ಸಿ. ಪಾರ್ವತಮ್ಮ: ಸಾಮಾಜಿಕ ಮಾನವಶಾಸ್ತ್ರಜ್ಞೆಯ ಪ್ರಶ್ನೆಗಳು

Date:

ಪಾರ್ವತಮ್ಮನವರು ತಮ್ಮ ಅಧ್ಯಯನದ ಮೂಲಕ ಬ್ರಾಹ್ಮಣವಾದಿ ಸಮಾಜಶಾಸ್ತ್ರ ಚಿಂತನೆಗಳ ಎಲ್ಲಾ ಪದರುಗಳನ್ನು ಬಿಚ್ಚಿಡುತ್ತಾರೆ. ಜೊತೆಗೆ, ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯೊಳಗೆ ದಲಿತ ಸಮಾಜಶಾಸ್ತ್ರಜ್ಞರು ಎದುರಿಸುವ ಸಮಸ್ಯೆಗಳನ್ನೂ ಪ್ರತಿಬಿಂಬಿಸುತ್ತಾರೆ. ಬ್ರಾಹ್ಮಣಶಾಹಿ ಪರಂಪರೆಯ ಅಧ್ಯಯನ ಕ್ರಮವನ್ನು ನಿರಾಕರಿಸಿ ತಳಸಮುದಾಯ ಕೇಂದ್ರಿತ ಸಂಶೋಧನೆಯನ್ನು ಮಂಡಿಸಿದ ಪಾರ್ವತಮ್ಮ ಇಪ್ಪತ್ತನೇ ಶತಮಾನದ ಬಹುಮುಖ್ಯ ಸಾಮಾಜಿಕ ಮಾನವಶಾಸ್ತ್ರಜ್ಞರು.

ಪೀಠಿಕೆ
ಸಿ. ಪಾರ್ವತಮ್ಮ(1927-2006) ಭಾರತದ ಮೊದಲ ದಲಿತ ಮಹಿಳಾ ಸಮಾಜಶಾಸ್ತ್ರಜ್ಞರು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬೋಧಿಸಿದರು. ಚಿತ್ರದುರ್ಗ ಜಿಲ್ಲೆಯ ಸ್ಯಾಗಲಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಪಾರ್ವತಮ್ಮ ಮಗುವಾಗಿದ್ದಾಗಲೇ ಅವರ ತಂದೆ ನಿಧನರಾಗುತ್ತಾರೆ. ಅವರ ತಾಯಿ ಕೂಲಿ ಕೆಲಸ ಮಾಡುತ್ತಾ ಏಕಾಂಗಿಯಾಗಿ ಮಗಳನ್ನು ಬೆಳೆಸುತ್ತಾರೆ. ‘ನ್ಯೂ ಹಾರಿಜನ್ಸ್ ಅಂಡ್ ಶೆಡ್ಯೂಲ್ಡ್ ಕ್ಯಾಸ್ಟ್ಸ್’ (1984) ಪುಸ್ತಕವನ್ನು ತಮ್ಮ ತಾಯಿಗೆ ಸಮರ್ಪಿಸುತ್ತಾ ‘ನನ್ನ ತಾಯಿ ಶಿವರುದ್ರಮ್ಮ ಸ್ಯಾಗಲಿಗೆ ಅಂತ್ಯವಿಲ್ಲದ ಕಷ್ಟಗಳು ತಾನು ವಂಚಿತಳಾದ ಶಿಕ್ಷಣದ ಮಹತ್ವವನ್ನು ಆಕೆಗೆ ಮನವರಿಕೆ ಮಾಡಿಸಿದವು’ ಎಂದು ಬರೆಯುತ್ತಾರೆ

- Advertisement -

ದಾವಣಗೆರೆ ಮತ್ತು ಮೈಸೂರಿನಲ್ಲಿ ಪದವಿ, ಸ್ನಾತಕೋತ್ತರ ವ್ಯಾಸಂಗ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಯುಎಸ್‌ನ ಹಾರ್ವರ್ಡ್ ವಿವಿಗೆ ಸೇರಿಕೊಂಡರು, ನಂತರ ಯುಕೆಯ ಮ್ಯಾಂಚೆಸ್ಟರ್ ವಿವಿಯಲ್ಲಿ ವಿಕ್ಟರ್ ವಿ.ಟರ್ನರ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಮಾನವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡಿದರು. ಅವರು ಉಲ್ಲೇಖಿಸುವ ಕರ್ನಾಟಕದ ಕ್ಷೇತ್ರ ಎನ್ನುವ ಹಳ್ಳಿಯಲ್ಲಿ ಮತಧರ್ಮ, ಜಾತಿ ಮತ್ತು ರಾಜಕೀಯದ ಕುರಿತು ಸಂಶೋಧನೆ ಮಾಡಿದರು. 1962ರಲ್ಲಿ ಮೈಸೂರು ವಿವಿಯ ಸಮಾಜಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ನೇಮಕಗೊಂಡರು, ನಂತರ 1964ರಲ್ಲಿ ಆ ವಿಭಾಗದ ಮುಖ್ಯಸ್ಥರಾಗಿ 1988ರಲ್ಲಿ ನಿವೃತ್ತರಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಕಲ್ಪನಾ ಕನ್ನಾಭಿರಾನ್ ತಮ್ಮ Suffering and Resistance: Essays on Anti-Caste Feminist Praxis(2026) ಪುಸ್ತಕದಲ್ಲಿ ‘ಮ್ಯಾಂಚೆಸ್ಟರ್‍‌ನಲ್ಲಿ ವಿ.ಡಬ್ಲ್ಯು. ಟರ್ನರ್, ಮ್ಯಾಕ್ಸ್ ಗ್ಲುಕಮನ್ ಮತ್ತು ಎಫ್.ಜಿ.ಬೈಲೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ದಲಿತ ಸಮುದಾಯದ ಪಾರ್ವತಮ್ಮ ಮತ್ತು ಬಾಂಬೆ ಸ್ಕೂಲ್‌ನ ಗುಯ್ರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ಒಕ್ಕಲಿಗ ಜಾತಿಯ ಕೆ.ಎನ್. ವೆಂಕಟರಾಯಪ್ಪ ಅವರ ನಡುವೆ ಸಂಘರ್ಷ ಏರ್ಪಡುತ್ತದೆ. ಎನ್. ಜಯರಾಮ್ ಬರೆದಂತೆ ಮೈಸೂರು ವಿವಿಯ ಸಮಾಜಶಾಸ್ತ್ರ ವಿಭಾಗದಲ್ಲಿ ಹಿರಿತನ ಮತ್ತು ವಿಭಾಗ ಮುಖ್ಯಸ್ಥರ ನೇಮಕ ಕುರಿತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ನ್ಯಾಯಾಂಗದ ಮಧ್ಯಸ್ಥಿಕೆ ನಂತರ ಪಾರ್ವತಮ್ಮನವರ ಪರ ತೀರ್ಪು ಪ್ರಕಟವಾಗುತ್ತದೆ ಮತ್ತು ಅವರು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಾರೆ. ಆದರೆ ವಿವಿಯಲ್ಲಿ ಎರಡು ಗುಂಪುಗಳಾಗುತ್ತವೆ. ಜಾತಿ ಕುರಿತು ಅಧ್ಯಯನ ಮಾಡಿದ ಇಬ್ಬರು ವಿದ್ವಾಂಸರ ನಡುವೆ ಜಾತಿ ಕಾರಣ ಬಿರುಕು ಮೂಡುತ್ತದೆ. ಒಕ್ಕಲಿಗ ರಾಜಕಾರಣಿಗಳ ಒತ್ತಾಯಕ್ಕೆ ಮಣಿದ ವಿವಿ ಆಡಳಿತ ಮಂಡಳಿ 1974ರಲ್ಲಿ ಪ್ರತ್ಯೇಕವಾಗಿ ಮಾನವಶಾಸ್ತ್ರ ವಿಭಾಗ ಸ್ಥಾಪಿಸುತ್ತದೆ. ಇದಕ್ಕೆ ಸಮಾಜಶಾಸ್ತ್ರಜ್ಞ ವೆಂಕಟರಾಯಪ್ಪ ಮುಖ್ಯಸ್ಥರಾಗುತ್ತಾರೆ. ಆದರೆ ಸಾಮಾಜಿಕ ಮಾನವಶಾಸ್ತ್ರ ವಿದ್ವಾಂಸರಾದ ಪಾರ್ವತಮ್ಮ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗುತ್ತಾರೆ’ ಎಂದು ಬರೆಯುತ್ತಾರೆ.

ಸಿ ಪಾರ್ವತಮ್ಮ
ಸಿ. ಪಾರ್ವತಮ್ಮ ಮತ್ತವರ ಕೃತಿ

ಮೇಲಿನ ಘಟನೆ ಭಾರತದ ಜಾತಿ ವ್ಯವಸ್ಥೆಯಲ್ಲಿ ಬಲಿಷ್ಠ ಜಾತಿಗಳ ಪ್ರಾಬಲ್ಯವನ್ನು ತೋರಿಸುತ್ತದೆ. ಆದರೆ ಪ್ರತಿಭಾವಂತರಾದ ಮತ್ತು ದೃಢಮನಸ್ಥಿತಿಯ ಪಾರ್ವತಮ್ಮ ಎದೆಗುಂದದೆ ನ್ಯಾಯಕ್ಕಾಗಿ ಹೋರಾಡುತ್ತಾರೆ. ದಲಿತರು ಮತ್ತು ಮಹಿಳೆಯಾಗಿರುವುದರ ಜೊತೆಗೆ ಪ್ರತಿಭಾವಂತ ವಿದ್ವಾಂಸರಾಗಿರುವ ಕಾರಣಕ್ಕೆ ಸಹ ಸಮಾಜ ಮತ್ತು ಪ್ರಭುತ್ವ ಜಂಟಿಯಾಗಿ ಸೃಷ್ಟಿಸಿದ ಅಸಮಾನ ಸ್ಪರ್ಧೆಯನ್ನು ಎದುರಿಸುವ ಪಾರ್ವತಮ್ಮ ಜಾತಿ ಮತ್ತು ಲಿಂಗ ತಾರತಮ್ಯದ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುತ್ತಾರೆ. ಆ ಮೂಲಕ ದಲಿತ assertionಗೆ ಮಾದರಿಯಾಗುತ್ತಾರೆ. ರಾಜಕೀಯ ಶಾಸ್ತ್ರಜ್ಞ ಹರಾಲ್ಡ್ ಐಸ್ಸಾಕ್ ‘ಬಿಎ ಪದವಿಯಲ್ಲಿ ಮತ್ತು ತರಗತಿಯಲ್ಲಿ ಪ್ರಥಮ ದರ್ಜೆ ಪಡೆಯುವುದರ ಮೂಲಕ ಡಬಲ್ ಪ್ರಥಮ ಸಾಧಿಸುತ್ತಾರೆ, ಎಂಎ ತತ್ವಶಾಸ್ತ್ರದಲ್ಲಿ ಡಿಸ್ಟಿಂಕ್ಷನ್ ಗಳಿಸುತ್ತಾರೆ. ಸರ್ಕಾರದ ಸ್ಕಾಲರ್ಶಿಪ್ ಮೂಲಕ ಮ್ಯಾಂಚೆಸ್ಟರ್‍‌ನಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಾರೆ. ಈ ಎಲ್ಲಾ ಹಿರಿಮೆಗಳು ಭಾರತದ ಶೈಕ್ಷಣಿಕ ವಲಯದಲ್ಲಿ ಅವರಿಗೆ ಪ್ರತಿಕೂಲವಾಗುತ್ತವೆ’ ಎಂದು ಬರೆಯುತ್ತಾರೆ.

ಇದನ್ನು ಓದಿದ್ದೀರಾ?: ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

ಕಲ್ಪನಾ ಅವರು ‘1965ರಲ್ಲಿ ತಮ್ಮ ಮದುವೆ ವಿಚಾರ ಕುರಿತು ಐಸ್ಸಾಕ್ ಜೊತೆಗೆ ಮಾತನಾಡುತ್ತಾ ಪಾರ್ವತಮ್ಮ ‘ನನ್ನ ಉನ್ನತ ಶಿಕ್ಷಣದ ಕಾರಣಕ್ಕೆ ಜಾತಿಯಲ್ಲಿ ಸೂಕ್ತ ಗಂಡು ಸಿಗುವುದು ಅನುಮಾನ. ಬೇರೆ ಜಾತಿಯವರೊಂದಿಗೆ ಮದುವೆಯಾಗುವುದರ ಕುರಿತು ನನಗೆ ಸ್ಪಷ್ಟತೆಯಿಲ್ಲ. ಇಂದಿಗೂ ಮದುವೆ ಎನ್ನುವುದು ಸಗೋತ್ರ ವಿವಾಹವಾಗಿದೆ. ಈ ಜಾತಿ ಆಧಾರಿತ ಸಗೋತ್ರವು ಜಾತಿ ವ್ಯವಸ್ಥೆಯ ಮೇಲೆ ಬಲವಾದ ಹಿಡಿತ ಹೊಂದಿದೆ. ಬೇರೆ ಜಾತಿಯ ಶಿಕ್ಷಕರ ನಡುವೆ ಒಟ್ಟಿಗೆ ಕೂತು ಊಟ ಮಾಡಬಹುದು, ಮಾಂಸ ತಿನ್ನಬಹುದು. ಆದರೆ ಮದುವೆ ಮಾತ್ರ ಸಾಧ್ಯವಿಲ್ಲವೆಂದು ಹೇಳುತ್ತಾರೆ. ಇವರ ಈ ಜೀವನಾನುಭವ ಮುಂದಿನ ಐದು ದಶಕಗಳ ಅವರ ವೃತ್ತಿ ಮತ್ತು ಖಾಸಗಿ ಬದುಕಿನ ಮೇಲೆ ಪ್ರಭಾವ ಬೀರಿದೆ’ ಎಂದು ಬರೆಯುತ್ತಾರೆ

ಪಾರ್ವತಮ್ಮ ಅವರು ಸುಮಾರು 11 ಪುಸ್ತಕಗಳು ಮತ್ತು 70ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಅವರ ಅಧ್ಯಯನದ ಪ್ರಮುಖ ಕ್ಷೇತ್ರಗಳು: ಪರಿಶಿಷ್ಟ ಜಾತಿಗಳು, ಬುಡಕಟ್ಟು ಸಮುದಾಯಗಳು, ದಕ್ಷಿಣ ಭಾರತದ ಗ್ರಾಮೀಣ ರಚನೆ, ಜಾತಿ ವ್ಯವಸ್ಥೆ, ದಲಿತರ ಸಾಮಾಜಿಕ ಅನುಭವ, ಬ್ರಾಹ್ಮಣ ವಿರೋಧಿ ಚಳವಳಿಗಳು, ಭಾರತೀಯ ಸಮಾಜಶಾಸ್ತ್ರದಲ್ಲಿನ ಬ್ರಾಹ್ಮಣಶಾಹಿ ಪ್ರಾಬಲ್ಯದ ವಿಮರ್ಶೆ. ತಮ್ಮ ಅಧ್ಯಯನ, ಸಂಶೋಧನೆ ಮೂಲಕ ಭಾರತೀಯ ಸಮಾಜಶಾಸ್ತ್ರದಲ್ಲಿ ದಲಿತ ದೃಷ್ಟಿಕೋನಕ್ಕೆ ಸ್ವತಂತ್ರ ಸ್ಥಾನ ಕಲ್ಪಿಸುತ್ತಾರೆ.

ಯಾರನ್ನು ಯಾರು ಪ್ರತಿನಿಧಿಸುವ ಅಧಿಕಾರ ಹೊಂದಿದ್ದಾರೆ?

ಬ್ರಾಹ್ಮಣರನ್ನು ಇತರ ಸವರ್ಣ ಹಿಂದೂ ಜಾತಿಗಳೊಂದಿಗೆ ಹೋಲಿಸುವುದರಲ್ಲೇ ಗಮನ ಕೇಂದ್ರೀಕರಿಸುವ ಇಲ್ಲಿನ ಸಮಾಜಶಾಸ್ತ್ರವು ತಾನು ವಿವರಿಸಬೇಕಾದ ಜಾತಿ ಶ್ರೇಣೀಕರಣವನ್ನು ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೂ ಪುನರುತ್ಪಾದಿಸುತ್ತದೆ. ಎಂ.ಎನ್. ಶ್ರೀನಿವಾಸ್ ಈ ಬ್ರಾಹ್ಮಣಶಾಹಿ ಪರಂಪರೆಯ ಸಮಾಜಶಾಸ್ತ್ರಜ್ಞರು. ಅವರ 1976ರ The Remembered Village ಮಾನವಶಾಸ್ತ್ರೀಯ ಪುಸ್ತಕ. ಇಲ್ಲಿ ಮೈಸೂರು ಭಾಗದ ರಾಮಪುರ(ಕೋಡಗನಹಳ್ಳಿ) ಗ್ರಾಮದ ಕುರಿತು ಅಧ್ಯಯನ ಮಾಡಿದ್ದಾರೆ. ಎಂ.ಎನ್.ಎಸ್ ತಮ್ಮ ಕ್ಷೇತ್ರಕಾರ್ಯದ ಟಿಪ್ಪಣಿಗಳು ಬೆಂಕಿಯಲ್ಲಿ ನಾಶವಾದ ನಂತರ ಬಹುಮಟ್ಟಿಗೆ ಸ್ಮರಣೆಯ ಆಧಾರದ ಮೇಲೆ ಈ ಕೃತಿಯನ್ನು ರಚಿಸಿದರು. ಈ ಅಧ್ಯಯನವನ್ನು ತೀಕ್ಷ್ಣವಾಗಿ ವಿಮರ್ಶಿಸುವ ಪಾರ್ವತಮ್ಮ 1978ರಲ್ಲಿ ‘The Remembered Village: A Brahminical Odyssey’ ಎಂಬ ಸಂಶೋಧನಾತ್ಮಕ ಕೃತಿ ಬರೆಯುತ್ತಾರೆ. ಶ್ರೀನಿವಾಸರ Marriage and Family in Mysoreರಿಂದ(1942) ಆರಂಭಿಸಿ ಅವರ ಇತರ ಕೃತಿಗಳನ್ನೂ ಪರಿಶೀಲಿಸಿದ ಪಾರ್ವತಮ್ಮ ಬ್ರಾಹ್ಮಣರಾದ ಶ್ರೀನಿವಾಸರ ಸೈದ್ಧಾಂತಿಕ ಚೌಕಟ್ಟು, ವಿಧಾನಶಾಸ್ತ್ರ, ವಿಷಯವಸ್ತು ಮತ್ತು ವಿಶ್ಲೇಷಣೆಯಲ್ಲಿ ಬ್ರಾಹ್ಮಣ್ಯ ದೃಷ್ಟಿಕೋನದ ನಿರಂತರ ಪ್ರಭಾವ ಕಂಡುಬರುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಪಾರ್ವತಮ್ಮ ಅವರ ‘The Remembered Village: A Brahminical Odyssey’ ಕೇವಲ ಎಂ.ಎನ್.ಎಸ್ ಅವರ ಒಂದು ಪುಸ್ತಕದ ವಿಮರ್ಶೆಯಲ್ಲ. ಇದು ಭಾರತೀಯ ಸಮಾಜಶಾಸ್ತ್ರದಲ್ಲಿ ‘ಯಾರು ಸಮಾಜವನ್ನು ವಿವರಿಸುತ್ತಾರೆ?’, ‘ಯಾರ ದೃಷ್ಟಿಕೋನದಿಂದ ಸಮಾಜವನ್ನು ವಿವರಿಸಲಾಗುತ್ತದೆ?’ ಮತ್ತು ‘ಯಾರ ಅನುಭವಗಳು ಜ್ಞಾನದಿಂದ ಹೊರಗಿಡಲ್ಪಡುತ್ತವೆ?’ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುವ ದಲಿತ ಸಮಾಜಶಾಸ್ತ್ರೀಯ ವಿಮರ್ಶೆಯಾಗಿದೆ.

srnivas
ಎಂ.ಎನ್. ಶ್ರೀನಿವಾಸ್ ಮತ್ತವರ ಕೃತಿ

ಪಾರ್ವತಮ್ಮ ಅವರ ಪ್ರಮುಖ ವಿಶ್ಲೇಷಣೆ

1. ದ್ವಂದ್ವ ಸಂಹಿತೆಗಳು ಮತ್ತು ಬ್ರಾಹ್ಮಣ–ಅಬ್ರಾಹ್ಮಣ ವಿಭಜನೆ: ಎಂ.ಎನ್.ಎಸ್ ‘ಭಾರತೀಯ ಸಮಾಜದಲ್ಲಿ ನೈತಿಕತೆ ಮತ್ತು ನಡವಳಿಕೆಯ ಎರಡು ಸಂಹಿತೆಗಳು ಹಾಗೂ ಜೀವನಶೈಲಿಯ ಎರಡು ರೂಪಗಳು ಐತಿಹಾಸಿಕವಾಗಿ ರೂಪುಗೊಂಡಿವೆ’ ಎಂದು ಒತ್ತಿಹೇಳುತ್ತಾರೆ. ಈ ಚೌಕಟ್ಟು ಬ್ರಾಹ್ಮಣ–ಅಬ್ರಾಹ್ಮಣ ವಿಭಜನೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ವಿವಿಧ ಗುಂಪುಗಳೊಳಗಿನ ಲಿಂಗಾಧಾರಿತ ವಿಭಜನೆಗಳಿಗೂ ಇದು ಒತ್ತು ನೀಡುತ್ತದೆ. ಇದರ ಪರಿಣಾಮವಾಗಿ ಅಬ್ರಾಹ್ಮಣರ ಜೀವನವನ್ನು ಒಂದು ರೀತಿಯಲ್ಲಿ ಮೇಲ್ವರ್ಗದ/ಬ್ರಾಹ್ಮಣರ ಮಾನದಂಡಗಳ ವಿರುದ್ಧ ಅಥವಾ ಅದರ ಹಿನ್ನೆಲೆಯಲ್ಲಿ ಅರ್ಥೈಸಲಾಗುತ್ತದೆ. ಪಾರ್ವತಮ್ಮಈ ಆಯಾಮಗಳನ್ನು ಪ್ರಮುಖವಾಗಿ ವಿಶ್ಲೇಷಿಸುತ್ತಾರೆ.

2. ಸಂಸ್ಕೃತೀಕರಣದಲ್ಲಿ ಅಡಗಿರುವ ಬ್ರಾಹ್ಮಣಶಾಹಿ ಮೌಲ್ಯಗಳು: ಶ್ರೀನಿವಾಸ್ ಅವರ ಪ್ರಸಿದ್ಧ ಪರಿಕಲ್ಪನೆಯಾದ ಸಂಸ್ಕೃತೀಕರಣವನ್ನು(Sanskritization) ಪಾರ್ವತಮ್ಮ ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಸಂಸ್ಕೃತೀಕರಣ ಎಂದರೆ ತಳಸಮುದಾಯಗಳು, ಹಿಂದುಳಿದ ಜಾತಿಗಳು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಮುಂದುವರೆದ ಜಾತಿಗಳ ಆಚರಣೆಗಳು, ಮೌಲ್ಯಗಳು ಮತ್ತು ಜೀವನಶೈಲಿಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ. ಪಾರ್ವತಮ್ಮನವರು ‘ಈ ಪರಿಕಲ್ಪನೆಯೊಳಗೆ ಬ್ರಾಹ್ಮಣವಾದಿ ಮೌಲ್ಯಗಳು ಅಡಕವಾಗಿವೆ. ಇದು ದಕ್ಷಿಣ ಭಾರತದ ಬ್ರಾಹ್ಮಣ ದೃಷ್ಟಿಕೋನದಿಂದ ರೂಪುಗೊಂಡಿದ್ದು ಬ್ರಾಹ್ಮಣ ಶ್ರೇಷ್ಠತೆಯನ್ನು ಆದರ್ಶೀಕರಿಸುತ್ತದೆ’ ಎಂದು ವಿವರಿಸುತ್ತಾರೆ. ಮುಂದುವರಿದು ಎಂ.ಎನ್.ಎಸ್ ಅವರ ಬ್ರಾಹ್ಮಣವಾದದ ದೃಷ್ಟಿಕೋನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ‘ಸಂಸ್ಕೃತೀಕರಣದ ಚೌಕಟ್ಟು ತಳಸಮುದಾಯಗಳ ನೈಜ ಅನುಭವಗಳಿಗೆ ಸಾಕಷ್ಟು ಸಹಾನುಭೂತಿ ತೋರಿಸುವುದಿಲ್ಲ. ಬಂಧುತ್ವದ ಭಾವನೆಯನ್ನು ಒಳಗೊಳ್ಳುವುದಿಲ್ಲ. ಅಸ್ಪೃಶ್ಯತೆಯ ವಾಸ್ತವವನ್ನು ಸಮರ್ಪಕವಾಗಿ ವಿವರಿಸುವುದಿಲ್ಲ. ಮತ್ತು ಭೂಮಾಲೀಕ ಸಮುದಾಯಗಳಿಂದ ನಡೆಯುವ ಶೋಷಣೆ ಮತ್ತು ದಮನವನ್ನು ವಿಶ್ಲೇಷಿಸುವುದಿಲ್ಲ’ ಎಂದು ಬರೆಯುತ್ತಾರೆ. ಸಾಮಾಜಿಕ ಬದಲಾವಣೆಯ ಅಧ್ಯಯನದ ಮುಖ್ಯ ಮಾರ್ಗವಾಗಿ ಬ್ರಾಹ್ಮಣರ ಆಚರಣೆಗಳ ಅನುಕರಣೆಯನ್ನು ಮಾತ್ರ ಪರಿಗಣಿಸುವುದನ್ನು ನಿರಾಕರಿಸಿ ಪ್ರತಿರೋಧ ಮತ್ತು ಪರ್ಯಾಯ ಸಂಪ್ರದಾಯಗಳನ್ನೂ ಅಧ್ಯಯನ ಮಾಡಬೇಕು ಎಂದು ಅವರು ಸೂಚಿಸುತ್ತಾರೆ.

ಕಡೆಗೂ ಎಂ.ಎನ್.ಎಸ್ ಬ್ರಾಹ್ಮಣಶಾಹಿ ಸಂಸ್ಕೃತಿಯನ್ನು ಇತರ ಸಮುದಾಯಗಳು ತಲುಪಬೇಕಾದ ಮಾನದಂಡವಾಗಿ ತೋರಿಸುತ್ತಾರೆ. ಈ ಕಾರ್ಯಸೂಚಿಯನ್ನು ಪಾರ್ವತಮ್ಮ ಪ್ರಶ್ನಿಸುತ್ತಾರೆ

3. ‘The Remembered Village’ ಕೃತಿ ಒಂದು ‘ಬ್ರಾಹ್ಮಣವಾದಿ ಒಡಿಸ್ಸಿ: ಇದು ಪಾರ್ವತಮ್ಮ ಅವರ ವಿಮರ್ಶೆಯ ವಿಶಿಷ್ಟ ಆಯಾಮವಾಗಿದೆ. ಇದನ್ನು ಪ್ರಾಚೀನ ಬ್ರಾಹ್ಮಣಶಾಹಿಯ ಶ್ರುತಿ ಮತ್ತು ಸ್ಮೃತಿ ಪರಂಪರೆಯೊಂದಿಗೆ ಹೋಲಿಸುತ್ತಾ ಜ್ಞಾನವನ್ನು ಲಿಖಿತ ದಾಖಲೆಗಳಿಗಿಂತ ಸ್ಮರಣೆ ಮತ್ತು ಮೌಖಿಕ ಪರಂಪರೆಯ ಮೂಲಕ ಸಂರಕ್ಷಿಸುವ ಬ್ರಾಹ್ಮಣವಾದಿ ವಿಧಾನಕ್ಕೆ ಇದು ಹೋಲುತ್ತದೆ ಎಂಬುದು ವಿಶ್ಲೇಷಿಸುತ್ತಾರೆ. ಎಂ.ಎನ್.ಎಸ್ ತಮಿಳು ಬ್ರಾಹ್ಮಣರು. ಆಕ್ಸ್‌ಫರ್‍ಡ್‌ನಲ್ಲಿ ಶಿಕ್ಷಣ ಪಡೆದವರು. ನಗರ ಹಿನ್ನೆಲೆಯ ಮಾನವಶಾಸ್ತ್ರಜ್ಞರು. ಆದ್ದರಿಂದ ಈ ‘ಸ್ಮರಣೆಯ ಪರಂಪರೆ’ಯನ್ನು ಮುಂದುವರಿಸಲು ಒಂದು ರೀತಿಯಲ್ಲಿ ಸೂಕ್ತ ವ್ಯಕ್ತಿಯಾಗಿದ್ದರು ಎಂಬ ವ್ಯಂಗ್ಯಾತ್ಮಕವಾಗಿ ವಿವರಿಸುತ್ತಾರೆ. ಅವರ ಕೃತಿಯು ಬ್ರಾಹ್ಮಣ ಮೌಲ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ದಲಿತ/ಪರಿಶಿಷ್ಟ ಜಾತಿಗಳ ಬದುಕಿನ ಅನುಭವಗಳನ್ನು ಅಂಚಿಗೆ, ನೇಪಥ್ಯಕ್ಕೆ ತಳ್ಳುತ್ತದೆ. ಇದರಿಂದ ಜಾತಿ, ಅಧಿಕಾರ ಮತ್ತು ಸಾಮಾಜಿಕ ಸಂಬಂಧಗಳ ಸಂಕೀರ್ಣತೆ ಸರಳೀಕೃತಗೊಳ್ಳುತ್ತದೆ ಎಂದು ವಿಮರ್ಶಿಸುತ್ತಾರೆ.

ಈ ಲೇಖನ ಓದಿದ್ದೀರಾ?: ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?

4. ವಿಧಾನಶಾಸ್ತ್ರ ಮತ್ತು ದೃಷ್ಟಿಕೋನದ ವಿಮರ್ಶೆ: ಪಾರ್ವತಮ್ಮ ಅವರು ಸಮಾಜಶಾಸ್ತ್ರೀಯ ಅಧ್ಯಯನವು ಪರಿಶಿಷ್ಟ ಜಾತಿಗಳ ನೈಜ ಜೀವನಾನುಭವಗಳ ಮೇಲೆ ಆಧಾರಿತವಾಗಿರಬೇಕು ಎಂದು ಒತ್ತಿ ಹೇಳುತ್ತಾರೆ. ವಂಚಿತ ಸಮುದಾಯಗಳ ದೈನಂದಿನ ಅನುಭವಗಳಿಂದಲೇ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳುವ ವಿಧಾನಗಳಿಗೆ ಮಹತ್ವ ನೀಡುತ್ತಾರೆ. ವಿಶೇಷವಾಗಿ ಗ್ರಾಮೀಣ ಮೈಸೂರು ಪ್ರದೇಶದಲ್ಲಿ ಅವರು ನಡೆಸಿದ ಕ್ಷೇತ್ರಕಾರ್ಯದಲ್ಲಿ ದಲಿತರು, ಲಿಂಗಾಯತರು, ಇತರ ಜಾತಿ ಸಮುದಾಯಗಳಿಗೆ ಸೇರಿದ ಬಹುಜನರ ಗ್ರಾಮೀಣ ಸಮಾಜವನ್ನು ಅಧ್ಯಯನ ಮಾಡಿದರು. ಇದರ ಮೂಲಕ ಲಿಂಗಾಯತ ಚಳವಳಿಯಲ್ಲಿದ್ದ ಬ್ರಾಹ್ಮಣ ವಿರೋಧಿ ಅಂಶಗಳು, ಜಾತಿ ಆಧಾರಿತ ಅಧಿಕಾರ ಸಂಬಂಧಗಳು ಮತ್ತು ಶೋಷಣೆಯ ವಾಸ್ತವಗಳನ್ನು ಮುಂದಿಡುತ್ತಾರೆ. ಪಾರ್ವತಮ್ಮ ಅವರ ದೃಷ್ಟಿಯಲ್ಲಿ ಗ್ರಾಮವನ್ನು ಕೇವಲ ಸಾಮರಸ್ಯ, ಒಗ್ಗಟ್ಟು ಮತ್ತು ಸಾಮಾಜಿಕ ಸಮತೋಲನದ ಸ್ಥಳವಾಗಿ ನೋಡುವುದು ಅಧ್ಯಯನಕ್ಕೆ ಒಂದು ಮಿತಿಯನ್ನು ನಿರ್ಮಿಸುತ್ತದೆ. ಇದರ ಜೊತೆಗೆ ಅದರೊಳಗಿನ ಅಧಿಕಾರ, ಸಂಘರ್ಷ, ಶೋಷಣೆ ಮತ್ತು ಪ್ರತಿರೋಧವನ್ನೂ ಒಳಗೊಳ್ಳಬೇಕು ಎಂದು ಬರೆಯುತ್ತಾರೆ.

5. ದಲಿತರ ಅನುಭವವೇ ಕೇಂದ್ರವಾಗಬೇಕು: ದಲಿತರ ಅನುಭವವನ್ನು ಸಮಾಜಶಾಸ್ತ್ರದ ಕೇಂದ್ರಕ್ಕೆ ತರುವುದು ಪಾರ್ವತಮ್ಮ ಅವರ ವಿಮರ್ಶೆಯ ಅತ್ಯಂತ ಮಹತ್ವದ ಅಂಶವಾಗಿದೆ. ಬ್ರಾಹ್ಮಣರು ಮತ್ತು ಇತರ ಜಾತಿಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವುದಷ್ಟೇ ಸಾಕಾಗುವುದಿಲ್ಲ. ಜೊತೆಗೆ ದಲಿತರು ಎಲ್ಲಿದ್ದಾರೆ? ಅವರ ಅನುಭವಗಳು ಎಲ್ಲಿವೆ? ಅವರ ಮೇಲೆ ನಡೆಯುವ ಅಸ್ಪೃಶ್ಯತೆ, ಶೋಷಣೆ ಮತ್ತು ಸಾಮಾಜಿಕ ಹೊರಗಿಡುವಿಕೆ ಎಲ್ಲಿದೆ? ಯಾರು ಜ್ಞಾನವನ್ನು ಉತ್ಪಾದಿಸುತ್ತಾರೆ ಮತ್ತು ಯಾರ ಜೀವನವನ್ನು ಅಧ್ಯಯನದ ವಸ್ತುವನ್ನಾಗಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಬೇಕು. ಪಾರ್ವತಮ್ಮ ಈ ಪ್ರಶ್ನೆಗಳ ಮೂಲಕ ಸಮಾಜಶಾಸ್ತ್ರೀಯ ಜ್ಞಾನವನ್ನು ಯಾರು ನಿರ್ಮಿಸುತ್ತಾರೆ ಎಂಬ ಅಧಿಕಾರದ ಪ್ರಶ್ನೆಯನ್ನೇ ಎತ್ತುತ್ತಾರೆ. ದಲಿತರು, ಅಬ್ರಾಹ್ಮಣರು ಮತ್ತು ಮಹಿಳೆಯರ ಅನುಭವಗಳನ್ನು ಕೇಂದ್ರದಲ್ಲಿರಿಸಿ ಜಾತಿಯನ್ನು ಅಧಿಕಾರ, ಶೋಷಣೆ, ಹೊರಗಿಡುವಿಕೆ, ಜ್ಞಾನ ನಿಯಂತ್ರಣ ಮತ್ತು ಪ್ರತಿರೋಧದ ವ್ಯವಸ್ಥೆಯಾಗಿ ಅಧ್ಯಯನ ಮಾಡಬೇಕು ಎಂಬುದು ಪಾರ್ವತಮ್ಮನವರ ಚಿಂತನೆಯಾಗಿದೆ.

ಕಾನೂನು ವಿದ್ವಾಂಸರು, ಸ್ತ್ರೀವಾದಿ ಚಿಂತಕರಾದ ಕಲ್ಪನಾ ಕನ್ನಾಭಿರಾನ್ ತಮ್ಮ Suffering and Resistance: Essays on Anti-Caste Feminist Praxis ಕೃತಿ ಮತ್ತು ಸಂಬಂಧಿತ ಬರಹಗಳಲ್ಲಿ ಪಾರ್ವತಮ್ಮನವರನ್ನು ದಮನಿತ ವರ್ಗಗಳ ನಾಯಕರಾಗಿದ್ದ ದಕ್ಷಾಯಿಣಿ ವೇಲಾಯುಧನ್ ಮುಂತಾದ ವ್ಯಕ್ತಿಗಳ ಜೊತೆಗೆ ತೌಲನಿಕವಾಗಿ ಪರಿಚಯಿಸುತ್ತಾ ಬರೆಯುತ್ತಾರೆ. ಸಂವಿಧಾನದ ಜಾತಿ ವಿರೋಧಿ ತತ್ವಗಳನ್ನು ಸಾಮಾಜಿಕ ಚಿಂತನೆಯೊಂದಿಗೆ ಬೆಸೆದ ಪ್ರಮುಖ ಚಿಂತಕರಾಗಿ ಗುರುತಿಸುತ್ತಾರೆ.

dalit 30

ಕನ್ನಾಭಿರಾನ್ ‘ಪಾರ್ವತಮ್ಮನವರು ದೈನಂದಿನ ಬ್ರಾಹ್ಮಣ್ಯದ ಪ್ರಾಬಲ್ಯವನ್ನು, ಪ್ರಬಲ ಜಾತಿಗಳ ಅಧಿಕಾರವನ್ನು, ಜಾತಿ ಮತ್ತು ಲಿಂಗದ ನಿಯಮಗಳನ್ನು, ಜಾತಿ–ಲಿಂಗ ಆಧಾರಿತ ಹಿಂಸೆಯನ್ನು ಪ್ರಶ್ನಿಸಿದರು. ಅದರ ಜೊತೆಗೆ ಮಹಿಳೆಯರು ಮತ್ತು ಅಂಚಿನ ಸಮುದಾಯಗಳ ದೃಷ್ಟಿಕೋನದಿಂದ ಹೊಸ ರೀತಿಯ ಪೌರತ್ವ ಮತ್ತು ಸಾಮೂಹಿಕ ಬದುಕಿನ ಕಲ್ಪನೆಗಳನ್ನು ರೂಪಿಸಿದರು’ ಎಂದು ಬರೆಯುತ್ತಾರೆ.

ಪಾರ್ವತಮ್ಮ ತಮ್ಮ ಇತರ ಬರಹಗಳಲ್ಲಿ ಶಿಕ್ಷಣ ಮತ್ತು ಜ್ಞಾನಕ್ಕೆ ಸಂಬಂಧಿಸಿದಂತೆ ಬಹುಮುಖ್ಯ ವಿಚಾರಗಳನ್ನು ಮಂಡಿಸುತ್ತಾರೆ. ಬ್ರಾಹ್ಮಣ–ಅಬ್ರಾಹ್ಮಣ ಸಂಬಂಧವು ಮೂಲಭೂತವಾಗಿ ಜ್ಞಾನಕ್ಕೆ ಯಾರಿಗೆ ಪ್ರವೇಶವಿದೆ ಮತ್ತು ಯಾರಿಗೆ ಅದನ್ನು ನಿರಾಕರಿಸಲಾಗಿದೆ ಎಂಬ ಪ್ರಶ್ನೆಯೊಂದಿಗೆ ಸಂಬಂಧಿಸಿದೆ ಎಂದು ಅವರು ಸೂಚಿಸುತ್ತಾರೆ. ಚಾರಿತ್ರಿಕವಾಗಿ ಚಾತುರ್ವರ್ಣ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟ ಸಮುದಾಯಗಳಿಗೆ ಅಸಮಾನ ವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ ಬ್ರಾಹ್ಮಣರೊಂದಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಜಾತಿ ಅಧಿಕಾರವು ಕೇವಲ ಆಚರಣೆ ಅಥವಾ ಧಾರ್ಮಿಕ ಸ್ಥಾನಮಾನದ ಪ್ರಶ್ನೆಯಲ್ಲ. ಅದು ಕೆಳಗಿನ ಪ್ರಶ್ನೆಗಳನ್ನೂ ಒಳಗೊಂಡಿದೆ:
ಯಾರಿಗೆ ಶಿಕ್ಷಣ ದೊರೆಯುತ್ತದೆ? ಯಾರು ಜ್ಞಾನವನ್ನು ಉತ್ಪಾದಿಸುತ್ತಾರೆ? ಯಾರು ಸಮಾಜವನ್ನು ವ್ಯಾಖ್ಯಾನಿಸುತ್ತಾರೆ? ಯಾರ ಜ್ಞಾನವನ್ನು ಮಾನ್ಯವಾದ ಜ್ಞಾನವೆಂದು ಪರಿಗಣಿಸಲಾಗುತ್ತದೆ? ಯಾರನ್ನು ಅಧ್ಯಯನದ ವಸ್ತುವಾಗಿ ಪ್ರತಿನಿಧಿಸಲಾಗುತ್ತದೆ?

ಪಾರ್ವತಮ್ಮನವರು ತಮ್ಮ ಅಧ್ಯಯನದ ಮೂಲಕ ಬ್ರಾಹ್ಮಣವಾದಿ ಸಮಾಜಶಾಸ್ತ್ರ ಚಿಂತನೆಗಳ ಎಲ್ಲಾ ಪದರುಗಳನ್ನು ಬಿಚ್ಚಿಡುತ್ತಾರೆ. ಜೊತೆಗೆ, ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯೊಳಗೆ ದಲಿತ ಸಮಾಜಶಾಸ್ತ್ರಜ್ಞರು ಎದುರಿಸುವ ಸಮಸ್ಯೆಗಳನ್ನೂ ಪ್ರತಿಬಿಂಬಿಸುತ್ತಾರೆ. ಬ್ರಾಹ್ಮಣಶಾಹಿ ಪರಂಪರೆಯ ಅಧ್ಯಯನ ಕ್ರಮವನ್ನು ನಿರಾಕರಿಸಿ ತಳಸಮುದಾಯ ಕೇಂದ್ರಿತ ಸಂಶೋಧನೆಯನ್ನು ಮಂಡಿಸಿದ ಪಾರ್ವತಮ್ಮ ಇಪ್ಪತ್ತನೇ ಶತಮಾನದ ಬಹುಮುಖ್ಯ ಸಾಮಾಜಿಕ ಮಾನವಶಾಸ್ತ್ರಜ್ಞರು.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...