ʼಅನೇಕತೆಯಲ್ಲಿ ಏಕತೆʼ ಎಂಬ ಭಾರತೀಯ ಪರಿಕಲ್ಪನೆಯ ನೆಲೆಯೇ ವಿದ್ಯಾಸಂಸ್ಥೆಗಳು. ಆದರೆ ದೆಹಲಿ ವಿವಿಯಲ್ಲಿ ಪ್ರಸ್ತಾವಿತ ಪಠ್ಯ ಪರಿಷ್ಕರಣೆಯು ಇಂತಹ ಹಳೇ ಮೌಲ್ಯಗಳಿಗೆ ಬೆನ್ನು ತಿರುಗಿಸುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬದಲಾವಣೆಗಳು ಕೇವಲ ಶಿಫಾರಸುಗಳಲ್ಲ; ಇವು ಭವಿಷ್ಯದ ಪೀಳಿಗೆಗೆ ನೀಡುವ ಸಂದೇಶಗಳೂ ಹೌದು.
ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಹಾರಗಳ ಸ್ಥಾಯಿ ಸಮಿತಿಯು ಪ್ರೊ. ಪ್ರಕಾಶ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಮನೋವಿಜ್ಞಾನ ವಿಭಾಗದ ಪಠ್ಯಕ್ರಮವನ್ನು ಪರಿಷ್ಕರಿಸಲು ಶಿಫಾರಸು ಮಾಡಿದ್ದು, ಲೈಂಗಿಕ ಶಿಕ್ಷಣ, ಜಾತಿ, ಧಾರ್ಮಿಕ ಸೌಹಾರ್ದತೆಯಂತಹ ಸಾಮಾಜಿಕ ವಿಷಯಗಳನ್ನು ತೆಗೆದುಹಾಕಲು ಸೂಚಿಸಿದೆ. ಈ ಕ್ರಮವು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಹೊಂದಾಣಿಕೆ ಮಾಡಲು ಕೈಗೊಳ್ಳುತ್ತಿರುವ ವಿಶಾಲ ಪಠ್ಯಕ್ರಮದ ಪರಿಷ್ಕರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ವಿವಿ ಹೇಳಿದೆ.
ಸ್ಥಾಯಿ ಸಮಿತಿಯು ಪಠ್ಯಕ್ರಮ ಪರಿಷ್ಕರಣೆಗೆ ಮಾಡಿರುವ ಪ್ರಮುಖ ಶಿಫಾರಸುಗಳು:
1. ಲೈಂಗಿಕ ಮನೋವಿಜ್ಞಾನ: ಲೈಂಗಿಕತೆ ಮತ್ತು ಅದರ ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನು ಅವಲೋಕಿಸುವ ಈ ಪಠ್ಯವು ವಿದ್ಯಾರ್ಥಿಗಳಿಗೆ ಲೈಂಗಿಕತೆಯ ಭಿನ್ನತೆಯ ಕುರಿತಾಗಿಯೂ ಲೈಂಗಿಕ ಗುರುತು (ಸೆಕ್ಶುವಲ್ ಐಡೆಂಟಿಟಿ), ಸಂಬಂಧಗಳ ಪ್ರಕಾರಗಳು ಹಾಗೂ ಸಾಮಾಜಿಕ ವೈವಿಧ್ಯತೆಯ ಅಧ್ಯಯನವನ್ನು ಒದಗಿಸುತ್ತದೆ.
ಶಿಫಾರಸಿಗೂ ಮೊದಲಿದ್ದ ಪಠ್ಯದಲ್ಲಿ ಮಾಧ್ಯಮದಲ್ಲಿ ಲೈಂಗಿಕತೆಗಳ ಪ್ರತಿನಿಧಿಸುವಿಕೆ, ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆಯ ವಿವಿಧ ಚಿಂತನಾಶೈಲಿಗಳು (ಉದಾ: ಕಾಮಶಾಸ್ತ್ರ, ಭಕ್ತಿಕಾಲದ ಪಂಥಗಳು), ಲೈಂಗಿಕ ಹಕ್ಕುಗಳು, ಸಮಾನತೆ, ಲೈಂಗಿಕ ಶೋಷಣೆ ವಿರುದ್ಧ ಕಾನೂನುಗಳು ಮತ್ತು ಮಾನವ ಹಕ್ಕುಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿತ್ತು. ʼಲೈಂಗಿಕತೆ ಎಂಬುದು ಕೇವಲ ಶಾರೀರಿಕ ಅಥವಾ ವೈಯಕ್ತಿಕ ಅಂಶವಲ್ಲ, ಅದು ಮಾನಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳ ಸಮೂಹʼ ಎಂಬುದನ್ನು ಈ ಪಠ್ಯ ಪ್ರತಿಪಾದಿಸುತ್ತದೆ. ವಿದ್ಯಾರ್ಥಿಗಳಿಗೆ ಲೈಂಗಿಕ ಭಿನ್ನತೆಗಳ ಅರಿವು, ಲೈಂಗಿಕ ಆಧ್ಯಾತ್ಮಿಕತೆ ಮತ್ತು ನೈತಿಕತೆ ಬಗ್ಗೆ ವಿಶ್ಲೇಷಣಾತ್ಮಕ ಅಧ್ಯಯನ ನೀಡುತ್ತಿತ್ತು.
ಇದೀಗ ಈ ಐಚ್ಛಿಕ ಪಠ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ಶಿಫಾರಸು ಮಾಡಲಾಗಿದೆ. ಇದರಿಂದ ಲೈಂಗಿಕತೆ, ಮಾಧ್ಯಮ, ಲೈಂಗಿಕ ಗುರುತು ಮತ್ತು ಅನೇಕ ಲೈಂಗಿಕ ಕಾನೂನುಗಳನ್ನು ಕುರಿತ ಅಧ್ಯಯನಗಳು ಪಠ್ಯದಿಂದ ಬಿಟ್ಟುಹೋಗಲಿವೆ. ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಕೋನದಿಂದ ಈ ಶಿಫಾರಸು ತೀವ್ರ ಟೀಕೆಗೆ ಗುರಿಯಾಗಿದೆ.
2. ವೈವಿಧ್ಯತೆಯ ಅರಿವು: ಜಾತಿ ಮತ್ತು ಧಾರ್ಮಿಕ ಗುರುತುಗಳ ಅಧ್ಯಯನವನ್ನು ತೆಗೆದುಹಾಕಿ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳ ಕುರಿತ ಅಧ್ಯಯನದ ಮೇಲೆ ಒತ್ತು ನೀಡಲು ಶಿಫಾರಸು ಮಾಡಲಾಗಿದೆ. ಈ ಪಠ್ಯವು ಸಮಾಜದಲ್ಲಿ ವಿವಿಧ ಜಾತಿಗಳ, ಧಾರ್ಮಿಕ ಗುಂಪುಗಳ ಹಾಗೂ ಲಿಂಗ ಸಮಾನತೆ ಕುರಿತು ಅಧ್ಯಯನ ಮಾಡುತ್ತದೆ. ಇದು ವಿದ್ಯಾರ್ಥಿಗಳಿಗೆ ವಿವಿಧ ಸಾಮಾಜಿಕ ಗುಂಪುಗಳನ್ನು, ಅವರ ವಿಶಿಷ್ಟತೆಯುಳ್ಳ ಸಂಸ್ಕೃತಿಗಳನ್ನು ಹಾಗೂ ವಿವಿಧ ಸಮಾಜಗಳಲ್ಲಿ ಇರುವ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಮುಖ್ಯವಾಗಿ ಜಾತಿ ಮತ್ತು ಧಾರ್ಮಿಕ ಗುರುತುಗಳನ್ನು ಈ ಪಠ್ಯದಿಂದ ತೆಗೆದು ಹಾಕಲು ಶಿಫಾರಸಿನಲ್ಲಿ ಹೇಳಲಾಗಿದೆ. ಇದು ಹೆಚ್ಚು ವಿವಾದಕ್ಕೆ ಕಾರಣವಾಗಿದೆ.
ಶಿಫಾರಸಿಗೂ ಮೊದಲು.. ಭಾರತದಲ್ಲಿ ಜಾತಿ ಪದ್ಧತಿಯ ಇತಿಹಾಸ, ಅದರ ಆಧುನಿಕ ಪರಿಣಾಮಗಳು ಮತ್ತು ಸಮಾಜದಲ್ಲಿ ತಲೆಮಾರುಗಳಿಂದ ಸಾಗುತ್ತಿರುವ ಅಸಮಾನತೆಗಳ ಬಗೆಗೆ ವಿಶ್ಲೇಷಣೆ ಮಾಡಲಾಗಿತ್ತು. ಧರ್ಮದ ವೈವಿಧ್ಯತೆ, ಭಕ್ತಿಕಾಲದ ಚಳವಳಿಗಳು, ಸಾಮಾಜಿಕ ಬದಲಾವಣೆಗಳಲ್ಲಿ ಧರ್ಮದ ಪಾತ್ರದಂತಹ ವಿಚಾರಗಳಿದ್ದವು. ಗಾಂಧೀಜಿ, ಅಂಬೇಡ್ಕರ್, ಪೆರಿಯಾರ್ ಮತ್ತು ಇತರೆ ಸಮಾಜ ಸುಧಾರಕರದ ದೃಷ್ಠಿಕೋನಗಳಲ್ಲಿ ಜಾತಿ ಮತ್ತು ಧರ್ಮಗಳು ಸೇರಿದಂತೆ ಸಮಗ್ರ ಅಧ್ಯಯನವಿತ್ತು. ಭಾರತೀಯ ಸಮಾಜದಲ್ಲಿ ಲಿಂಗ ಆಧಾರಿತ ವಿಭಜನೆ, ಮನೋವ್ಯಾಪಾರ ಮತ್ತು ಹಕ್ಕುಗಳ ಸಂಘರ್ಷದ ಕುರಿತು ಸಂಶೋಧನೆಗೆ, ವಿಷಯಾರ್ಜನೆಗೆ ಅವಕಾಶವಿತ್ತು.
3. ಶಾಂತಿಯ ಮನೋವಿಜ್ಞಾನ: ಈ ಶಿಫಾರಸು, ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಕೃತಿಗಳ ಮೂಲಕ ಶಾಂತಿಯ ವಿಚಾರ ತಿಳಿಸುವುದನ್ನು ಪ್ರಸ್ತಾವಿಸಿದೆ. ಇದರಲ್ಲಿ ಇಸ್ರೇಲ್-ಪ್ಯಾಲೆಸ್ಟೈನ್, ಕಾಶ್ಮೀರ ಮತ್ತು ಈಶಾನ್ಯ ಭಾರತದ ಸಂಘರ್ಷಗಳ ಬಗ್ಗೆ ಅಧ್ಯಯನಗಳನ್ನು ತೆಗೆದುಹಾಕಿ, ಭಗವದ್ಗೀತೆ ಮತ್ತು ಮಹಾಭಾರತದಿಂದ ಉದಾಹರಣೆಗಳನ್ನು ಪಠ್ಯದಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ.
ಶಿಫಾರಸಿಗಿಂತ ಮೊದಲು “ಸಂಘರ್ಷ ಮತ್ತು ಸಂಘರ್ಷ ಪರಿಹಾರ” ಎಂಬ ವಿಭಾಗದ ಅಡಿಯಲ್ಲಿ ಪಠ್ಯವಿತ್ತು. ಇದು ಕಾಶ್ಮೀರ, ಪ್ಯಾಲೆಸ್ಟೈನ್, ಈಶಾನ್ಯ ಭಾರತ ಮತ್ತು ಇತರ ಸಂಘರ್ಷ ವಲಯಗಳು ಸೇರಿದಂತೆ ಜಾಗತಿಕ ಮತ್ತು ದೇಶೀಯ ಸಂಘರ್ಷಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿತ್ತು. ಈ ಪಠ್ಯವು ಜಾಗತಿಕ ಶಾಂತಿ, ಸಂಘರ್ಷಗಳ ನಿರ್ವಹಣೆ, ಮತ್ತು ವಿವಿಧ ಜಾಗತಿಕ ಮತ್ತು ದೇಶೀಯ ರಾಜಕೀಯ ಸಂಘರ್ಷಗಳನ್ನು ಕುರಿತ ಅಧ್ಯಯನಗಳನ್ನು ಒಳಗೊಂಡಿತ್ತು. ದೇಶ-ದೇಶಗಳ ಮಧ್ಯೆ ಇರುವ ಸಂಘರ್ಷಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತ ಅಧ್ಯಯನಕ್ಕೆ ದಾರಿಯಾಗಿತ್ತು.
4. ಸಂಬಂಧಗಳ ವಿಜ್ಞಾನ: ಈ ಶಿಫಾರಸು ಹೋಮೋಜನಸ್ ಹಾಗೂ ಪರ್ಯಾಯ (ವಿಭಕ್ತ) ಕುಟುಂಬ ಮಾದರಿಗಳಿಗೆ ವಿರುದ್ಧವಾದ ಪ್ರಬಲ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತದೆ. ಸಂಯುಕ್ತ (ಅವಿಭಕ್ತ) ಕುಟುಂಬ ವ್ಯವಸ್ಥೆಯು ಶ್ರೇಷ್ಠವಾದ ಮಾದರಿಯಾಗಿದೆ ಎಂದು ಪರಿಗಣಿಸುವ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ. ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಪರ್ಯಾಯ ಕುಟುಂಬ ಮಾದರಿಗಳನ್ನು ತೆಗೆದುಹಾಕಿ, ಸಂಯುಕ್ತ ಕುಟುಂಬದ ಮಾದರಿಯ ಮೇಲಿನ ಪ್ರಾಮುಖ್ಯತೆಯನ್ನು ಹೆಚ್ಚಿಸುವುದಕ್ಕೆ ಶಿಫಾರಸು ಮಾಡಲಾಗಿದೆ.
ಈ ಪಠ್ಯವು ಇತ್ತೀಚಿನ ಕಾಲದಲ್ಲಿ ಸಂಬಂಧಗಳ ವೈಜ್ಞಾನಿಕ ಅಧ್ಯಯನ, ಡೇಟಿಂಗ್, ಸೋಷಿಯಲ್ ಮೀಡಿಯಾ ಮತ್ತು ಸಂಬಂಧಗಳ ವಿವಿಧ ಮಾದರಿಗಳ ಬಗ್ಗೆ ಸೂಕ್ಷ್ಮ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಇವು ವಿದ್ಯಾರ್ಥಿಗಳಿಗೆ ಸಂಬಂಧಗಳ ಸಂಸ್ಕೃತಿ, ಮಾನವ ಸಂಬಂಧಗಳ ಬದಲಾಗುವ ಸ್ವಭಾವವನ್ನು ಅರಿಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕೊಪ್ಪಳ | ಅಳಿಯದ ಅಸ್ಪೃಶ್ಯತೆ, ದೌರ್ಜನ್ಯ ಪ್ರಕರಣಗಳು; ಕ್ರಮ ಕೈಗೊಳ್ಳಬೇಕಾದವರಾರು?
ಶಿಫಾರಸಿಗಿಂತ ಮೊದಲು ಈ ಪಠ್ಯವು ಸ್ನೇಹ-ಪ್ರೀತಿಯ ಸಂಬಂಧ, ಪೋಷಕರು–ಮಕ್ಕಳು, ಸಹೋದ್ಯೋಗಿಗಳು ಸೇರಿದಂತೆ ಗಂಭೀರ ಸಂಬಂಧಗಳ ಮಾನಸಿಕ ಹಿನ್ನೆಲೆ ಕುರಿತ ಅಧ್ಯಯನವಾಗಿತ್ತು. ಭಾವೋದ್ರೇಕ, ನಿಷ್ಠೆ, ವಿಶ್ವಾಸ, ದ್ವಂದ್ವ ನಿರ್ವಹಣೆ ಮುಂತಾದ ಮಾನಸಿಕ ಅಂಶಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗುತ್ತಿತ್ತು. ಡೇಟಿಂಗ್ ಆ್ಯಪ್‌ಗಳು ಹೇಗೆ ಸಂಬಂಧಗಳ ಸ್ವರೂಪವನ್ನು ಬದಲಾಯಿಸುತ್ತಿವೆ, ಟೆಂಡರ್, ಬಂಬಲ್, ಗ್ರೈಂಡರ್ ಮುಂತಾದ ಆ್ಯಪ್‌ಗಳು ಮಾನವಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರಲಿವೆ, ಏಕ ಪೋಷಕರ ಕುಟುಂಬಗಳು, ಲೈಂಗಿಕ ಅಲ್ಪಸಂಖ್ಯಾತರ ಕುಟುಂಬ ಮಾದರಿ, ಲಿವ್-ಇನ್ ಸಂಬಂಧಗಳು, ಪಾಶ್ಚಾತ್ಯ ಮತ್ತು ಭಾರತೀಯ ಜಗತ್ತಿನಲ್ಲಿ ಈ ಪರ್ಯಾಯ ಮಾದರಿಗಳ ವಿಸ್ತರಣೆ ಮತ್ತು ಸವಾಲುಗಳು, ಲೈಂಗಿಕ ಅಡಚಣೆಗಳು, ಜೆಂಡರ್ ಐಡೆಂಟಿಟಿ ಹಾಗೂ ಅದರ ಸಂಬಂಧದ ಪರಿಣಾಮಗಳು, ಹೋಮೋಸೆಕ್ಶುವಲ್, ಬೈಸೆಕ್ಶುವಲ್ ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಸಂಬಂಧ ಮಾದರಿಗಳ ಕುರಿತು ಸಂವೇದನಾಶೀಲ ಅಧ್ಯಯನ.. ಹೀಗೆ ಮಾನವ ಸಂಬಂಧಗಳ ವಿಶಾಲ ಅಧ್ಯಯನವನ್ನೊಳಗೊಂಡಿತ್ತು.
ಮಾನಸಶಾಸ್ತ್ರ ವಿಭಾಗದ ಕೆಲ ಪ್ರಾಧ್ಯಾಪಕರು, ಈ ಶಿಫಾರಸನ್ನು “ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ರಾಜಕೀಯ ಪ್ರಭಾವ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಮನೋವಿಜ್ಞಾನವು ಮಾನವ ನಡವಳಿಕೆಯ ಅಧ್ಯಯನವಾಗಿದ್ದು, ಅಲ್ಪಸಂಖ್ಯಾತರು ಮತ್ತು ವಿಭಿನ್ನ ಗುಂಪುಗಳ ಅನುಭವಗಳನ್ನು ನಿರ್ಲಕ್ಷಿಸುವುದು ಅನೈತಿಕ” ಎಂದು ಟೀಕಿಸಿದ್ದಾರೆ.
ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯೆ ಡಾ. ಮೊನಾಮಿ ಸಿನ್ಹಾ, ಪಠ್ಯಕ್ರಮದಿಂದ ಲೈಂಗಿಕತೆ, ಜಾತಿ ಮತ್ತು ಧಾರ್ಮಿಕ ಗುರುತುಗಳಂತಹ ವಿಷಯಗಳನ್ನು ತೆಗೆದುಹಾಕುವ ಶಿಫಾರಸಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಈ ಬದಲಾವಣೆಗಳನ್ನು “ಅಕಾಡೆಮಿಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾದವು” ಎಂದು ಹೇಳಿದ್ದಾರೆ. ಪೀಠದ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಪ್ರಸ್ತುತ ಇರುವ ಪಠ್ಯಗಳು ಭಾರತೀಯ ಸಮಾಜದ ಆಧುನಿಕ ತಿಳಿವಳಿಕೆಗೆ ಪ್ರಮುಖವಾದವು. ಪರಿಷ್ಕರಣೆಗಳು ನೈಜ-ಪ್ರಪಂಚದ ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಷಯದ ಪ್ರಸ್ತುತತೆಯನ್ನು ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಡೇಟಿಂಗ್ ಆ್ಯಪ್‌ಗಳು ಮತ್ತು ಪರ್ಯಾಯ ಕುಟುಂಬ ಮಾದರಿಗಳಂತಹ ಸಮಕಾಲೀನ ವಿಷಯಗಳನ್ನು ಪಠ್ಯದಿಂದ ತೆಗೆದುಹಾಕುವ ಶಿಫಾರಸಿಗೆ ಹಲವು ವಿಷಯ ತಜ್ಞರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಹೇಳುವಂತೆ, ಇಂತಹ ವಿಷಯಗಳು ವಿದ್ಯಾರ್ಥಿಗಳಿಗೆ ಆಧುನಿಕ ಸಂಬಂಧಗಳ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಅವುಗಳನ್ನೇ ಪಠ್ಯದಿಂದ ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳು ಸಮಾಜದ ಮೌಲ್ಯಗಳನ್ನು ತಿಳಿದುಕೊಳ್ಳುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪಠ್ಯದಲ್ಲಿ ಪಾಶ್ಚಾತ್ಯ ಉದಾಹರಣೆಗಳನ್ನು ತೆಗೆದುಹಾಕಿ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಭಾರತೀಯ ಪೌರಾಣಿಕ ಕಥೆಗಳನ್ನೇ ಸೇರಿಸಲು ಶಿಫಾರಸು ಮಾಡಲಾಗಿದೆ. ಇದನ್ನು ಕೆಲವರು “ಪಠ್ಯಕ್ರಮದ ಭಾರತೀಕರಣ” ಎಂದು ಕರೆದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳು ಪಠ್ಯಕ್ರಮದಿಂದ ಸೂಕ್ಷ್ಮ ಸಾಮಾಜಿಕ ಮೌಲ್ಯಯುತ ವಿಷಯಗಳನ್ನು ತೆಗೆದುಹಾಕುವ ಶಿಫಾರಸುಗಳು, ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮಾನಸಿಕ ದ್ವಂದ್ವಕ್ಕೆ ಸಿಲುಕಿಸಬಹುದು. ಹಳೆಯ ಮತ್ತು ಹೊಸ ಪಠ್ಯಕ್ರಮಗಳ ಬದಲಾವಣೆಗಳು ವಿದ್ಯಾರ್ಥಿಗಳ ಪಠ್ಯ ಆಯ್ಕೆ ಸ್ವಾತಂತ್ರ್ಯವನ್ನು ಕಡಿಮೆ ಮಾಡಬಹುದು ಇದು ಅವರ ಭವಿಷ್ಯದ ದೃಷ್ಟಿಯಿಂದ ತೀರಾ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಲೈಂಗಿಕತೆ ಮತ್ತು ಲಿಂಗ ವೈವಿಧ್ಯತೆಗಳ ಅಧ್ಯಯನವನ್ನು ಪಠ್ಯಕ್ರಮದಲ್ಲಿ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ:
- ನೆದರ್‌ಲ್ಯಾಂಡ್ಸ್: ಇಲ್ಲಿನ ಶಾಲೆಗಳಲ್ಲಿ ಲೈಂಗಿಕ ವೈವಿಧ್ಯತೆ ಕುರಿತ ಅಧ್ಯಯನವನ್ನು ಪಠ್ಯದಲ್ಲಿ ಸೇರಿಸುವುದು ಕಡ್ಡಾಯವಾಗಿದೆ.
- ಬ್ರೆಜಿಲ್: “ಫೆಡರಲ್ ಯೂನಿವರ್ಸಿಟಿ ಆಫ್ ಮಿನಾಸ್ ಗೆರೈಸ್” ನಲ್ಲಿ ಲಿಂಗ ಮತ್ತು ಲೈಂಗಿಕತೆ ಕುರಿತಾದ ಬಹುಶಾಖಾ ಕಾರ್ಯಕ್ರಮಗಳು ನಡೆಯುತ್ತಿವೆ.
- ಚೀನಾ: ʼಫುಡಾನ್ ಯೂನಿವರ್ಸಿಟಿʼಯಲ್ಲಿ “ಹೋಮೋಸೆಕ್ಶುವಾಲಿಟಿ ಮತ್ತು ಆರೋಗ್ಯ” ಕುರಿತಾದ ಪಠ್ಯವನ್ನು 2003ರಲ್ಲಿ ಪರಿಚಯಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಈ ಉದಾಹರಣೆಗಳು ಲೈಂಗಿಕತೆ ಮತ್ತು ಲಿಂಗ ವೈವಿಧ್ಯತೆ ಕುರಿತ ಅಧ್ಯಯನವನ್ನು ಪಠ್ಯದಲ್ಲಿ ಸೇರಿಸುವ ಮಹತ್ವವನ್ನು ತೋರಿಸುತ್ತವೆ.
ಇದನ್ನೂ ಓದಿ: ಧರ್ಮಸ್ಥಳದ ಸೌಜನ್ಯ ಹಿಂದೂ ಅಲ್ಲವೇ ಶೋಭಾ ಮೇಡಂ? ಈ ಪ್ರಕರಣವನ್ನು ಮರು ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ?
ವಿದ್ಯಾರ್ಥಿಗಳ ಹಕ್ಕುಗಳ ದೃಷ್ಟಿಕೋನದಿಂದ, ಪಠ್ಯಕ್ರಮದಲ್ಲಿ ಲೈಂಗಿಕತೆ, ಜಾತಿ ಮತ್ತು ಧಾರ್ಮಿಕ ಗುರುತುಗಳಂತಹ ವಿಷಯಗಳನ್ನು ಒಳಗೊಂಡಿರುವುದು ಬಹುಮುಖ್ಯವಾಗಿದೆ. ಇವುಗಳು ವಿದ್ಯಾರ್ಥಿಗಳಿಗೆ ವೈವಿಧ್ಯತೆ, ಸಹಿಷ್ಣುತೆ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ನೀಡುತ್ತವೆ. ಯುನೆಸ್ಕೋ ಮತ್ತು ಯುಎನ್‌ಎಫ್‌ಪಿಎ ಪ್ರಕಾರ, ಸಮಗ್ರ ಲೈಂಗಿಕ ಶಿಕ್ಷಣವು ಯುವ ಜನರಿಗೆ ಆರೋಗ್ಯಕರ, ಮಾಹಿತಿಯುಕ್ತ ಮತ್ತು ಗೌರವಪೂರ್ಣ ಜೀವನ ನಡೆಸಲು ಅಗತ್ಯವಾದ ಜ್ಞಾನ, ಮನೋಭಾವ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ಪಠ್ಯಕ್ರಮದಿಂದ ಲೈಂಗಿಕತೆ, ಜಾತಿ ಮತ್ತು ಧಾರ್ಮಿಕ ಗುರುತುಗಳಂತಹ ವಿಷಯಗಳನ್ನು ತೆಗೆದುಹಾಕುವ ಶಿಫಾರಸುಗಳು, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವಿಗೆ ಹಾನಿಕಾರಕವಾಗಬಹುದು. ಅಂತಾರಾಷ್ಟ್ರೀಯ ಅನುಭವಗಳು ಮತ್ತು ತಜ್ಞರ ಅಭಿಪ್ರಾಯಗಳು, ಈ ವಿಷಯಗಳನ್ನು ಪಠ್ಯದಲ್ಲಿ ಉಳಿಸುವ ಮಹತ್ವವನ್ನು ಸಾರಿ ಹೇಳುತ್ತಿವೆ.
ದೆಹಲಿ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ಶಿಫಾರಸುಗೊಂಡಿರುವ ಈ ಪಠ್ಯ ಬದಲಾವಣೆಗಳು ನಿಜಕ್ಕೂ ಶೈಕ್ಷಣಿಕ ತಾತ್ವಿಕತೆಯ ಹೊರೆಯಲ್ಲಿಯೇ ಜಾರಿಯಾಗುತ್ತಿರುವಂತಿದೆ. ಲೈಂಗಿಕತೆಯ ಮನೋವಿಜ್ಞಾನ, ವೈವಿಧ್ಯತೆಯ ಅರಿವು, ಶಾಂತಿಯ ಮನೋವಿಜ್ಞಾನ ಮತ್ತು ಸಂಬಂಧಗಳ ವಿಜ್ಞಾನ ಇವೆಲ್ಲವೂ ತಾತ್ವಿಕ ಸಬಲೀಕರಣ, ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಗುರಿ ಹೊಂದಿವೆ. ಇವುಗಳ ಬದಲಿಗೆ ಸಂಯುಕ್ತ ಕುಟುಂಬ, ಪೌರಾಣಿಕ ಉದಾಹರಣೆಗಳು ಅಥವಾ ಏಕವ್ಯವಸ್ಥಿತ ದೃಷ್ಟಿಕೋನಗಳನ್ನು ಪಠ್ಯದಲ್ಲಿ ಪ್ರತಿಷ್ಠಾಪಿಸುವುದರಿಂದ, ಸಮಾಜದ ಬಹು ಆಯಾಮದ ಯಥಾರ್ಥಗಳನ್ನು ನಿರ್ಲಕ್ಷಿಸುವ ಅಪಾಯ ಎದುರಾಗುತ್ತದೆ.
ಅಂತಾರಾಷ್ಟ್ರೀಯವಾಗಿ ಅನೇಕ ವಿಶ್ವವಿದ್ಯಾಲಯಗಳು ಲೈಂಗಿಕತೆ, ಸಂಬಂಧಗಳ ವೈವಿಧ್ಯತೆ, ಹಾಗೂ ಜಾತ್ಯತೀತ ಚಿಂತನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿವೆ. ವಿದ್ಯಾರ್ಥಿಗಳ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಈ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕುವುದು ಜ್ಞಾನಾನ್ವೇಷಣೆಯ ಸ್ವಾತಂತ್ರ್ಯವನ್ನೂ, ಯುವ ಮನಸ್ಸುಗಳ ಸಂವೇದನೆ ಹಾಗೂ ವಿಮರ್ಶಾತ್ಮಕ ಚಿಂತನೆಯವನ್ನೂ ಕುಗ್ಗಿಸುತ್ತದೆ ಎನ್ನಬಹುದು.
ಇದು ಶೈಕ್ಷಣಿಕ ಪ್ರಜಾಪ್ರಭುತ್ವದ ಕಣ್ಣುಮುಚ್ಚಿದ ನಿರಾಕರಣೆ ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಗೆ ನೀಡಬೇಕಾದ ಮಾನವೀಯ ಶಿಕ್ಷಣದ ಘನತೆಯ ನಿಷೇಧವೂ ಹೌದು. ಪಠ್ಯ ಪುನರಚನೆ ಪ್ರಕ್ರಿಯೆಯಲ್ಲಿ ತಜ್ಞರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂವಾದಾತ್ಮಕ ಪಾಲ್ಗೊಳ್ಳುವಿಕೆಯಿಂದ ಮಾತ್ರ ಈ ಬದಲಾವಣೆಗಳನ್ನು ಸಮಗ್ರವಾಗಿ ಸಮಾಲೋಚಿಸಲು ಸಾಧ್ಯವಾಗುತ್ತದೆ.
ಈ ಬದಲಾವಣೆಗಳು ಜಾರಿಯಾದರೆ, ನಾವು ಪೋಷಿಸುವ ಶಿಕ್ಷಣದ ರೂಪವೇ ಬದಲಾಗಬಹುದು. ಈ ಬದಲಾವಣೆಗಳು ಸಾಂವಿಧಾನಿಕ ಮೌಲ್ಯಾಧಾರಿತವಾಗಿರಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಹೊಣೆ ಇಂದಿನ ಶಿಕ್ಷಣ ನೀತಿ ನಿರ್ಣಯಕರ್ತರ ಮೇಲಿದೆ.