ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನ (Facial Recognition System-FRS) ಮೂಲಕ ಗುರುತಿಸಿರುವ 2,873 ಮಂದಿ ಆರೋಪಿಗಳ ಪೈಕಿ ಕನಿಷ್ಠ 25 ಮಂದಿ ಅಂದು ಜೈಲಿನಲ್ಲಿದ್ದರು ಎಂಬುದು ಪೊಲೀಸ್, ಜೈಲು ಮತ್ತು ನ್ಯಾಯಾಲಯದ ದಾಖಲೆಗಳಿಂದ ಬಹಿರಂಗವಾಗಿದೆ.
ಜಂತರ್ ಮಂತರ್‌ನಲ್ಲಿ ಜುಲೈ 20ರಿಂದ 26ರವರೆಗೆ ನಡೆದ ಪ್ರತಿಭಟನೆಯ ವೇಳೆ ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ 2,873 ಮಂದಿಯನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಿಳಿಸಿದ್ದರು. ಇವರಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅವಕಾಶ ನೀಡಿತ್ತು. ಆದರೆ, ಮುಖ ಗುರುತಿಸುವ ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳದೆ, ಸ್ಥಳ ಪರಿಶೀಲನೆ (Field Verification) ಬಳಿಕವೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವವರ ಪಟ್ಟಿಯನ್ನು ಪರಿಶೀಲಿಸಿದಾಗ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಪೊಲೀಸರು ಗುರುತಿಸಿರುವ 2,873 ಮಂದಿಯಲ್ಲಿ ಕೊಲೆ, ಕೊಲೆ ಯತ್ನ, ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ 205 ಮಂದಿಯ ವಿವರಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪರಿಶೀಲಿಸಿದೆ. ಇವರಲ್ಲಿ 101 ಮಂದಿ ಕೊಲೆ, 61 ಮಂದಿ ಅತ್ಯಾಚಾರ, ಆರು ಮಂದಿ ಪೋಕ್ಸೊ ಕಾಯ್ದೆ ಹಾಗೂ 62 ಮಂದಿ ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದಾರೆ.
ಈ 205 ಮಂದಿಯಲ್ಲಿ ಕನಿಷ್ಠ 25 ಮಂದಿ, ಜಂತರ್ ಮಂತರ್‌ನಲ್ಲಿ FRS ಮೂಲಕ ಗುರುತಿಸಲ್ಪಟ್ಟ ಸಮಯದಲ್ಲಿ ದೆಹಲಿಯ ತಿಹಾರ್, ಮಂಡೋಲಿ ಮತ್ತು ರೋಹಿಣಿ ಜೈಲು ಸಂಕೀರ್ಣಗಳಲ್ಲಿ ಬಂಧಿತರಾಗಿದ್ದರು ಎಂದು ದಾಖಲೆಗಳು ತೋರಿಸಿವೆ. ಜೈಲಿನಲ್ಲಿದ್ದ 25 ಮಂದಿಯಲ್ಲಿ 17 ಮಂದಿ ಕೊಲೆ ಆರೋಪ, ನಾಲ್ವರು ಅತ್ಯಾಚಾರ ಆರೋಪ ಹಾಗೂ ನಾಲ್ವರು ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದರು. ಅತ್ಯಾಚಾರ ಆರೋಪಿಗಳಲ್ಲಿ ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣಗಳಿವೆ.
ಈ 25 ಮಂದಿಯಲ್ಲಿ ಮೂವರನ್ನು ಜುಲೈ 24ರಂದು, 21 ಮಂದಿಯನ್ನು ಜುಲೈ 25ರಂದು ಹಾಗೂ ಒಬ್ಬರನ್ನು ಜುಲೈ 26ರಂದು, ಅಂದರೆ ಜಂತರ್ ಮಂತರ್ ಪ್ರತಿಭಟನೆಯ ಕೊನೆಯ ದಿನ FRS ಗುರುತಿಸಿದೆ ಎಂದು ದಾಖಲೆಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ರೈತರಿಗೆ ನಿವೇಶನ ಹಂಚಿಕೆ, ನೈಸ್ ಅಕ್ರಮದ ಸಕ್ರಮ ಪ್ರಯತ್ನ; ಕೆಪಿಆರ್‌ಎಸ್ ಆಪಾದನೆ
ಈ ಕುರಿತು, ಪ್ರತಿಭಟನೆ ವೇಳೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರಂತೆ ಪ್ರಾಥಮಿಕವಾಗಿ ಗುರುತಿಸಲಾದ 2,873 ಮಂದಿ ಪತ್ತೆಯಾಗಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಪರಿಶೀಲನೆ ಇನ್ನೂ ಬಾಕಿ ಇದೆ. ಆಗಸ್ಟ್ 17ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ಜಂತರ್ ಮಂತರ್‌ನಲ್ಲಿ FRS ಮೂಲಕ ಗುರುತಿಸಲಾದವರ ವಿವರಗಳು ಪೊಲೀಸ್ ದಾಖಲೆಗಳಲ್ಲಿರುವ ಮಾಹಿತಿಗೆ ಹೊಂದಿಕೆಯಾಗಿವೆ ಎಂದು ದೆಹಲಿ ಪೊಲೀಸರು ಹೇಳಿದ್ದರು.
ಪೊಲೀಸರ ಪ್ರಕಾರ, ಈ 2,873 ಮಂದಿಯಲ್ಲಿ 2,402 ಮಂದಿಯನ್ನು ದೆಹಲಿ ಪೊಲೀಸರ ಬಯೋಮೆಟ್ರಿಕ್ ಡೇಟಾಬೇಸ್ ‘ಕ್ರೈಂ ಕುಂಡಲಿ’ ಮೂಲಕ ಹಾಗೂ 471 ಮಂದಿಯನ್ನು ಕ್ರಿಮಿನಲ್ ದಾಖಲೆಗಳ ಆಧಾರದ ಮೇಲೆ ಗುರುತಿಸಲಾಗಿದೆ. ಆದರೆ, ಜೈಲು ಮತ್ತು ನ್ಯಾಯಾಲಯದ ದಾಖಲೆಗಳೊಂದಿಗೆ ನಡೆಸಿದ ಪರಿಶೀಲನೆಯಲ್ಲಿ, FRS ಪ್ರತಿಭಟನಾ ಸ್ಥಳದಲ್ಲಿ ಗುರುತಿಸಿದೆ ಎಂದು ಹೇಳಲಾದ ಕನಿಷ್ಠ 25 ಮಂದಿ ಆ ಸಮಯದಲ್ಲಿ ಜೈಲಿನಲ್ಲೇ ಇದ್ದದ್ದು ಬೆಳಕಿಗೆ ಬಂದಿದೆ. ಹೀಗಾಗಿ, ಮುಖ ಗುರುತಿಸುವ ತಂತ್ರಜ್ಞಾನದಿಂದ ದೊರೆತ ಮಾಹಿತಿಯ ನಿಖರತೆ ಮತ್ತು ಅದರ ಆಧಾರದ ಮೇಲೆ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಧಾನದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.





