ಆಲಿಸಿದ ಬಳಿಕ ಈಗಾಗಲೇ ವಜಾಗೊಳಿಸಿದೆ. ಪ್ರಸ್ತುತ ಮನವಿಯು ಪ್ರಚಾರದ ಹಿತಾಸಕ್ತಿಯಿಂದ ಕೂಡಿದೆಯಲ್ಲದೆ ಬೇರೇನೂ ಇಲ್ಲ. ಪುನರಾವರ್ತಿಸಿದರೆ ಭಾರೀ ಮೊತ್ತದ ದಂಡ ವಿಧಿಸುತ್ತೇವೆ” ಎಂದು ಆಮ್ ಆದ್ಮಿಯ ಮಾಜಿ ಶಾಸಕ ಸಂದೀಪ್ ಕುಮಾರ್ ಅವರ ವಿರುದ್ಧ ನ್ಯಾಯಾಧೀಶರು ಆಕ್ರೋಶ ಹೊರಹಾಕಿದರು.
ಆ ಬಳಿಕ, “ಈಗಾಗಲೇ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ಪೀಠವು ಈ ಹಿಂದೆ ಇದೇ ರೀತಿಯ ಎರಡು ಅರ್ಜಿಗಳನ್ನು ಆಲಿಸಿದೆ. ಆದ್ದರಿಂದ ಅದನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುತ್ತೇವೆ” ಎಂದು ಹೇಳಿದರು. ಬುಧವಾರ(ಏಪ್ರಿಲ್ 10)ಕ್ಕೆ ವಿಚಾರಣೆ ನಡೆಯಲಿದೆ.
ಇದು ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಸಲ್ಲಿಸಿದ ಮೂರನೇ ಮನವಿಯಾಗಿದೆ. ಇದಕ್ಕೂ ಮುನ್ನ, ಮಾರ್ಚ್ 28 ರಂದು, ಸುರ್ಜಿತ್ ಸಿಂಗ್ ಯಾದವ್ ಹಾಗೂ ಏಪ್ರಿಲ್ 4 ರಂದು ಹಿಂದೂ ಸೇನೆಯ ಅಧ್ಯಕ್ಷರ ವಿಷ್ಣು ಗುಪ್ತಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ | ಬಿಆರ್‌ಎಸ್ ನಾಯಕಿ ಕವಿತಾಗೆ ಮಧ್ಯಂತರ ಜಾಮೀನು ನಿರಾಕರಣೆ
ಅರ್ಜಿಯ ತಿರಸ್ಕಾರದ ವೇಳೆ, “ಸಿಎಂ ಆಗಿ ಮುಂದುವರಿಯುವುದು ಕೇಜ್ರಿವಾಲ್ ಅವರ ವೈಯಕ್ತಿಕ ನಿರ್ಧಾರ. ಭಾರತದ ರಾಷ್ಟ್ರಪತಿ ಅಥವಾ ಲೆಫ್ಟಿನೆಂಟ್ ಗವರ್ನರ್ ಅವರೇ ಈ ಕುರಿತು ನಿರ್ಧರಿಸಬೇಕು” ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತು.
