ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಿ ಆಹಾರ ಸಂಸ್ಕೃತಿಯ ಸಮಾನತೆ ಎತ್ತಿ ಹಿಡಿವಂತೆ ಆಗ್ರಹಿಸಿದ ಇತ್ತೀಚಿನ ಆಂದೋಲನ ದೇಶದ ರಾಜಧಾನಿ ದೆಹಲಿಯಲ್ಲಿ ಅನುರಣಿಸಿದೆ. ‘ಜೆಎನ್‌ಯು’ನಲ್ಲಿ ಪ್ರೊಫೆಸರ್ ಆಗಿ ಪಾಠ ಹೇಳಿ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿರುವ ಜಾನಕಿ ನಾಯರ್ ಕನ್ನಡವನ್ನೂ ಕರ್ನಾಟಕದ ಸಂಸ್ಕೃತಿ ಮತ್ತು ರಾಜಕಾರಣವನ್ನು ಬಲ್ಲವರು. ಮಂಡ್ಯ ಸಾಹಿತ್ಯ ಸಮ್ಮೇಳನದ ಬಾಡೂಟ ಆಂದೋಲನದ ‘ಗೆಲುವು’ ಸಣ್ಣದಾದರೂ ಮಹತ್ವದ ಮೈಲಿಗಲ್ಲು ಎಂದು ಈ ಲೇಖನದಲ್ಲಿ ಬಣ್ಣಿಸಿದ್ದಾರೆ.
ಅವರ ಲೇಖನದ ಅಜಮಾಸು ಅನುವಾದ ಹೀಗಿದೆ:
87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಡಿ.22ರ ಭಾನುವಾರ ಮಂಡ್ಯದ ಮಾಂಸಾಹಾರಿಗಳು ಸಣ್ಣ ಗೆಲುವು ಗಳಿಸಿದರು. ಮೂರು ದಿನಗಳ ವಾರ್ಷಿಕ ಕಾರ್ಯಕ್ರಮದ ಎಲ್ಲ ದಿನಗಳಲ್ಲೂ ಎದ್ದಿದ್ದ ಮಾಂಸಾಹಾರದ ಕೂಗಿಗೆ ಪುಟ್ಟ ರಿಯಾಯತಿ ನೀಡಲಾಯಿತು. ಕಡೆಯ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಲಕ್ಷಕ್ಕೂ ಹೆಚ್ಚು ಜನರಿಗೆ ಬೇಯಿಸಿದ ಮೊಟ್ಟೆಗಳನ್ನು ನೀಡಲಾಯಿತು. ಮಾಂಸಾಹಾರವು ವಿಶೇಷವಾಗಿ ಮಂಡ್ಯದ ಒಕ್ಕಲಿಗ ಹೃದಯಭಾಗದಲ್ಲಿರುವ ಮಾಂಸಾಹಾರವು ಸಾಂಸ್ಕೃತಿಕ ಪರಂಪರೆಯ ಭಾಗ ಎಂಬುದು ಹಲವು ಗುಂಪುಗಳ ಪ್ರತಿಪಾದನೆಯಾಗಿತ್ತು. ಮಾಂಸಾಹಾರ ಕುರಿತು ಮಾತನಾಡುವ ಕನ್ನಡ ಸಾಹಿತ್ಯವೂ ಈ ಹಿಂದಿನ ಸಮ್ಮೇಳನಗಳಲ್ಲಿ ನಿಷಿದ್ಧವಿತ್ತು ಎಂದು ಕೆಲವು ಪ್ರಗತಿಪರ ಗುಂಪುಗಳು ಹೇಳಿಕೊಂಡಿವೆ. ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳ ನಡುವಿನ ಸಮಾನತೆಯ “ಐತಿಹಾಸಿಕ” ಬ್ಯಾಡ್ಜ್‌ಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದ್ದರು ಮಾಂಸಾಹಾರಿಗಳು.
ಬೇಯಿಸಿದ ಮೊಟ್ಟೆ ಮತ್ತು ಚಿಕನ್ ಬಿರಿಯಾನಿ ಮತ್ತು ಇತರ ಮಾಂಸ ಭಕ್ಷ್ಯಗಳನ್ನು ಒಳಗೊಂಡಂತೆ ‘ಮಾಂಸಾಹಾರಿ’ ಊಟವನ್ನು ಸಮ್ಮೇಳನದ 500 ಮಂದಿ ಸಭಿಕರಿಗೆ ವಿತರಿಸಲು ತಂದರು.
ಮೊಟ್ಟೆಯೇನೂ ಮಾಂಸಾಹಾರಕ್ಕೆ ಪರ್ಯಾಯ ಅಲ್ಲ ಎನ್ನುತ್ತಾರೆ ಮಾಂಸಾಹಾರಿಗಳು. ಆದರೆ ಇಂತಹ ನಿರರ್ಥಕ ಗೆಲುವು ಕೂಡ ಒಂದು ದೈತ್ಯ ಸಾಂಕೇತಿಕ ಹೆಜ್ಜೆ ಆಗಿರಲೂಬಹುದು. ಏಳು ಜಿಲ್ಲೆಗಳ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಮೊಟ್ಟೆಗಳ ನೀಡಿಕೆಗೆ ಉತ್ತರ ಕರ್ನಾಟಕದ ಹಲವಾರು ಪ್ರಮುಖ ಮಠಾಧೀಶರು 2021ರಲ್ಲಿ ಕಡು ವಿರೋಧ ವ್ಯಕ್ತಪಡಿಸಿದ್ದರು.
ಬೇಯಿಸಿದ ಮೊಟ್ಟೆಯ ಬದಲು ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಗಳನ್ನು ಬಡಿಸುವಂತೆ ಆಗ್ರಹಿಸಿದ್ದರು. ಕರ್ನಾಟಕದ ಜನಸಂಖ್ಯೆಯ ಶೇ.16 ರಿಂದ 17 ರಷ್ಟಿರುವ ಲಿಂಗಾಯತರು, ಬ್ರಾಹ್ಮಣರು ಮತ್ತು ಜೈನರು ಬಿಜೆಪಿ ಸರ್ಕಾರದ ಈ ಯೋಜನೆಯನ್ನು ವಿರೋಧಿಸಿದ್ದರು.
ತಮಿಳುನಾಡು ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲು 1989ರಷ್ಟು ಹಿಂದಿನಿಂದಲೇ ಶಾಲಾ ಮಕ್ಕಳಿಗೆ ಮೊಟ್ಟೆಗಳನ್ನು ನೀಡುತ್ತ ಬಂದಿದೆ. ಅಧ್ಯಯನಗಳ ಪ್ರಕಾರ ಯಶಸ್ಸನ್ನೂ ಕಂಡಿದೆ. ಮೊಟ್ಟೆ ವಿತರಣೆಯನ್ನು ಅಧಿಕಾಂಶ ವಿರೋಧಿಸಿರುವ ರಾಜ್ಯಗಳು ಬಿಜೆಪಿ ಸರ್ಕಾರ ಹೊಂದಿರುವಂತಹವು.
ಅಜೀಂ ಪ್ರೇಮ್‌ಜಿ ಫೌಂಡೇಶನ್ ನೆರವಿನೊಂದಿಗೆ ಈಗ ಕರ್ನಾಟಕದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಾರವಿಡೀ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಆದರೆ ಕೆ ಎಸ್ ಸಿಂಗ್ ಅವರ ಪೀಪಲ್ಸ್ ಆಫ್ ಇಂಡಿಯಾ ಪ್ರಾಜೆಕ್ಟ್ ಪ್ರಕಾರ ದೇಶದ ಸುಮಾರು ಶೇ. 83 ಜನಸಂಖ್ಯೆ ಮಾಂಸಾಹಾರ ಸೇವಿಸುತ್ತಿದೆ ಮತ್ತು ಈ ಪ್ರಮಾಣ ಹೆಚ್ಚುತ್ತಿದೆ. ಎಲ್ಲ ಪುರಾವೆಗಳು ಈ ಅಂಶವನ್ನು ಸೂಚಿಸುತ್ತಿದ್ದರೂ ಆಳವಾಗಿ ಬೇರೂರಿರುವ ಪೂರ್ವಗ್ರಹಗಳು ಈಗಲೂ ಮುಂದುವರೆದು ಮೆರೆದಾಡಿವೆ. ಇಂಡಿಯಾ ಎಂಬ ಭಾರತದಲ್ಲಿ ಭಾನುವಾರದಂದು ಮಾತ್ರ ಮಾಂಸ ಸೇವಿಸುವವರು, ಮಂಗಳವಾರ ಹೊರತುಪಡಿಸಿ ಎಲ್ಲ ದಿನಗಳಂದು ತಿನ್ನುವವರು, ಮನೆಯ ಹೊರಗೆ ಮಾತ್ರ ಮಾಂಸ ತಿನ್ನುವವರು, ಬೋನ್ ಲೆಸ್ ಚಿಕನ್ ಮಾತ್ರ ತಿನ್ನುವವರು, ಮದ್ಯಪಾನ ದ ಜೊತೆ ಮಾತ್ರ ಸೇವಿಸುವವರೂ ಇದ್ದಾರೆ.
ತಮ್ಮನ್ನು ‘ಕೋಳಿ ತಿನ್ನುವ ಬ್ರಾಹ್ಮಣ’ ಎಂದು ಹೆಮ್ಮೆಯಿಂದ ಬಣ್ಣಿಸಿಕೊಂಡಿದ್ದ ಮುಖ್ಯಮಂತ್ರಿಯನ್ನು (ಗುಂಡೂ ರಾವ್) ಹೊಂದಿದ್ದ ರಾಜ್ಯ ಕರ್ನಾಟಕ.
ಆದರೆ ಮಂಡ್ಯ ಸಮ್ಮೇಳನದ ಪ್ರತಿಭಟನಾಕಾರರು ಪ್ರತಿಪಾದಿಸಿದ್ದು ಕೇವಲ ಆಹಾರ ಸಮಾನತೆ ಅಲ್ಲ. ಸಸ್ಯಾಹಾರಕ್ಕೆ ಅಂಟಿಸಲಾಗಿರುವ ಶ್ರೇಷ್ಠ ತೆಯ ‘ಆಳ ಮೌಲ್ಯ’ವನ್ನು ಸೂಚಿಸಿದ್ದರು. ಈ ಮೌಲ್ಯ ಮಾಂಸಾಹಾರಕ್ಕೆ ‘ನಾಚಿಕೆಗೇಡಿನ’ ಹಣೆಪಟ್ಟಿ ಹಚ್ಚಿ ದೂರದ ಪ್ರತ್ಯೇಕ ಕೌಂಟರ್ ಗೆ ತಳ್ಳುತ್ತದೆ. ಮಾಂಸ ತಿನ್ನುವುದು ಅಪರಾಧವೆಂದು ನೋಡದಿದ್ದರೂ ಅಶುದ್ಧವೆಂದು ಬಗೆಯುತ್ತದೆ. ‘ಅಪ್ಪಟ ಮಾಂಸಾಹಾರಿ’ ಎಂಬ ಆಶ್ವಾಸನೆಯ ಫಲಕವನ್ನು ನಾನು ಕೇರಳದಲ್ಲಿ ಮಾತ್ರ ನೋಡಿದ್ದೇನೆ; ಇಲ್ಲಿಯೂ ಸಹ, ‘Non’ ಎಂಬ ನೇತ್ಯಾತ್ಮಕ ಧ್ವನಿಯನ್ನು ಬಿಡಿಸಿ ನೋಡುವುದು ತ್ರಾಸದಾಯಕ ಎನಿಸಿತ್ತು.
ಆಹಾರದ ಶುದ್ಧತೆಯನ್ನು ಅವುಗಳ ಉತ್ಪಾದಕರಿಗೆ ಅಥವಾ ಗ್ರಾಹಕರಿಗೆ ಲಗತ್ತಿಸಿ ಸೂಕ್ಷ್ಮವಾಗಿ ‘ಬ್ರ್ಯಾಂಡ್’ ಮಾಡುವುದಕ್ಕೆ ಜಾತಿಯ ಬಹಿರಂಪರಿಭಾಷೆಯೇ ಹೌದು. ಇಲ್ಲವಾದರೆ ಸಾಂಬಾರ್ ಪುಡಿಯ ಅನನ್ಯ ಮಾರಾಟದ ಕೇಂದ್ರ ‘ಬ್ರಾಹ್ಮಣ’ರೇ ಯಾಕೆ ಆಗುತ್ತಿದ್ದರು? ತಿಂಡಿ ತಿನಿಸುಗಳ ವಿಶ್ವಾಸಾರ್ಹತೆ ಮತ್ತು ಸ್ವಾದಿಷ್ಟ ಬ್ರ್ಯಾಂಡ್ ಕೇವಲ ‘ಸಂಕೇತಿ’ಗಳೇ ಆಗಿರುವುದು ಏನನ್ನು ಸೂಚಿಸುತ್ತದೆ? ಆಡುಮಾತಿನ ‘ಭಟ್ಟರು’ ಸಾರ್ವಜನಿಕ ಅಡುಗೆಯ ಬ್ರಾಹ್ಮಣ ಏಕಸ್ವಾಮ್ಯ ಮತ್ತು ಪಾರಮ್ಯವನ್ನು ಧ್ವನಿಸುವುದಿಲ್ಲವೇ?
ಈ ವರದಿ ಓದಿದ್ದೀರಾ?: ನಿರುದ್ಯೋಗ | ಮೋದಿ ಮಂಕುಬೂದಿಗೆ ಇನ್ನೆಷ್ಟು ದಿನ ಮರುಳಾಗುತ್ತಾರೆ ಯುವಜನರು?
ಆಹಾರ ಸಂಸ್ಕೃತಿಯನ್ನು ಜಾತಿ ವರ್ಣಪಟಲದ ತಳ ತುದಿಯಿಂದ ನೋಡಿದಾಗ ಆಹಾರ ಸಂಸ್ಕೃತಿಗಳ ಇದೇ ರೀತಿಯ ಸಾರ್ವಜನಿಕ ಬ್ರ್ಯಾಂಡಿಂಗ್ ನ್ನು ನಾವು ಊಹಿಸುವುದೂ ಸಾಧ್ಯವಿಲ್ಲ. ಆಹಾರದ ಆದ್ಯತೆಗಳು ಬಹುಮುಖಿ ಮತ್ತು ವೈವಿಧ್ಯಮಯ. ತಮ್ಮ ಅವಿಸ್ಮರಣೀಯ ಆತ್ಮಚರಿತ್ರೆ, ‘ಗೌರ್ಮೆಂಟ್ ಬ್ರಾಹ್ಮಣ’ದಲ್ಲಿ ಬಹುತೇಕ ಬ್ರಾಹ್ಮಣರು ಒಗ್ಗರಣೆಗೆ ಬಳಸುವ ಹಿಂಗನ್ನು ಕುರಿತು ಅರವಿಂದ ಮಾಲಗತ್ತಿ ಅನುಭವ ವಿಶಿಷ್ಟ. ‘ದೆವ್ವದ ಸಗಣಿ’ (ಹಿಂಗು) ಬಳಸಿದ ಮನೆಗೆ ಪ್ರವೇಶಿಸಿದಾಗ ಅನುಭವಿಸಿದ ಅಸಮಾಧಾನವನ್ನು ಮಾಲಗತ್ತಿ ನೆನಪಿಸಿಕೊಳ್ಳುತ್ತಾರೆ. ಆದರೆ ಆಹಾರದ ಆದ್ಯತೆಗಳು ಯಾರದೇ ವಿರುದ್ಧದ ಪೂರ್ವಾಗ್ರಹಗಳೇ ಆಗಿರಬೇಕಿಲ್ಲ. ಈ ವಿವೇಕವನ್ನು ವ್ಯತ್ಯಾಸವನ್ನು ನಮ್ಮ ಯುವಕರಿಗೆ ತುರ್ತಾಗಿ ಕಲಿಸಬೇಕಾಗಿದೆ.
ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಮಾಂಸಾಹಾರ’ಕ್ಕೆ ಈ ಸಣ್ಣ ಗೆಲುವು ಸಿಕ್ಕಿರುವುದು ಕಾಕತಾಳೀಯವೇನಲ್ಲ. “ಮಾಂಸ”ದ ಪರಿಮಳವನ್ನು ಹೆಚ್ಚು ಒಪ್ಪಿತವಾಗಿಸುವ ಜೊತೆಗೆ ಈ ಗೆಲುವು, ಭಾಷಾ ಕ್ರಾಂತಿಗಿಂತ ಕಡಿಮೆಯದೇನೂ ಅಲ್ಲ. ಮಾಂಸಾಹಾರ ಸೇವನೆಗೆ ಸಂಬಂಧಿಸಿದ ನೆಗೆಟಿವ್ ಅರ್ಥಗಳ ನಿವಾರಣೆ ಮತ್ತು ಸಹಿಷ್ಣುತೆಯನ್ನು ಬೆಳೆಸುವಲ್ಲಿ, ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ – ಆಹಾರ ಸಂಸ್ಕೃತಿಗಳ ಬಹುತ್ವವನ್ನು ಸ್ವೀಕಾರಾರ್ಹ ಆಗಿಸುವಲ್ಲಿ ಈ ಗೆಲುವಿನ ಪಾತ್ರ ಮಹತ್ವದ್ದು. ಇದೇ ನಮ್ಮ ದೇಶದ ವೈವಿಧ್ಯತೆಯ ವೈಶಿಷ್ಟ್ಯ. ಬಹುಶಃ ಯಾವುದೇ ಕ್ರಾಂತಿಗಿಂತ ಕಡಿಮೆಯೇನೂ ಅಲ್ಲ.
ಸೌಜನ್ಯ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಅನುವಾದ- ಡಿ ಉಮಾಪತಿ