ಸರ್ಕಾರಿ ಬಂಗಲೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾದ ಆರೋಪದ ತನಿಖೆ ಎದುರಿಸುತ್ತಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಂದ ದೈನಂದಿನ ವಿಚಾರಣೆಯ ಕರ್ತವ್ಯವನ್ನು ವಾಪಸು ಪಡೆಯಲಾಗಿದೆ. ಮುಂಜಾನೆ ಹೊತ್ತಿಗೆ ಸರಿಯಾಗಿ ಕೋರ್ಟಿಗೆ ಬರಬೇಕು, ಹಾಜರಿ ಹಾಕಬೇಕು ಕೆಲಸವಿಲ್ಲದೆ ಕುಳಿತುಕೊಂಡು ಕಾಲಕಳೆಯಬೇಕು, ಸಂಜೆ ಎದ್ದು ಹೋಗಬೇಕು ಅಷ್ಟೇ.
ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ, ಈ ವಿಷಯದ ಬಗ್ಗೆ ಹೆಚ್ಚು ಆಳವಾದ ತನಿಖೆ ನಡೆಯುತ್ತಿದ್ದು, ಇದೀಗ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಂದ ನ್ಯಾಯಾಂಗ ನಿರ್ವಹಣೆಯ ಕೆಲಸವನ್ನು ದೆಹಲಿ ಹೈಕೋರ್ಟ್ ವಾಪಸ್ ತೆಗೆದುಕೊಂಡಿದೆ.
ಈ ಸಂಬಂಧ ದೆಹಲಿ ಹೈಕೋರ್ಟ್ ನಿನ್ನೆ(ಮಾ.23) ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ನಿರ್ವಹಿಸುತ್ತಿದ್ದ ಕೆಲಸವನ್ನು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಹಾಗೂ ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರು ನಿರ್ವಹಿಸುವಂತೆ ಆದೇಶಿಸಲಾಗಿದೆ.
ಈ ಆದೇಶವು ತಕ್ಷಣದಿಂದ ಜಾರಿಯಾಗಿದೆ ಎಂದು ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಆದೇಶವೊಂದರಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾ ವಿರುದ್ಧ ಆಂತರಿಕ ತನಿಖೆ ನಡೆಸಿದ್ದು ವರದಿಯಲ್ಲಿ, ಈ ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಯಶವಂತ್ ವರ್ಮಾ ಅವರ ನಿವಾಸಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಬೃಹತ್ ಮೊತ್ತ ಪತ್ತೆಯಾದ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು. ಹಣ ಪತ್ತೆಯಾದ ಘಟನೆ ನಂತರ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಆಂತರಿಕ ತನಿಖೆ ನಡೆಸಿದ್ದು, ಇದೀಗ ನ್ಯಾಯಮೂರ್ತಿ ಹುದ್ದೆಯಿಂದ ವರ್ಮಾ ಅವರನ್ನು ವಜಾಗೊಳಿಸಲಾಗಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ ಎಂಬ ಆರೋಪಗಳ ಕುರಿತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು ಸುಮಾರು 25 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಜಡ್ಜ್ ಮನೆಯಲ್ಲಿ ಕಂತೆ-ಕಂತೆ ನೋಟು; ವಿಡಿಯೋ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ವಿಚಾರಣಾ ವರದಿಯನ್ನು ಬಿಡುಗಡೆ ಮಾಡಿತ್ತು. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರಿಗೆ ಸುಟ್ಟು ಹೋದ ನೋಟಿನ ವಿಡಿಯೋವನ್ನು ತೋರಿಸಿದ್ದರು.
ಸಮಗ್ರ ವರದಿಯ ನಂತರ ಸಂಜೀವ್ ಖನ್ನಾ ಅವರು ದೆಹಲಿ ಹೈಕೋರ್ಟ್ ಸಿ ಜೆ ಉಪಾಧ್ಯಾಯ ಅವರಿಗೆ ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆದೇಶಿಸಿದ್ದರು. ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ನ್ಯಾಯಾಂಗ ಹುದ್ದೆಯಿಂದ ತಕ್ಷಣವೇ ಕೈಬಿಡುವಂತೆ ಹಾಗೂ ಮುಂದಿನ ಆದೇಶದವರೆಗೆ ಹಿಂತೆಗೆದುಕೊಳ್ಳಲಾಗಿದೆ ಎಂದು ಸಿ ಜೆ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪ ನಿರಾಕರಿಸಿದ್ದ ವರ್ಮಾ
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. “ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಸ್ಟೋರ್‌ರೂಂನಲ್ಲಿ ಯಾವುದೇ ನಗದನ್ನು ಇಟ್ಟಿರಲಿಲ್ಲ. ಆಪಾದಿತ ನಗದು ನಮಗೆ ಸೇರಿದ್ದು ಎಂಬ ಆರೋಪವು ಸರಿಯಲ್ಲ. ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಆ ಕೊಠಡಿಗೆ ನಾವು ಬೀಗ ಕೂಡ ಹಾಕಿರಲಿಲ್ಲ. ತೆರೆದ ಕೊಠಡಿಯಲ್ಲಿ ಯಾರಾದರೂ ಹಣ ಸಂಗ್ರಹಿಸಿ ಇಡುತ್ತಾರೆಯೇ. ಘಟನೆ ನಡೆದ ದಿನ ನಾನು ಮತ್ತು ನನ್ನ ಪತ್ನಿ ಮಧ್ಯಪ್ರದೇಶದಲ್ಲಿದ್ದೆವು. ನನ್ನ ಮಗಳು ಮತ್ತು ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದರು. ಮಧ್ಯರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ, ಮಗಳು ಮತ್ತು ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ನಂದಿಸುವಾಗ ನಮ್ಮ ಮನೆಯ ಸದಸ್ಯರನ್ನು ದೂರ ಇರುವಂತೆ ಸಿಬ್ಬಂದಿಗಳು ಸೂಚಿಸಿದ್ದರು. ಬೆಂಕಿ ನಂದಿಸಿದ ಬಳಿಕ, ಸ್ಥಳಕ್ಕೆ ಮರಳಿದಾಗ ಅಲ್ಲಿ ಯಾವುದೇ ನಗದು ಇದ್ದುದ್ದನ್ನು ನಮ್ಮ ಕುಟುಂಬದವರು ನೋಡಿಲ್ಲ” ಎಂದು ಅವರು ಹೇಳಿದ್ದರು.