ದೆಹಲಿಯಿಂದ ಲೇಹ್‌ಗೆ ಹಾರಿದ್ದ ಇಂಡಿಗೋ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ದೆಹಲಿಗೆ ವಾಪಸ್ ಬಂದಿದೆ. ವಿಮಾನವು ಗುರುವಾರ ಬೆಳಿಗ್ಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ವಿಮಾನಯಾನ ವಕ್ತಾರರು, “2025ರ ಜೂನ್ 19ರಂದು ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6E 2006, ತಾಂತ್ರಿಕ ಸಮಸ್ಯೆಯಿಂದಾಗಿ ಲೇಹ್‌ನಲ್ಲಿ ಇಳಿಯಲು ಸಾಧ್ಯವಾಗದೆ ದೆಹಲಿಗೆ ವಾಪಸ್ ಮರಳಿದೆ. ಕಾರ್ಯವಿಧಾನಗಳ ಪ್ರಕಾರ, ಪೈಲಟ್ ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ವೈದ್ಯರು ಸೇರಿ ಒಂಬತ್ತು ಮಂದಿ ಸಾವು; ಹಾಸ್ಟೆಲ್ ತೆರವು
ವಿಮಾನವು ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯ ನಿರ್ವಹಣೆಗೆ ಒಳಗಾಗುತ್ತಿದೆ ಎಂದೂ ವಕ್ತಾರರು ಹೇಳಿದ್ದಾರೆ. “ಪ್ರಯಾಣಿಕರನ್ನು ಲೇಹ್‌ಗೆ ಕರೆದೊಯ್ಯಲು ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದಿದ್ದಾರೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂಬ ವಿವರ ಮಾತ್ರ ತಿಳಿಸಿಲ್ಲ.
ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ AI171 ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಬಿಟ್ಟು ಉಳಿದೆಲ್ಲರೂ ಮೃತಪಟ್ಟಿದ್ದಾರೆ. ವಿಮಾನ ಅಪ್ಪಳಿಸಿದ ಹಾಸ್ಟೆಲ್ ಕಟ್ಟಡದಲ್ಲಿದ್ದ ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಖಚಿತವಾಗಿ ಮೃತರ ಸಂಖ್ಯೆ ತಿಳಿಸಲಾಗಿಲ್ಲ. ವೈದ್ಯರುಗಳು 270 ಮೃತದೇಹ ಸಿಕ್ಕಿದೆ ಎಂದಿದ್ದಾರೆ. ಸದ್ಯ ಡಿಎನ್‌ಎ ಪರೀಕ್ಷೆ ಮೂಲಕ ಮೃತದೇಹದ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಈ ಘಟನೆ ಬಳಿಕ ವಿಮಾನಯಾನ ಸಂಸ್ಥೆಗಳು ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಿದೆ.
